ಮಂಡ್ಯ | ಸಚಿವ ನಾರಾಯಣಗೌಡ ಕಾಂಗ್ರೆಸ್​ ಸೇರ್ಪಡೆಗೆ ವಿರೋಧ: ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ

Update: 2023-03-06 13:51 GMT

ಮಂಡ್ಯ, ಮಾ.6: ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೆ ಕೆ.ಆರ್.ಪೇಟೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕಾರಿನ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.

ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಂಬಂಧ ಕೆ.ಆರ್.ಪೇಟೆ ಪಟ್ಟಣದ ಕೆಬಿಸಿ ಕಾಂಪ್ಲೆಕ್ಸ್ ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾರಾಯಣಗೌಡರನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿ ಬಂದಿದ್ದು, ಒಂದು ವೇಳೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಪರಿಸ್ಥಿತಿ ಸರಿ ಇರುವುದಿಲ್ಲ. ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಹೇಗೆ ನಡೆಸುತ್ತಾರೆ ನೋಡಿಬಿಡುತ್ತೇವೆ ಎಂದು ಕಾರ್ಯಕರ್ತರು ಸವಾಲು ಹಾಕಿದ್ದಾರೆ. 

ಸಚಿವ ನಾರಾಯಣಗೌಡ ಕಾಂಗ್ರೆಸ್ ಕಾರ್ಯಕರ್ತರಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ. ಹಲವಾರು ಕೇಸುಗಳನ್ನು ಹಾಕಿ ಪೊಲೀಸ್ ಠಾಣೆ, ಕೋರ್ಟ್ ಗೆ ಅಲೆಯುವಂತೆ ಮಾಡಿದ್ದಾರೆ. ಅಂತಹವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಸರಿಯೇ ಎಂದು ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡರು.

''ಸೋಲಿಸಿಯೇ ತೀರುತ್ತೇವೆ''

ಪಕ್ಷದಿಂದ ಟಿಕೆಟ್ ಆಕಾಂಕ್ಷಿತರಾಗಿರುವ ಆರು ಜನರಲ್ಲಿ ಯಾರನ್ನಾದರೂ ಅಭ್ಯರ್ಥಿ ಮಾಡಲಿ, ಗೆಲ್ಲಿಸಿಕೊಂಡು ಬರುತ್ತೇವೆ. ಬದಲಾಗಿ ನಾರಾಯಣಗೌಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಟ್ಟರೆ ಎಷ್ಟು ಕೋಟಿ ಖರ್ಚಾದರೂ ಅವರನ್ನು ಸೋಲಿಸಿಯೇ ತೀರುತ್ತೇವೆ ಎಂದು ಅವರು ಎಚ್ಚರಿಸಸಿದ್ದಾರೆ. 

ಗದ್ದಲ, ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಪಡಿಸಿ,  ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹೊರನಡೆದರು. ಕಾರನ್ನು ಅಡ್ಡಗಟ್ಟಿದ ಕಾರ್ಯಕರ್ತರು ಕಾರಿನ ಮೇಲೆ ಮೊಟ್ಟೆ ಎಸೆದು ಧಿಕ್ಕಾರ ಕೂಗಿದರು. ಇದಲ್ಲದೆ, ಪಕ್ಷದ ಬ್ಯಾನರ್, ಬಂಟಿಗ್ಸ್, ಫ್ಲೆಕ್ಸ್ಗಳಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

“ನಾರಾಯಣಗೌಡರನ್ನು ಪಕ್ಷಕ್ಕೆ ಬರುವ ಸ್ಪಷ್ಟ ಮಾಹಿತಿ ಇಲ್ಲ. ಪಕ್ಷದ ಆರು ಆಕಾಂಕ್ಷಿತರಲ್ಲೇ ಒಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ಕಾರ್ಯಕರ್ತರಿಗೆ ಸಮಾಧಾನ ಮಾಡಿದೆ. ಆದರೆ, ಕೆಲವರು ಅನಾಗರಿಕ ಪದ ಬಳಕೆ ಮಾಡಿದರು. ಆವೇಶದಲ್ಲಿ ಹಾಗೆಲ್ಲಾ ಆಗುವುದು ಸಹಜ. ಸಭೆಯಲ್ಲಿ ನಡೆದ ಘಟನೆ ಮತ್ತು ನಾರಾಯಣಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಬೇಡವೆಂಬ ಸಭೆಯ ಅಭಿಪ್ರಾಯವನ್ನು ವರಿಷ್ಠರಿಗೆ ರವಾನೆ ಮಾಡಿದ್ದೇನೆ.”

-ಸಿ.ಡಿ.ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.

Similar News