ಲಿಂಬಾವಳಿ ಹಿಡಿತ ತಪ್ಪಿಸಲು ಹೊಸ ದಾರಿ ಹುಡುಕಿದೆಯಾ ಕಾಂಗ್ರೆಸ್?

ಮಹದೇವಪುರ ವಿಧಾನಸಭಾ ಕ್ಷೇತ್ರ

Update: 2023-03-06 05:24 GMT

ಹ್ಯಾಟ್ರಿಕ್ ಜಯ ಕಂಡ ಲಿಂಬಾವಳಿ ಪಾಲಿಗೆ ಕಾದಿದೆಯಾ ಕಷ್ಟ ಈ ಬಾರಿ? ಬಿಜೆಪಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಹುಡುಕಿಕೊಂಡಿದೆಯಾ ಹೊಸ ರಹದಾರಿ? ಮಳೆಬಂದರೆ ಮುಳುಗುವ ಮಹದೇವಪುರದಲ್ಲಿ ಮತದಾರರ ದೂರುಗಳೇನು? ನೂರೆಂಟು ಸಮಸ್ಯೆಗಳ ಕ್ಷೇತ್ರದಲ್ಲಿ ಏನಿರಲಿದೆ ಮತದಾರರ ತೀರ್ಮಾನ?

ಬೆಂಗಳೂರಿನ ಪ್ರಮುಖ ವಿಧಾನಸಭಾ ಕ್ಷೇತ್ರಗಳ ಪೈಕಿ ಮಹದೇವಪುರ ಕ್ಷೇತ್ರವೂ ಒಂದು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ಇದು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಶಾಪಿಂಗ್ ಮಾಲ್‌ಗಳು, ಹಲವು ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿವೆ. ಬಹುಪಾಲು ಐಟಿ  ಕಂಪೆನಿಗಳು ಇರುವುದು ಇಲ್ಲಿಯೇ. ಬಿಬಿಎಂಪಿಯ ಹೂಡಿ, ಗರುಡಾಚಾರ್ ಪಾಳ್ಯ, ಕಾಡುಗೋಡಿ, ವೈಟ್‌ಫೀಲ್ಡ್, ಹಗದೂರು, ದೊಡ್ಡನೆಕ್ಕುಂಡಿ, ಮಾರತ್ ಹಳ್ಳಿ, ವರ್ತೂರು, ದೊಡ್ಡಕನ್ನಲಿ, ಬೆಳ್ಳಂದೂರು ಸುತ್ತಮುತ್ತಲ ಪ್ರದೇಶಗಳು ಇದರ ವ್ಯಾಪ್ತಿಯಲ್ಲಿವೆ. ನಗರ ಹೊರವಲಯದ 11 ಗ್ರಾಮಪಂಚಾಯತ್‌ಗಳನ್ನೂ ಈ ಕ್ಷೇತ್ರ ಒಳಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದ ಪ್ರದೇಶಗಳು 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಮಹದೇವಪುರ ಕ್ಷೇತ್ರಕ್ಕೆ ಸೇರಿದವು.

ಲಿಂಬಾವಳಿ ಹಿಡಿತ

ಸದ್ಯಕ್ಕೆ ಮಹದೇವಪುರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 2008, 2013 ಹಾಗೂ 2018ರಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವವರು ಅರವಿಂದ ಲಿಂಬಾವಳಿ. ಆದರೆ ಲಿಂಬಾವಳಿ ಬಗ್ಗೆ ಕ್ಷೇತ್ರದ ಜನತೆ ಅಸಮಾಧಾನವನ್ನೂ ಹೊಂದಿದ್ದಾರೆ. ಕ್ಷೇತ್ರದಲ್ಲಿ ಅವರೇ ಇಷ್ಟು ಕಾಲ ಇದ್ದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳಿವೆ. ಕ್ಷೇತ್ರದ ನಿವಾಸಿಗಳಂತೂ ಇಲ್ಲಿನ ಸಮಸ್ಯೆಗಳ ವಿಚಾರದಲ್ಲಿ ನೇರವಾಗಿ ಲಿಂಬಾವಳಿ ಯನ್ನೇ ದೂರಿದ್ದು ಅನೇಕ ಬಾರಿ ವರದಿಯಾಗಿದೆ. ರಾಜಕಾಲುವೆ ಮತ್ತು ಚರಂಡಿಗಳ ಕಳಪೆ ಕಾಮಗಾರಿ ಆರೋಪವನ್ನೂ ಜನರು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆಯೂ, ಲಿಂಬಾವಳಿ ಈ ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ವಿವಾದಗಳು

ಕಳೆದ ಬಾರಿ ಮಳೆ ಅನಾಹುತವಾಗಿದ್ದಾಗ ವೈಟ್ ಫೀಲ್ಡ್ ಕೋಡಿ ಸರ್ಕಲ್ ಬಳಿಯ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿದ್ದಾಗ, ರಾಜಕಾಲುವೆಗೆ ಹೊಂದಿಕೊಂಡಿದ್ದ ಕಟ್ಟಡದ ಕೆಲ ಭಾಗ ತೆರವುಗೊಳಿಸುವ ಸಂದರ್ಭದಲ್ಲಿ ಸ್ಪಷ್ಟನೆ ನೀಡಲು ಮಹಿಳೆಯೊಬ್ಬರು ಮುಂದಾದಾಗ ಲಿಂಬಾವಳಿ ಆ ಮಹಿಳೆಯ ಕೈಯಿಂದ ದಾಖಲೆ ಕಿತ್ತುಕೊಳ್ಳಲು ಪ್ರಯತ್ನಿ ಸಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ವಿಪಕ್ಷ ಮಾತ್ರವಲ್ಲ, ಬಿಜೆಪಿ ನಾಯಕರ ಕೆಂಗಣ್ಣಿಗೂ ಕಾರಣವಾಗಿತ್ತು.
ಉದ್ಯಮಿ ಪ್ರದೀಪ್ ಎಂಬವರು ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡದ್ದೂ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಲಿಂಬಾವಳಿ ಬಂಧನಕ್ಕೂ ಪ್ರತಿಪಕ್ಷಗಳೂ ಆಗ್ರಹಿಸಿದ್ದವು. ಲಿಂಬಾವಳಿ ಪುತ್ರಿ ಟ್ರಾಫಿಕ್ ಪೊಲೀಸ್‌ಗೆ ಬೆದರಿಕೆಯೊಡ್ಡಿದ್ದು ಕೂಡ ದೊಡ್ಡ ಸುದ್ದಿಯಾಗಿತ್ತು. ಕಡೆಗೆ ಪುತ್ರಿಯ ವರ್ತನೆ ಬಗ್ಗೆ ಲಿಂಬಾವಳಿ ಸಾರ್ವಜನಿಕ ವಾಗಿ ಕ್ಷಮೆಯಾಚಿಸಿದ್ದರು.

ಕಾಂಗ್ರೆಸ್ ರಣತಂತ್ರ

ಹ್ಯಾಟ್ರಿಕ್ ಜಯದ ಹೆಗ್ಗಳಿಕೆಯಿರುವ ಲಿಂಬಾವಳಿಗೆ ಈ ಸಲ ಅಖಾಡದಲ್ಲಿ ಪ್ರಬಲ ಪೈಪೋಟಿ ಎದುರಾಗಲಿದೆ ಎನ್ನಲಾಗುತ್ತಿದೆ. ಇದ್ಕೆ ಕಾರಣ, ಕಾಂಗ್ರೆಸ್ ಹೆಣೆಯುತ್ತಿರುವ ವ್ಯೆಹ. ಕಳೆದ ಮೂರು ಬಾರಿಯೂ ಕಾಂಗ್ರೆಸ್ ಪೈಪೋಟಿಯೊಡ್ಡಿದೆ. ಈ ಬಾರಿ ಹೇಗಾದರೂ 
ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಕಾಂಗ್ರೆಸ್, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಅವರನ್ನು ಕರೆತಂದು ಇಲ್ಲಿ ಲಿಂಬಾವಳಿಗೆ ಎದುರಾಳಿಯಾಗಿಸುವ ಯೋಚನೆಯಲ್ಲಿದೆ ಎಂಬ ವರದಿಗಳಿವೆ. ಅಲ್ಲದೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದೇ ಇದೆ. ಪುಷ್ಪಾ ಅಮರನಾಥ್, ಸುಜಾತಾ ನಾಗೇಶ್, ವೆಂಕಟರಾಮಯ್ಯ, ಎನ್.ವೆಂಕಟೇಶ್, ಎಂ.ರಾಮಕೃಷ್ಣಪ್ಪ, ಟಿ. ನಾಗೇಶ್, ಎ.ಮುನಿಯಪ್ಪ ಸೇರಿದಂತೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ 12 ಮಂದಿ ಇದ್ದಾರೆನ್ನಲಾಗಿದೆ.

Full View