ಟಿಕೆಟ್‌ಗೆ ಕೊನೆಯವರೆಗೂ ಕಾಯುತ್ತೇನೆ, ಸಿಗದಿದ್ದರೆ ಸ್ಪರ್ಧೆ ಖಚಿತ: ಜೆಡಿಎಸ್‌ ಮುಖಂಡ ತಗ್ಗಹಳ್ಳಿ ವೆಂಕಟೇಶ್‌

Update: 2023-03-05 13:29 GMT

ಮಂಡ್ಯ,  ಮಾ.5: 30 ವರ್ಷಗಳಿಂದ ಜೆಡಿಎಸ್‌ ಪಕ್ಷವನ್ನು ಕಟ್ಟಿ ಬೆಳೆಸಿರುವ ನನಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ಗೆ ಕೊನೆಯವರೆಗೂಕಾಯುತ್ತೇನೆ. ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಸ್ಪರ್ಧೆ ಖಚಿತ ಎಂದು ಟಿಕೆಟ್‌ ಆಕಾಂಕ್ಷಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಹೇಳಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ಕೊಡಿಯಾಲ ಗ್ರಾಮದ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ರವಿವಾರ ಏರ್ಪಡಿಸಿದ್ದ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಆಶೀರ್ವಾದಿಂದ ಜಿಪಂ, ತಾಪಂ, ಗ್ರಾಪಂ ಸೇರಿ 6 ಚುನಾವಣೆಗಳಲ್ಲಿ ಗೆದ್ದು ಜನಸೇವೆ ಮಾಡಿದ್ದೇನೆ. ನನಗೆ ರಾಜಕೀಯ ಹಿನ್ನೆಲೆ ಇರಲಿಲ್ಲ. ಕ್ಷೇತ್ರದ ಜನರು, ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತರು ನನಗೆ ಬೆಂಬಲವಾಗಿ ನಿಂತರು ಎಂದರು.

ಹಲವಾರು ಬಾರಿ ಜೆಡಿಎಸ್‌ ನಾಯಕರಲ್ಲಿ ಮನವಿ ಮಾಡಿ ಪಕ್ಷ ಸೇವೆಗೆ, ಸಂಘಟನೆ ಸೂಕ್ತ ಅವಕಾಶ ಕೋರಿದ್ದೆ. ಅಲ್ಲದೇ, 2 ಬಾರಿ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಅವಕಾಶದಿಂದ ವಂಚಿತನಾದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದವರೆಗೂ ಟಿಕೆಟ್‌ಗಾಗಿ ಹೋರಾಟ ಮಾಡಿದೆ. ಆದರೆ, ನಾಯಕರು ಸಮಾಧಾನ ಮಾಡಿ ಪಕ್ಷ ನಿಷ್ಠೆ ಇಲ್ಲದವರಿಗೆ ಟಿಕೆಟ್‌ ನೀಡಿದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಳೆದ ಕೆಲ ದಿನಗಳ ಹಿಂದೆ ಆರತಿ ಉಕ್ಕಡದಲ್ಲಿ ನಡೆದ ನಿಷ್ಟಾವಂತರ ಸಭೆಯಲ್ಲಿ ಜನರೇ ಖರ್ಚು ಮಾಡಿ ಸಭೆ ಆಯೋಜಿಸಿದ್ದರು. ಸಂತೆಕಸಲಗೆರೆ ಭೂಮಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಗೂ ಹಾಗೂ ಇಂದು ನಡೆಯುತ್ತಿರುವ ಸಭೆಗೂ ಜನರೇ ಖರ್ಚು ವೆಚ್ಚ ಭರಿಸಿದ್ದಾರೆ. ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯ ನಡುವೆ ನನ್ನಮೇಲೆ ಅಭಿಮಾನಿಗಳು, ಜನರು ಇಟ್ಟಿರುವ ಪ್ರೀತಿಗೆ ಚಿರಋುಣಿಯಾಗಿರುತ್ತೇನೆ ಎಂದರು.

ಹಣ ಬಲವುಳ್ಳ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್‌ಬಾಬು ಅವರು ನನ್ನ ಸ್ಪರ್ಧೆಯಿಂದ ವಿಚಲಿತರಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಅಪಪ್ರಚಾರಗಳಿಗೆ ಕಿವಿಗೊಡಬಾರದು. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಅರಕೆರೆಯ ಈ ಎರಡು ಕುಟುಂಬಗಳೇ ಹಲವಾರು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಶಾಸಕರಾಗಿ ಆಡಳಿತ ಮಾಡಿದ್ದಾರೆ. ಆದರೆ, ಕ್ಷೇತ್ರ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಿಲ್ಲ. ಹೀಗಾಗಿ ಜನರು ಬದಲಾವಣೆ ಬಯಸಿದ್ದಾರೆ.ಜನರ ನಡುವೆ ಇದ್ದು ಹೋರಾಟ ನಡೆಸಿಕೊಂಡು ಬಂದಿರುವ ನನ್ನ ಬಗ್ಗೆ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಚ್.ಸಿ. ಮಂಜುನಾಥ್, ಸಿದ್ದರಾಜು, ಪುಟ್ಟೇಗೌಡ, ಜವರೇಗೌಡ, ಸುರೇಶ್, ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Similar News