ಈ ಬಾರಿಯ ಚುನಾವಣೆಯಲ್ಲೂ ಕರ್ನಾಟಕ ಮತ್ತೊಮ್ಮೆ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗಲಿದೆ: ಮಲ್ಲಿಕಾರ್ಜುನ ಖರ್ಗೆ

ಕೊರಟಗೆರೆಯಲ್ಲಿ ರಾಜೀವ್ ಭವನ ಉದ್ಘಾಟಿಸಿದ ಎಐಸಿಸಿ ಅಧ್ಯಕ್ಷ

Update: 2023-03-05 14:21 GMT

ತುಮಕೂರು,ಮಾ.05: ಜಾತಿ, ಧರ್ಮದ ಹೆಸರಲ್ಲಿ ದೇಶದ ಜನರಲ್ಲಿ ಕೋಮುವಾದವನ್ನು ಭಿತ್ತುವುದರ ಅಶಾಂತಿ ಉಂಟುಮಾಡುತ್ತಿರುವ, ಭ್ರಷ್ಟ, ಬಡವರ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಬಿಜೆಪಿ ಸರಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಕಿತ್ತೊಗೆದು,ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ನೇತೃತ್ವದಲ್ಲಿ  ಕೊರಟಗೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಂಗ್ರೆಸ್ ಕಚೇರಿ ರಾಜೀವ್ ಭವನವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಪರ್ವ ಕರ್ನಾಟಕದಿಂದಲೇ ಆರಂಭವಾಗಬೇಕು. ಹಲವು ಹೊಸತುಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ. ಅದೇ ರೀತಿ ಈ ಬಾರಿಯ ಚುನಾವಣೆಯಲ್ಲೂ ಕರ್ನಾಟಕ ಮತ್ತೊಮ್ಮೆ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗಲಿದೆ ಎಂಬ ನಂಬಿಕೆ ವಿಶ್ವಾಸ ನನಗಿದೆ ಎಂದರು.

ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರಕಾರದ ಸಾಧನೆ ಶೂನ್ಯ, ಪ್ರಧಾನಿ ಮೋದಿ ಅವರು ನೀಡಿದ್ದಯಾವುದೇ ಭರವಸೆಗಳು ಈಡೇರಿಸಿಲ್ಲ.ಬದಲಾಗಿ ಉದ್ಯೋಗಗಳು ಕಡಿತಗೊಂಡು ಲಕ್ಷಾಂತರ ಜನ ಬೀದಿಗೆ ಬಿದ್ದರು, ಮೋದಿ ಅವರು, ಸರಕಾರದ ವಾಹನ ಹಾಗೂ ಇನ್ನಿತರ ಸೌಲಭ್ಯಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆ ಕರ್ನಾಟಕಕ್ಕೆ ಆಗಮಿಸಿ ನನ್ನ ಹಾಗೂ ಸೋನಿಯಾಗಾಂಧಿ ವಿರುದ್ದ ಟಿಕೆಗಳನ್ನು ಮಾಡುತ್ತಾರೆಯೇ ಹೊರತು ಯಾವುದೇ ಅಭಿವೃದ್ದಿ ಕುರಿತು ಮಾತನಾಡುವುದಿಲ್ಲ, ಅವರು ಮಾಡಿದ  ಅಭಿವೃದ್ದಿ ಶೂನ್ಯ. ರಾಜ್ಯ ಬಿಜೆಪಿ ಸರಕಾರರ 40% ಗೆ ಹೆಸರುವಾಸಿ, ಸರಕಾರದ ಸಚಿವರು, ಶಾಸಕರು ಕಮೀಷನ್ ದಂಧೆಯಿಂದಾಗಿ ಗುತ್ತಿಗೆದಾರರ ಕುಟುಂಬಗಳು ಬೀದಿಗೆ ಬೀಳುತ್ತಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ದ ಕಿಡಿ ಕಾರಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪಕ್ಷ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ,ನೌಕರಿ ಪಡೆಯಲು ಪದವಿ ಬೇಕಿಲ್ಲ, ಸರಕಾರಕ್ಕೆ ಲಂಚ ಕೊಡಲು ಆಸ್ತಿ ಇರಬೇಕು ಎಂಬ ಭಾವನೆಯನ್ನು ಬಿಜೆಪಿ ಜನರಲ್ಲಿ ಬೆಳೆಸುತ್ತಿದೆ. ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಉತ್ತುಂಗಕ್ಕೇರಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.ಬೊಮ್ಮಾಯಿ ಸರಕಾರದಲ್ಲಿನ ಭ್ರಷ್ಟಾಚಾರದ ಪ್ರಮಾಣದ ಬಗ್ಗೆ ಸಂಪೂರ್ಣ ವರದಿ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ರಾಜ್ಯ ಸರಕಾರದ ಶೇ 40 ಪಸೆರ್ಂಟ್ ಕಮಿಷನ್ ಸರಕಾರದಲ್ಲಿ ಭ್ರಷ್ಟಾಚಾರವು ಆವರಿಸಿರುವ ರೀತಿ ಇಡೀ ರಾಜ್ಯವನ್ನೇ ನಾಚಿಸುವಂತೆ ಮಾಡಿದೆ.ಕರ್ನಾಟಕ ಸೋಪ್ಸ್ ಅಂಡ್ ಡಿಟಜೆರ್ಂಟ್ಸ್ ಲಿಮಿಟೆಡ್ ಅಧ್ಯಕ್ಷ ಹಾಗೂ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ 40 ಲಕ್ಷ ರೂಪಾಯಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನ್ನು ನಾವು ನೋಡಿದ್ದೇವೆ.ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.

ಕೊರಟಗೆರೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ,ಇವತ್ತಿನ ರಾಜೀವ ಭವನದ ಉದ್ಘಾಟನಾ ಸಮಾರಂಭಕ್ಕೆ, ಎಐಸಿಸಿ ಅಧ್ಯಕ್ಷರು ಆಗಮಿಸಿದ್ದು ನಮ್ಮೆಲ್ಲರಿಗೂ ಅತೀವ ಸಂತಸ ತಂದಿದೆ, ಈ ಭವನ ಯಾರೊಬ್ಬರ ಸ್ವತ್ತು ಅಲ್ಲ, ಇದು ಕಾಂಗ್ರೆಸ್ ಪಕ್ಷದ ದೇಗುಲ.ಭಾರತಕ್ಕೆ ಗಟ್ಟಿ ಬುನಾದಿ ಹಾಕಿದ ಪಕ್ಷ ಅದು ಕಾಂಗ್ರೆಸ್ ಪಕ್ಷ, ಕಾಂಗ್ರಸ್‍ನ ಕೊಡುಗೆ ದೇಶಕ್ಕೆ ಅಪಾರ,ಭ್ರಷ್ಟ,ಕೋಮುವಾದಿ ಬಿಜೆಪಿ ಸರಕಾರದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದೆ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಈ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ,ಡಬಲ್ ಇಂಜಿನ್ ಸರಕಾರ ಜನರನ್ನೂ ದಾರಿ ತಪ್ಪಿಸಿ ಮೂರ್ಖರನ್ನಾಗಿಸುತ್ತಿದೆ, ಬಿಜೆಪಿ ಸರಕಾರ ಬಂದಾಗಿನಿಂದಲೂ ಒಂದರ ಮೇಲೊಂದು ಹಗರಣಗಳು ಬೆಳಕಿಗೆ ಬರುತ್ತಿವೆ.ಈ ಬಾರಿ ಈ ಭ್ರಷ್ಟ ಬಿಜೆಪಿ ಸರಕಾರವನ್ನು ಮನೆಗೆ ಕಳುಹಿಸಿ, ನಮ್ಮ ಕಾಂಗ್ರೆಸ್ ಸರಕಾರ ಬರಲಿಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. ಡಾ.ಜಿ.ಪರಮೇಶ್ವರ ಅವರನ್ನು ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವುದರ ಮೂಲಕ ಅವರ ಕೈ ಬಲಪಡಿಸಬೇಕು, ಹಾಗೇ ಅವರ ನೇತೃತ್ವ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಚ್.ಮುನಿಯಪ, ಬಿ.ಎಲ್.ಶಂಕರ್, ಸಲೀಂ ಅಹಮ್ಮದ್, ಸತೀಶ್ ಜಾರಕಿಹೊಳಿ,ಎಲ್.ಹನುಮಂತಯ್ಯ, ರಾಣೀಸತೀಶ್,ಎಚ್.ಆಂಜನೇಯ, ಜಿಲ್ಲೆಯ ಮುಖಂಡರಾದ ಕೆ.ಎನ್.ರಾಜಣ್ಣ, ವೆಂಕಟರಮಣಪ್ಪ, ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಬ್ಲಾಕ್ ಅಧ್ಯಕ್ಷ ಅಶ್ವಥ ನಾರಾಯಣ್, ಗ್ರಾಮಾಂತರ ಅಧ್ಯಕ್ಷರಾದ ಅರಕೆರೆ ಶಂಕರ್ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.

ಕ್ಷೇತ್ರದ ಕಾಂಗ್ರೆಸ್‍ನ ಮುಂಚೂಣಿ ಘಟಕಗಳ ಪಧಾಧಿಕಾರಿಗಳು, ಜಿ.ಪಂ. ತಾ.ಪಂ ಮತ್ತು ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯ್ತಿ ಮಾಜಿ ಮತ್ತು ಹಾಲಿ ಚುನಾಯಿತ ಜನಪ್ರತಿನಿಧಿಗಳು, ಸಹಕಾರ ಕ್ಷೇತ್ರದ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಎಲ್ಲಾ ಪಧಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ರೋಡ್ ಶೋ: ಕೊರಟಗೆರೆ ಬಸ್ ನಿಲ್ದಾಣದಿಂದ ಹೊರಟ ಪ್ರಜಾದ್ವನಿ ಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಸ್‍ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ.ಜಿ.ಪರಮೇಶ್ವರ ಹಾಗೂ ಇನ್ನೂ ಹಲವು ನಾಯಕರು ಇದ್ದರು. ರಸ್ತೆಯ ಉದ್ದಕ್ಕೂ ಕಾಂಗ್ರೆಸ್‍ಕಾರ್ಯಕರ್ತರ ಹರ್ಷೊದ್ದಾರ ಮುಗಿಲು ಮುಟ್ಟಿತು.

Similar News