ವಿರೋಧಿಗಳನ್ನು ಭಯದಲ್ಲಿಡುವುದು ಬಿಜೆಪಿಯವರ ದೇಶಭಕ್ತಿ: ಭವ್ಯ ನರಸಿಂಹಮೂರ್ತಿ

Update: 2023-03-06 05:39 GMT

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಕಾಂಗ್ರೆಸ್‌ನ ಯುವನಾಯಕಿ ಭವ್ಯ ನರಸಿಂಹಮೂರ್ತಿ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನೀವು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ನಾನು ಇಂಜಿನಿಯರಿಂಗ್ ಬಳಿಕ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದೆ. ಇತಿಹಾಸ ವಿಚಾರದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟ ಕುರಿತ ಪುಸ್ತಕವನ್ನು ಆಸ್ಥೆಯಿಂದ ಓದಿದ್ದೆ. ನಮ್ಮ ನಾಯಕರು, ನಾಯಕಿಯರು ಮಾಡಿರುವ ತ್ಯಾಗ, ಬಲಿದಾನ, ಸಿದ್ಧಾಂತ ಮತ್ತು ಚಳವಳಿಯಾಗಿದ್ದ ಕಾಂಗ್ರೆಸ್‌ನ ನಾಯಕರು ವೈಯಕ್ತಿಕ ಬದುಕನ್ನೂ ಯೋಚಿಸದೆ ದೇಶಕ್ಕೋಸ್ಕರ ವರ್ಷಗಟ್ಟಲೆ ಜೈಲಿನಲ್ಲಿದ್ದುದು, ಇಡೀ ಭಾರತವನ್ನು ಒಗ್ಗೂಡಿಸಿದ್ದು ಇದೆಲ್ಲವೂ ಮಹತ್ವದ್ದಾಗಿತ್ತು.

ಪಕ್ಷವಾಗಿ ಬದಲಾದ ಕಾಂಗ್ರೆಸ್ ಮತ್ತು ಅದಕ್ಕಿಂತ ಮುಂಚಿನ ಕಾಂಗ್ರೆಸ್ ಎರಡೂ ಒಂದೇ ಎಂದು ನೋಡುತ್ತೀರಾ?

ಖಂಡಿತ ಇಲ್ಲ. ರಾಜಕೀಯ ಪಕ್ಷವಾಗಿ ಬದಲಾದ ಮೇಲೆ ಹಲವಾರು ವಿಚಾರಗಳು ಬದಲಾದವು. ಆದರೆ ಸಂವಿಧಾನಕ್ಕೆ ಬದ್ಧವಾಗಿದೆ. ಸಂವಿಧಾನವಿಲ್ಲದೆ ಇರುತ್ತಿದ್ದರೆ ನನ್ನಂಥ ಹೆಣ್ಣುಮಗಳೊಬ್ಬಳು ಹೀಗೆ ಮುಂದೆ ಬರಲು ಆಗುತ್ತಿರಲಿಲ್ಲ.

  ಸಂವಿಧಾನಬದ್ಧ ಎನ್ನುವಾಗ ಇನ್ನೂ ಹಲವು ಪಕ್ಷಗಳಿವೆ?

ಹೌದು. ಹಲವಾರು ಪಕ್ಷಗಳಿವೆ. ಸೈದ್ಧಾಂತಿಕವಾಗಿ ಜಾತ್ಯತೀತವಾಗಿವೆ. ನಾನು ಕಾಂಗ್ರೆಸ್ ಸೇರುವಾಗ ಅದು ಸೋತಿತ್ತು. ಇಲ್ಲಿ ಸೇರಿದರೆ ಬೆಳೆಯಲು ಆಗದು ಎಂದೆಲ್ಲ ಹಲವರು ಹೇಳಿದರು. ಆದರೆ ಇಂದು ದೇಶದಲ್ಲಿ ಹರಡಿರುವ ಕೋಮುವಾದ ನೋಡಿಕೊಂಡರೆ, ಬಿಜೆಪಿಯೆದುರು ನಿಂತು ಗೆಲ್ಲಲು ಸಾಧ್ಯವಾಗುವುದು ಕಾಂಗ್ರೆಸ್‌ಗೆ ಮಾತ್ರ.

ನೀವು ಸುಶಿಕ್ಷಿತೆ. ಇತಿಹಾಸವನ್ನೂ ಓದಿಕೊಂಡವರು. ಕೋಮುವಾದ ಮೊದಲೂ ಇತ್ತು. ಆದರೆ ಅದು ಶುರುವಾದದ್ದೇ ಬಿಜೆಪಿಯಿಂದ ಎಂದು ಕಾಂಗ್ರೆಸ್ ಹೇಳುತ್ತದೆ. ಎಷ್ಟು ಸರಿ?

ಕೋಮುವಾದ ಒಂದು ಪಿಡುಗು. ಸ್ವಾತಂತ್ರ್ಯಕ್ಕೆ ಮೊದಲೂ ಇತ್ತು. ಕೆಲವರಿಂದಷ್ಟೇ ಶುರುವಾಗುತ್ತದೆ ಅದು. ದೇಶ ವಿಭಜನೆಯಾಯಿತು. ಯಾರಿಂದ? ಆ ಕೋಮುಗಲಭೆ ಯಾರಿಂದ ಆಯಿತು? ಆ ಕಡೆ ಮುಸ್ಲಿಮ್ ಲೀಗ್‌ನಿಂದ ಮತ್ತು ಈ ಕಡೆ ಆರೆಸ್ಸೆಸ್‌ನಿಂದ. ಕಾಂಗ್ರೆಸ್‌ನಿಂದಲ್ಲ. ಕೋಮುಗಲಭೆಯಾದಾಗ ಸರಕಾರ ಪ್ರತಿಕ್ರಿಯಿಸುವ ರೀತಿಯಲ್ಲೇ ವ್ಯತ್ಯಾಸ ಕಾಣಿಸುತ್ತದೆ. ದಿಲ್ಲಿಯಲ್ಲಿ ಕೋಮುಗಲಭೆಯಾದಾಗ ನಮ್ಮ ಪೊಲೀಸ್ ವ್ಯವಸ್ಥೆ ಅದನ್ನು ನಿಯಂತ್ರಿಸಬಹುದಿತ್ತು. ಆಗಲಿಲ್ಲ. ಗೋಧ್ರಾ ಘಟನೆಯೂ ಹಾಗೆಯೇ ಆಯಿತು. ಇಲ್ಲಿ ನಡೆದಾಗಲೂ ಮುಖ್ಯಮಂತ್ರಿ ಆಕ್ಷ್ಯನ್‌ಗೆ ರಿಯಾಕ್ಷನ್ ಇರುತ್ತದೆ ಎನ್ನುತ್ತಾರೆ. ಯಾವುದೇ ವಿಚಾರಧಾರೆಯ ಹಿನ್ನೆಲೆಯಿಂದ ಆರಿಸಿಬಂದಿದ್ದರೂ, ಸಾಂವಿಧಾನಿಕ ಸ್ಥಾನದಲ್ಲಿರುವ ಒಬ್ಬರು ಸಂವಿಧಾನಕ್ಕೆ ಬದ್ಧರಾಗಿರಬೇಕು. ಅದು ಬಿಜೆಪಿಯಲ್ಲಿ ಇಲ್ಲ ಎನ್ನಿಸುತ್ತದೆ.

ಕಾಂಗ್ರೆಸ್‌ನ ಒಳಗೂ ಆರೆಸ್ಸೆಸ್ ವಿಚಾರಧಾರೆಯವರು ಬಹಳಷ್ಟು ಜನರಿದ್ದಾರೆ. ಇದಕ್ಕೆ ಏನೆನ್ನುತ್ತೀರಿ?

ಅದು ಖಂಡಿತ ತಪ್ಪು. ಆರೆಸ್ಸೆಸ್ ಬಗ್ಗೆ ಭಯವಿದ್ದರೆ ಕಾಂಗ್ರೆಸ್ ಪಕ್ಷ ಬಿಟ್ಟುಹೋಗಿ ಎಂದು ರಾಹುಲ್ ಗಾಂಧಿಯವರು ಹೇಳುತ್ತಾರೆ. ನಮಗೆ ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆಯಿರುವವರೇ ಬೇಕು. ನಾವು ಸೋಲಲಿ ಗೆಲ್ಲಲಿ, ಪ್ರತಿಪಕ್ಷವಾಗಿ ಜನರ ಧ್ವನಿಯಾಗಿರಬೇಕೇ ಹೊರತು, ನಮ್ಮಲ್ಲಿಯೇ ಹೀಗಿರಬಾರದು. ಸಾಫ್ಟ್ ಹಿಂದುತ್ವ ಎಂಬುದರ ಬಗ್ಗೆಯೂ ನನಗೆ ನಂಬಿಕೆಯಿಲ್ಲ.

ಬಿಜೆಪಿ ಹಿಂದುತ್ವವೇ ಹಿಂದೂ ಧರ್ಮ ಎನ್ನುತ್ತದೆ. ಹಾಗಲ್ಲ ಎಂದು ಜನರಿಗೆ ತಿಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿಲ್ಲ, ಯಾಕೆ?

ಧರ್ಮ ಎನ್ನುವುದು ವೈಯಕ್ತಿಕ. ನಾವೆಲ್ಲರೂ ಎಲ್ಲೋ ಅಲ್ಪಮಾನವರಾಗಿಬಿಟ್ಟಿದ್ದೇವೆ. ನನ್ನ ಧರ್ಮ, ನನ್ನ ಜಾತಿ, ನನ್ನ ಸಮುದಾಯ ಹೀಗೆ ಎಲ್ಲದಕ್ಕೂ ಒಂದು ಭಾವನಾತ್ಮಕ ಸ್ಪರ್ಶ ಇರುತ್ತದೆ. ಬಿಜೆಪಿಯವರು ಮಾಡಿರುವುದು ಆ ಭಾವನಾತ್ಮಕತೆಯನ್ನು ಮುಟ್ಟಿ ರುವುದು. ಮತ್ತೊಂದು ಅವರ ಸಾಧನೆಯೆಂದರೆ ಸೋಷಿಯಲ್ ಮೀಡಿಯಾ. ಚೆನ್ನಾಗಿ ಬಳಸಿಕೊಂಡಿದ್ದಾರೆ. ಜನರ ಕೈಯಲ್ಲಿರುವ ಫೋನ್ ಮೂಲಕವೇ ತಮ್ಮ ಸುಳ್ಳುಗಳನ್ನೆಲ್ಲ ಅವರಿಗೆ ಮುಟ್ಟಿಸಿದರು. ಆದರೂ ಸತ್ಯ ಯಾವತ್ತಿಗೂ ಸತ್ಯವೇ. ನಿಧಾನಕ್ಕೆ ಮುಟ್ಟಬಹುದು.

ಒಂದು ಸುಳ್ಳನ್ನೇ ಹತ್ತು ಸಲ ಹೇಳಿದರೆ ಅದೇ ಸತ್ಯವಾಗುತ್ತದೆ. ಆದಾಗಿದೆಯಾ ಈಗ?

ಅದು ತಾತ್ಕಾಲಿಕ. ಜನರ ಆರ್ಥಿಕ ಸ್ಥಿತಿ ಹಾಳಾಗುತ್ತಿರುವಾಗ, ಸಂಕಟ ಹೆಚ್ಚುತ್ತಿರು ವಾಗ ಜನರಿಗೆ ಸತ್ಯ ಗೊತ್ತಾಗುತ್ತಿದೆ. ದೇಶದಲ್ಲಿ ಶೇ.80ರಷ್ಟು ಮಂದಿ ಅಂದೇ ದುಡಿದು ತಿನ್ನಬೇಕಾದ ಸ್ಥಿತಿಯಲ್ಲಿರುವವರು. ಅವರೆಲ್ಲರಿಗೂ ಗೊತ್ತಾಗಿದೆ. ರಾಜ್ಯದಲ್ಲಿ ಪೂರ್ಣವಾಗಿ ಆಡಳಿತ ವಿರೋಧಿ ಅಲೆಯಿದೆ. ಬಿಜೆಪಿಯ ಹಗರಣಗಳನ್ನು ಜನ ನೋಡುತ್ತಿದ್ದಾರೆ.

ಆದರೆ ಅವೆಲ್ಲವನ್ನೂ ಟಿಪ್ಪು, ಸಾವರ್ಕರ್ ಕುರಿತು ಹೇಳುತ್ತ ಮುಚ್ಚಿಹಾಕುತ್ತಿದ್ದಾರೆ?

ಅದಕ್ಕಿಂತ ಹೆಚ್ಚಾಗಿ ಬಿಜೆಪಿ ಅಧ್ಯಕ್ಷರು ಅಭಿವೃದ್ಧಿ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಚಿಸಿ ಅನ್ನುತ್ತಿದ್ದಾರೆ. ಇವರ ಅಸಾಮರ್ಥ್ಯ ಯಾವ ಮಟ್ಟದ್ದು ಎಂಬುದನ್ನು ಊಹಿಸಬಹುದು. ಜನರಿಗೆ ಮೊದಲು ಬೇಕಿರುವುದು ಜೀವ, ಜೀವನೋಪಾಯ. ಆದರೆ ಅದೇ ಹದಗೆಟ್ಟುಹೋಗಿದೆ. ಜನರ ಭವಿಷ್ಯದ ಬಗ್ಗೆ ಈ ಸರಕಾರ ಯೋಚಿಸುತ್ತಿಲ್ಲ.

ಬಿಜೆಪಿಯಿಂದಲೇ ದೇಶ ಎನ್ನುತ್ತಿದ್ದಾರೆ. ಜನರ ಮನಸ್ಸಿನಲ್ಲಿ ನಿಜವಾಗಿಯೂ ಇರುವುದೇನು?

ದೇಶಭಕ್ತಿ ಬೇರೆ, ರಾಷ್ಟ್ರೀಯತೆ ಬೇರೆ. ಇಂದು ರಾಷ್ಟ್ರೀಯತೆ ಹೆಸರಿನಲ್ಲಿ ಆಗುತ್ತಿರುವುದು ನಿಜವಾದ ರಾಷ್ಟ್ರೀಯತೆ ಅಲ್ಲ. ಇಲ್ಲಿ ಯಾರೂ ಶತ್ರುಗಳಿಲ್ಲ. ದೇಶದಲ್ಲಿ ತೊಂದರೆಯಿದೆ, ನಾವು ಸರಿಮಾಡುತ್ತೇವೆ ಎಂಬುದು ದೇಶಪ್ರೇಮ. ತೊಂದರೆಯಿದೆ, ಇದಕ್ಕೆ ಅವರು ಕಾರಣ. ಅವರಿಂದ ನಾವು ಬಚಾವಾಗಬೇಕೆಂದರೆ ಅವರು ಕೆಳಗೆ ಹೋಗಬೇಕು. ರಾಜಕೀಯವಾಗಿ ಅವರನ್ನು ಭಯದಲ್ಲಿಡಬೇಕು ಎನ್ನುವುದು ಅವರ ದೇಶಭಕ್ತಿ.

  ಪಕ್ಷಕ್ಕೆ ಬಂದ ಈ ಮೂರು ವರ್ಷಗಳಲ್ಲಿ ಏನು ಕಲಿತಿರಿ?

ಮುಂಚೆ ನಾನು ವಿಶ್ವಸಂಸ್ಥೆ, ಕಾರ್ಪೊರೇಟ್ ಕಂಪೆನಿ ಸೇರಿದಂತೆ ಬೇರೆಬೇರೆ ಕಡೆ ಕೆಲಸ ಮಾಡುತ್ತಿದ್ದೆ. ಆದರೆ ರಾಜಕಾರಣದಲ್ಲಿ ಒಂದೇ ದಿನದಲ್ಲಿ ಸಿಗುವ ಅನುಭವ, ಪಾಠ ಬೇರೆಡೆ ವರ್ಷವಾದರೂ ಸಿಗುವುದಿಲ್ಲ. ಈ ಮೂರು ಮೂರುವರೆ ವರ್ಷಗಳಲ್ಲಿ ಪಾಠವನ್ನೂ ಕಲಿತಿದ್ದೇನೆ. ಹಲವಾರು ರೀತಿಯ ಜನರನ್ನೂ ನೋಡಿದ್ದೇನೆ. ಹಾಗೆಯೇ ಹಲವಾರು ನಾಯಕಿಯರ ಬದುಕಿನ ಬಗ್ಗೆ ಓದುತ್ತೇನೆ. ಅವರು ಎದುರಿಸುವ ಕಷ್ಟ ತಿಳಿದೆ. ಅಲ್ಲಿ ಅರ್ಥವಾದದ್ದು ರಾಜಕೀಯ ಎಂಬುದು ಮಹಿಳೆಗೆ ಅಷ್ಟು ಸುಲಭವಾದದ್ದಲ್ಲ ಎಂಬುದು. ನಾನೂ ಅಂಥದ್ದನ್ನು ಎದುರಿಸಿದ್ದೇನೆ, ಅವಮಾನವೂ ಆಗಿದೆ.

ನಿಮ್ಮ ಪಕ್ಷದಲ್ಲಿಯೇ ಬಹಳಷ್ಟು ಯುವನಾಯಕಿಯರು ಇದ್ದಾರೆ. ದಲಿತ ಸಮುದಾಯದವರೂ ಇದ್ದಾರೆ. ಆದರೆ ನೀವು ಒಕ್ಕಲಿಗ ಸಮುದಾಯದವರಾಗಿರು ವುದರಿಂದ ನಿಮಗೆ ಅವಕಾಶ ಸಿಗುತ್ತಿದೆಯೆ?

ಅದು ಖಂಡಿತವಾಗಿಯೂ ಒಂದು ಕಾರಣ. ಎಲ್ಲವೂ ನನ್ನ ಸಾಮರ್ಥ್ಯದಿಂದಲೇ ಅಲ್ಲ. ಆರ್ಥಿಕ ಹಿನ್ನೆಲೆಯಿಂದಲೂ ಬರುತ್ತದೆ. ಜಾತಿ, ಧರ್ಮದಂಥ ಸಾಮಾಜಿಕ ಹಿನ್ನೆಲೆಯೂ ಕಾರಣವಾಗುತ್ತದೆ. ಮುಸ್ಲಿಮ್ ಮತ್ತು ಹಿಂದೂ ಹೆಣ್ಣುಮಕ್ಕಳನ್ನು ಹೋಲಿಸಿದರೆ ಹಿಂದೂ ಹೆಣ್ಣುಮಕ್ಕಳು ಮುಂದಿದ್ದಾರೆ. ದೌರ್ಜನ್ಯ ದಲಿತ ಹೆಣ್ಣುಮಕ್ಕಳ ಮೇಲಾಗುವಂತೆ ಹಿಂದುಳಿದ ವರ್ಗದವರ ಮೇಲೆ ಆಗುತ್ತಿಲ್ಲ. ಶೋಷಣೆಯೂ ಜಾಸ್ತಿಯಿದೆ. ಅವಕಾಶವನ್ನು ಕೂಡ ನಮ್ಮ ಹಿನ್ನೆಲೆಯು ನಿರ್ಧರಿಸುತ್ತದೆ. ಅಪ್ಪ ಅಮ್ಮ ಓದಿಸಿರದೇ ಇದ್ದಿದ್ದರೆ ನಾನು ಇಲ್ಲಿರುತ್ತಿರಲಿಲ್ಲ. ಎಷ್ಟೋ ಹೆಣ್ಣುಮಕ್ಕಳು ನನಗಿಂತ ಹೆಚ್ಚು ಸಾಮರ್ಥ್ಯ ಇರುವವರಿದ್ದಾರೆ. ಹಳ್ಳಿಗಳಲ್ಲಿ ಇದ್ದಾರೆ. ಅವರಿಗೆ ಪ್ರಾಥಮಿಕ ಶಿಕ್ಷಣವೂ ಸಿಕ್ಕಿಲ್ಲ. ರಾಜಕೀಯಕ್ಕೆ ಬರುವ ವಿಚಾರ ಆಮೇಲೆ.

  ಪಕ್ಷ ನಿಮ್ಮನ್ನು ಹೇಗೆ ನಡೆಸಿಕೊಂಡಿದೆ?

ಪಕ್ಷ ಎಲ್ಲರಿಗೂ ಟಿಕೆಟ್‌ಗೆ ಅರ್ಜಿ ಹಾಕುವುದಕ್ಕೆ ಅವಕಾಶವನ್ನಂತೂ ಕೊಟ್ಟಿದೆ. ನನಗೆ ಸಾಮರ್ಥ್ಯವಿದೆ ಎಂಬ ವಿಶ್ವಾಸವಿದೆ. ನನ್ನನ್ನು ನಾನು ತಯಾರಿ ಮಾಡಿಕೊಂಡು ಬಂದಿರುವುದೇ ಇದಕ್ಕಾಗಿ. ಜನರ ಸೇವೆಗೆ ಏನೇನು ತಯಾರಿ ಮಾಡಿಕೊಳ್ಳಬೇಕೊ ಅದನ್ನು ಮಾಡಿದ್ದೇನೆ. ನಾನು ತುಂಬಾ ಉತ್ಸಾಹಿ.

  ಕ್ಷೇತ್ರದಲ್ಲಿ ನೀವು ಜನರನ್ನು ತಲುಪಿದ್ದೀರಾ?

ಹತ್ತರಲ್ಲಿ 7 ಜನರಾದರೂ ನನ್ನನ್ನು ಗುರುತಿಸುತ್ತಾರೆ. ಸೋಷಿಯಲ್ ಮೀಡಿಯಾ, ಚಾನೆಲ್‌ಗಳಲ್ಲಿ ನನ್ನ ಚರ್ಚೆ ನೋಡಿದವರಿದ್ದಾರೆ. ನನ್ನ ತಂದೆಯವರಿಂದಾಗಿಯೂ ನಾನು ತುಂಬ ಜನಕ್ಕೆ ಗೊತ್ತು. ನಾನು ಎನ್‌ಜಿಒದಲ್ಲಿ ಕೆಲಸ ಮಾಡುತ್ತಿದ್ದುದು ಕೂಡ ಸಹಾಯವಾಗಿದೆ. ಪ್ರತಿಯೊಂದು ಅಂಗನವಾಡಿಯನ್ನು ಭೇಟಿ ಮಾಡಿ, ಅಲ್ಲಿನ ತೊಂದರೆಗಳನ್ನು ಹೇಳಿದ್ದೇನೆ.

ಸುರೇಶ್ ಕುಮಾರ್ ಐದು ಬಾರಿ ಗೆದ್ದೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲವೇ?

ಅಭಿವೃದ್ಧಿಗೆ ಅವರ ಪ್ರಕಾರ ಏನು ವ್ಯಾಖ್ಯೆಯೊ ಗೊತ್ತಿಲ್ಲ. ಯಾವ ಮೂಲಭೂತ ಸೌಕರ್ಯದ ಅಭಿವೃದ್ಧಿಯೂ ಆಗಿಲ್ಲ. ಸ್ಲಂ ಒಳಗೆ ನೋಡಿದರೆ ಜನ ಎಂಥ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಅಲ್ಲಿ ಶಾಸಕರು ಹೋಗುವುದೇ ಇಲ್ಲ. ಮೈನ್ ರೋಡಿಗೆ ಬಂದರೂ ಇಲ್ಲಿಯವರೆಗೂ ಒಳಗಡೆ ಬಂದಿಲ್ಲ ಎಂದೇ ಜನರು ಹೇಳುತ್ತಾರೆ. ಯಾವ ಕಾರಣಕ್ಕೊ ಗೊತ್ತಿಲ್ಲ. ನಾವು ಎಸ್‌ಸಿ-ಎಸ್‌ಟಿ ಎಂಬ ಕಾರಣಕ್ಕೆ ಬರುವುದಿಲ್ಲ ಎಂತಲೂ ಜನ ಹೇಳಿದ್ದಾರೆ. ಬೇಸರವಾಯಿತು ಅದನ್ನು ಕೇಳಿದಾಗ. ಒಂದು ಸಾಂವಿಧಾನಿಕ ಸ್ಥಾನಕ್ಕೆ ಹೋದಮೇಲೆ ಹಾಗಾಗಬಾರದು. ಆದರೂ ಒಬ್ಬ ಜನಪ್ರತಿನಿಧಿಯ ಕೆಲಸ ರಸ್ತೆ, ಚರಂಡಿಯಷ್ಟೇ ಅಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಒಂದು ಬದಲಾವಣೆ ತರಬೇಕು.

  ಚುನಾವಣೆಗೆ ಹಣ ಬೇಕು? ಹೇಗೆ ಮಾಡುತ್ತೀರಿ?

ನನ್ನ ಸ್ನೇಹಿತರು, ಅಕ್ಕಂದಿರು, ಅಪ್ಪ ಇದ್ದಾರೆ. ಅದಕ್ಕಿಂತ, ಒಬ್ಬರು ಫೋನ್ ಮಾಡಿದ್ದರು. ಮನೆಗೆ ಬಂದು 101 ರೂ. ಕೊಡಬೇಕು, ಈಗ ಇಷ್ಟೇ ಸಹಾಯ ಮಾಡ
ಬಲ್ಲೆ. ಟಿಕೆಟ್ ಸಿಕ್ಕಿದ ಮೇಲೆ ಎರಡೋ ಮೂರೋ ಸಾವಿರ ಕೊಡುತ್ತೇನೆ ಎಂದರು. ಇದಕ್ಕಿಂತ ಅಭಿಮಾನ ಬೇಕಾ? ನನಗೆ ಅವರು ಮತಹಾಕಿದರೆ ಸಾಕು. ಆದರೆ ಸಹಾಯವನ್ನೂ ಮಾಡುತ್ತೇನೆ ಎಂದರು. ನಿಜವಾಗಿಯೂ ಕಣ್ಣಲ್ಲಿ ನೀರು ಬಂತು.

  ಟಿಕೆಟ್ ಸಿಗುವ ಭರವಸೆ ಇದೆಯಾ? ಪೈಪೋಟಿ ತುಂಬ ಇದೆ?

ಭರವಸೆ ಇದೆ. ನೋಡೋಣ. ಆಡಳಿತ ವಿರೋಧಿ ಅಲೆ ಇರುವುದರಿಂದ ಪೈಪೋಟಿ ತುಂಬ ಇದೆ. ಕಾಂಗ್ರೆಸ್‌ನವರು ಗೆದ್ದೇ ಗೆಲ್ಲುತ್ತೀವಿ ಎಂದು ಗೊತ್ತು.

  ಜನ ಕಾಂಗ್ರೆಸ್‌ಗೆ ಯಾಕೆ ಮತ ಹಾಕಬೇಕು?

ಉತ್ತಮ ಆಡಳಿತ ನಡೆಸಿರುವುದೆಂದರೆ ಅದು ಕಾಂಗ್ರೆಸ್ ಪಕ್ಷ. ಬಿಜೆಪಿ ಬಗ್ಗೆ ಜನಕ್ಕೇ ಗೊತ್ತಿದೆ. ಅಧಿಕಾರಕ್ಕೋಸ್ಕರ ಯಾವ ಮಟ್ಟಕ್ಕೂ ಹೋಗುತ್ತಾರೆ. ಸ್ಥಿರ ಸರಕಾರ ಇರದೆ ರಾಜ್ಯದ ಅಭಿವೃದ್ಧಿ ಕಷ್ಟ. ಬಿಜೆಪಿ ಸರಕಾರದ ಯಾವುದಾದರೂ ಒಂದು ಕಾರ್ಯಕ್ರಮದ ಹೆಸರು ಹೇಳಿ. ನಾಲ್ಕು ವರ್ಷವೇ ಆಗುತ್ತ ಬಂತು.

  ಯುವ ನಾಯಕಿ ನೀವು. ಯುವಕರಿಗೆ ರಾಜಕೀಯದ ಬಗ್ಗೆ ಏನು ಹೇಳಬಯಸುತ್ತೀರಿ?

ಎಲ್ಲಕ್ಕಿಂತ ಮೊದಲು, ರಾಜಕೀಯ ಎಂಬುದು ಒಂದು ಬದ್ಧತೆ. ನನ್ನ ಪ್ರಕಾರ, ನಮ್ಮ ಸಾಮರ್ಥ್ಯ, ಶಿಕ್ಷಣ, ಸಮಯ ಎಲ್ಲದರಿಂದ ಬೇರೊಬ್ಬರ ಜೀವನದಲ್ಲಿ ಒಂದು ಬದಲಾವಣೆ ತರುವುದು ರಾಜಕಾರಣ. ಮತದಾನ ಯುವಕರ ಮೊದಲ ಬದ್ಧತೆಯಾಗಿರಬೇಕು. ರಾಜಕೀಯದಲ್ಲಿ ಆಸಕ್ತಿ ಇರುವುದು, ಇಲ್ಲದೇ ಇರುವುದು ಬೇರೆ ಮಾತು. ವಿದ್ಯಾರ್ಥಿಗಳಲ್ಲಿ ಬಹಳಷ್ಟು ಮಂದಿಗೆ ರಾಜಕೀಯಕ್ಕೆ ಬರುವ ಅಪೇಕ್ಷೆ ಇದೆ. ರಾಜಕೀಯ ಹಿನ್ನೆಲೆ ಇಲ್ಲವೆಂದು ಯೋಚಿಸುತ್ತಾರೆ. ಆದರೆ ಅಂಥ ಹಿನ್ನೆಲೆ ಬೇಕಿಲ್ಲ. ನನ್ನನ್ನಂತೂ ಜನ ಗುರುತಿಸಿ, ಬೆಳೆಸಿದ್ದಾರೆ. ಮಾಧ್ಯಮಗಳೂ ಬೆಳೆಸಿವೆ. ಅದಕ್ಕಾಗಿ ಧನ್ಯವಾದಗಳು.

Full View