ಶಾಸಕ ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣದಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಿಲ್ಲ: ಜಗದೀಶ್ ಶೆಟ್ಟರ್

Update: 2023-03-05 13:17 GMT

ಕಲಬುರಗಿ, ಮಾ. 5: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚದ ಹಣ ಪಡೆದಿರುವ ಪ್ರಕರಣದಿಂದ ರಾಜ್ಯದಲ್ಲಿ ಬಿಜೆಪಿಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ''ಮಾಡಾಳ್ ಪುತ್ರ ಪ್ರಶಾಂತ್ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ, ಮಾಡಾಳ್ ಮೇಲೆ ಕಾನೂನು ರೀತಿಯಲ್ಲಿ ಏನು ಕ್ರಮ ಆಗಬೇಕು, ಆಗುತ್ತದೆ. ತಾವು ಸಿಕ್ಕಿಬೀಳುವ ಭೀತಿಯಿಂದ ರದ್ದುಗೊಳಿಸಿದ್ದ ಲೋಕಾಯುಕ್ತ ಸಂಸ್ಥೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಮರು ಸ್ಥಾಪಿಸಿದ್ದೇವೆ. ಜೊತೆಗೆ ಸ್ವಾಯತ್ತತೆಯನ್ನೂ ನೀಡಿದ್ದೇವೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ''  ಎಂದು ಹೇಳದರು. 

'ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯು ಅಭೂತಪೂರ್ವ ಜನಬೆಂಬಲದ ಜೊತೆ ನಡೆಯುತ್ತಿದೆ. ಬಿಜೆಪಿ ರೋಡ್ ಶೋಗಳಲ್ಲಿ 15ರಿಂದ 20 ಸಾವಿರ ಜನರು ಸೇರುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ಇದು ಬಿಜೆಪಿಯ ಮೇಲಿನ ಪ್ರೀತಿ, ವಿಶ್ವಾಸ, ಗೆಲುವಿನ ಸಂಕೇತ' ಎಂದು ಬಣ್ಣಿಸಿದರು.

'ಕೇಂದ್ರ- ರಾಜ್ಯ ಸರಕಾರಗಳ ಸಾಧನೆ, ಮೋದಿಜಿ ಅವರ ವ್ಯಕ್ತಿತ್ವ ಮತ್ತು ಅವರ ಸಾಧನೆಗೆ ಸಿಗುತ್ತಿರುವ ಬೆಂಬಲ ಇದು ಎಂದು ವಿಶ್ಲೇಷಿಸಿದರು. 17ರ ವರೆಗೆ ಯಾತ್ರೆ ಸಂಚರಿಸಲಿದೆ. 40ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಭೇಟಿ ಕೊಡಲಾಗುವುದು' ಎಂದು ಅವರು ತಿಳಿಸಿದರು.

'2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 130ರಿಂದ 140ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ. ಮೋದಿ ಅವರಿಗೆ ಪರ್ಯಾಯ ನಾಯಕತ್ವ ಇಲ್ಲದ ಸ್ಥಿತಿ ಇದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇನ್ನೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
 

Similar News