ಪಿಯುಸಿ ಮರುಮೌಲ್ಯಮಾಪನ | 1 ಅಂಕ ಹೆಚ್ಚಾದರೂ ಪರಿಗಣಿಸಲಾಗುವುದು: ಸರಕಾರ ಆದೇಶ
ಬೆಂಗಳೂರು, ಮಾ.5: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿ, ಉತ್ತರ ಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಬಂದರೂ ಅದನ್ನು ಪರಿಗಣನಗೆ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರಕಾರವು ಅಂತಿಮ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಪಿಯುಸಿ ಪಬ್ಲಿಕ್ ಪರೀಕ್ಷೆಯ ನಿಯಮಾವಳಿ 1997ರ 29ನೆ ಅಧಿನಿಯಮಕ್ಕೆ ರಾಜ್ಯ ಸರಕಾರವು ತಿದ್ದುಪಡಿಯನ್ನು ತಂದಿದೆ. ಉತ್ತರ ಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಕನಿಷ್ಟ ಒಂದು ಅಂಕ ಹೆಚ್ಚು ಬಂದರೂ, ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಅಲ್ಲದೆ, ಮರುಮೌಲ್ಯಮಾಪನ ಶುಲ್ಕವನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದೆ.
ಒಂದು ವೇಳೆ ಮರುಮೌಲ್ಯಮಾಪನದಲ್ಲಿ ಒಂದು ಅಂಕ ಕಡಿಮೆ ಬಂದರೂ ಮರುಮೌಲ್ಯಮಾಪನದ ಅಂಕವನ್ನೇ ಅಂತಿಮವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಹಾಗೂ ಮರುಮೌಲ್ಯಮಾಪನದ ಶುಲ್ಕವನ್ನು ಹಿಂತಿರುಹಿಸುವುದಿಲ್ಲ ಎಂದು ತಿಳಿಸಿದೆ.
ಒಂದು ವೇಳೆ ಮರುಮೌಲ್ಯಮಾಪನದ ನಂತರ ಒಟ್ಟು ಅಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಇದ್ದರೆ, ಅದೇ ಅಂಕಗಳನ್ನು ಅಂತಿಮಗೊಳಿಸಲಾಗುವುದು. ಆದರೆ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ ಎಂದು ತಿಳಿಸಿದೆ.
ಮರುಮೌಲ್ಯಮಾಪನದ ಅಂಕಗಳನ್ನೇ ಅಂತಿಮಗೊಳಿಸುವ ಕಾರಣದಿಂದ ಮರುಮೌಲ್ಯಮಾಪನದಲ್ಲಿ ನೀಡಲಾದ ಪರಿಷ್ಕೃತ ಅಂಕಗಳನ್ನು ಒಳಗೊಂಡಂತೆ ನೂತನ ಅಂಕಪಟ್ಟಿಯನ್ನು ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.