ಅರಸೀಕೆರೆ: ಮೇಕಪ್ ಎಡವಟ್ಟಿನಿಂದಾಗಿ ಮದುವೆಯೇ ರದ್ದು!

Update: 2023-03-05 16:16 GMT

ಹಾಸನ: ಸ್ಥಳೀಯ ಬ್ಯೂಟೀಶಿಯನ್‌ ಮಾಡಿದ ಎಡವಟ್ಟಿನಿಂದಾಗಿ ವಧುವಿನ ಮದುವೆಯೇ ರದ್ದುಗೊಂಡಿದೆ ಎನ್ನಲಾದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ವರದಿಯಾಗಿದೆ.  

ಜಿಲ್ಲೆಯ ಅರಸೀಕೆರೆ ತಾಲೂಕಿನ ಯುವತಿಗೆ ಮಾ.2 ಕ್ಕೆ ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆಗೆ ತಯಾರಿ ಕೂಡ ನಡೆದಿತ್ತು. ಇದಕ್ಕೂ ಮುನ್ನ ಮದುಮಗಳು ಬ್ಯೂಟಿ ಪಾರ್ಲರ್‌ಗೆ ಹೋಗಿ ಮದುವೆ ದಿನದ ಮೇಕಪ್‌ಗೆ ಆರ್ಡರ್ ಮಾಡಿದ್ದರು.  ಅಲ್ಲದೇ,  ಅಲ್ಲೇ ಫೇಷಿಯಲ್ ಸಹ ಮಾಡಿಸಿಕೊಂಡರು.  ಆದರೆ, ಅದರಿಂದ ವಧುವಿನ ಮುಖ ಇಡೀ ಕಪ್ಪಾಗಿ ಸುಟ್ಟಂತೆ ಆಗಿದೆ ಎನ್ನಲಾಗಿದೆ. 

ಇದರಿಂದ ಆತಂಕಗೊಂಡ ಕುಟುಂಬದ ಸದಸ್ಯರು ಯುವತಿಯನ್ನು ಕೂಡಲೇ ನಗರದ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮದುಮಗಳ ಮುಖ ಸಂಪೂರ್ಣ ವಿರೂಪಗೊಂಡಿರುವುದರಿಂದ ನಿಶ್ಚಯವಾಗಿದ್ದ ಮದುವೆ ರದ್ದಾಗಿದೆ ಎಂದು ವರದಿಯಾಗಿದೆ.

ಮಹಿಳೆಯ ಕುಟುಂಬದವರು ಬ್ಯೂಟಿ ಪಾರ್ಲರ್ ಮಾಲಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಪೊಲೀಸರು ಮಾಲಕರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Similar News