ನನ್ನ ಅವಧಿಯಲ್ಲಿ ಲೋಕಾಯುಕ್ತ ಬಂದ್ ಮಾಡಿದ್ದರೆ ಇಂದೇ ರಾಜೀನಾಮೆ ನೀಡುತ್ತೇನೆ: ಸಿದ್ಧರಾಮಯ್ಯ
"ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು"
ಮೈಸೂರು: ನನ್ನ ಅವಧಿಯಲ್ಲಿ ಲೋಕಾಯುಕ್ತ ಬಂದ್ ಮಾಡಿಲ್ಲ, ಬಂದ್ ಮಾಡಿದ್ದರೆ ಇಂದೇ ರಾಜೀನಾಮೆ ಕೊಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿಯವರಿಗೆ ಸವಾಲು ಹಾಕಿದರು.
ನಗರದ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲೋಕಾಯುಕ್ತವನ್ನು ಬಂದ್ ಮಾಡಿಲ್ಲ, ಲೋಕಾಯುಕ್ತಕ್ಕೆ ತಿದ್ದುಪಡಿಯನ್ನು ಮಾಡಿಲ್ಲ, ಅದರ ಅಧಿಕಾರವನ್ನು ಕಡಿತಗೊಳಿಸಿಲ್ಲ, ಭ್ರಷ್ಟಾಚಾರ ನಿಗ್ರಹ ಮಾಡಲು ಎಸಿಬಿ ರಚನೆ ಮಾಡಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಮಾಡುವುದಾಗಿ ಹೇಳಿದ್ದರು. ಇವರು ರದ್ದು ಮಾಡಿದರ? ನ್ಯಾಯಾಲಯ ಎಸಿಬಿಯನ್ನು ರದ್ದು ಮಾಡಿದ್ದು. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಸುಳ್ಳೇ ಅವರ ಮನೆ ದೇವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಂತೂ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ಮಾಡಾಳು ವಿರೂಪಾಕ್ಷಪ್ಪ ಕೆಎಸ್ಡಿಎಲ್ ಅಧ್ಯಕ್ಷನಾಗಿದ್ದರಿಂದಲೇ ಅವನ ಮಗ ಲಂಚ ಸ್ವೀಕರಿಸಲು ಮುಂದಾಗಿದ್ದು, ಭ್ರಷ್ಟಾಚಾರದ ದಾಖಲೆ ಕೊಡಿ ಎನ್ನುವ ಬಿಜೆಪಿಯವರಿಗೆ ಇದಕ್ಕಿಂತ ದಾಖಲೆ ಬೇಕೆ? ಈ ಪ್ರಕರಣ ಬಿಜೆಪಿಯವರಿಗೆ ಮುಜಗರ ಉಂಟು ಮಾಡಿರುವುದಂತೂ ನಿಜ. ಆದರೆ ಅವರು ನಮಗೆ ಮುಜುಗರ ಇಲ್ಲ ಎಂದು ಹೇಳುತ್ತಾರೆ. ಮಾಡಾಳು ವಿರೂಪಾಕ್ಷಪ್ಪನನ್ನು ಬಂಧಿಸದೆ ರಕ್ಷಣೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಮಾಡಾಳು ವಿರೂಪಾಕ್ಷಪ್ಪ ಎಲ್ಲಿದ್ದಾನೆ ಎಂದು ಗೊತ್ತಿಲ್ಲವೇ? ಲುಕ್ ಔಟ್ ನೋಟಿಸ್ ನೀಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ತಯತ್ನಿಸುತ್ತಿದ್ದಾರೆ. ಮಾಡಾಳು ವಿರೂಪಾಕ್ಷಪ್ಪ ಅವನ ಮನೆಯಲ್ಲೇ ಇದ್ದಾನೆ. ಆದರೂ ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಎಸಿಬಿ ರಚನೆ ಮಾಡಿರುವುದು ಸರಿ ಎಂದು ಇವರ ವಕೀಲರೇ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಆದರೂ ಇವರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.