ಅಂಬಾನಿ, ಅದಾನಿಗೆ ರಾಜ್ಯ ಅಡವಿಡಲು ಭ್ರಷ್ಟ ಬಿಜೆಪಿಯ ‘ಸಂಚಿನ ಯಾತ್ರೆ’: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಮಾ. 6: ‘ಬಿಜೆಪಿ ಯಾವ ಮುಖವನ್ನು ಹೊತ್ತುಕೊಂಡು ‘ವಿಜಯ ಸಂಕಲ್ಪ ಯಾತ್ರೆ’ ಹೊರಟಿದೆ ಎಂದು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ರಾಜ್ಯದ ಬಿಜೆಪಿಗರೆಲ್ಲ ಸೇರಿಕೊಂಡು ಮಾಡುತ್ತಿರುವ ಯಾತ್ರೆಗೆ 40 ಪರ್ಸೆಂಟ್ ಸಂಕಲ್ಪ ಯಾತ್ರೆ ಎಂದು ಹೆಸರಿಟ್ಟರೆ ಸಾರ್ಥಕವಾಗುತ್ತದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸೋಮವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ಸುಳ್ಳು ಉತ್ಪಾದಿಸಿ ಹಂಚುವ ಯಾತ್ರೆ ಹಾಗೂ ಜನರ ಶೋಷಣೆಗೆ, ಹಿಂಸೆಗೆ, ದ್ವೇಷಕ್ಕೆ, ಬೆಲೆ ಏರಿಕೆಗೆ ಮತ್ತು ಕರ್ನಾಟಕದ ಚೈತನ್ಯವನ್ನೆ ನಾಶ ಮಾಡುವುದಕ್ಕಾಗಿ ಮಾಡುತ್ತಿರುವ ಯಾತ್ರೆ ಎಂದು ಹೆಸರಿಟ್ಟುಕೊಂಡಿದ್ದರೆ ಮಾತ್ರ ಅದಕ್ಕೊಂದು ಅರ್ಥವಿರುತ್ತಿತ್ತು. ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದಲೂ ಜನ ದ್ರೋಹವನ್ನು ಬಿಟ್ಟು ಬೇರೇನು ಮಾಡಿದೆ?’ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಿಸಾನ್ ಟೋಪಿ: ರಾಜ್ಯದಲ್ಲಿ 1.40 ಕೋಟಿ ಕುಟುಂಬಗಳಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ 45-47ಲಕ್ಷ ಕೃಷಿ ಹಿಡುವಳಿದಾರರಿಗೆ ಕೇಂದ್ರ ವರ್ಷಕ್ಕೆ 6 ಸಾವಿರ ರೂ.ಕೊಡುತ್ತಿದೆ ಮತ್ತು ರಾಜ್ಯ ಸರಕಾರ 4 ಸಾವಿರ ರೂ.ಕೊಡುತ್ತಿದೆ ಎಂದು ಹೇಳಿಕೊಳ್ಳುತ್ತಿವೆ. ಆದರೆ, ರಾಜ್ಯ ಸರಕಾರ ಕೊಡುತ್ತಿರುವುದು ಕೇವಲ 2 ಸಾವಿರ ರೂ.ಮಾತ್ರ. ಕೇಂದ್ರವೂ ಹೇಳಿದಷ್ಟನ್ನು ಕೊಡದೆ ಯಾಮಾರಿಸುತ್ತಿದೆ ಎಂದು ಅನೇಕ ರೈತರು ನನ್ನ ಬಳಿ ದೂರಿದ್ದಾರೆ ಎಂದು ತಿಳಿಸಿದ್ದಾರೆ.
‘ನಿಮ್ಮ ಸಂಕಲ್ಪ, ಯಾತ್ರೆಯ ಪುರುಷಾರ್ಥ ಜನರಿಗೆ ಗೊತ್ತಾಗಲಿ. ಬಿಜೆಪಿ ಎಂದರೆ ಕುರಿ ಕಾವಲಿಗೆ ನೇಮಿಸಿದ ತೋಳ ಎನ್ನುವ ಸಿಟ್ಟು ಜನರಲ್ಲಿ ಹೆಪ್ಪುಗಟ್ಟಿರುವುದನ್ನು ನಾನು ಹೋದ ಕಡೆಗಳಲ್ಲೆಲ್ಲಾ ಗಮನಿಸಿದ್ದೀನಿ. ರಾಜ್ಯದ ಜನರು ಈ ಬಾರಿ ಎಚ್ಚೆತ್ತಿದ್ದಾರೆ. ತಮ್ಮನ್ನು ಕುರಿಗಳಾಗಿಸುವುದು ಸಾಧ್ಯವಿಲ್ಲ ಎಂದು ಅನೇಕ ಕಡೆ ಬಿಜೆಪಿಗರ ಮುಖಕ್ಕೆ ರಾಚುವಂತೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಅದು ಬಿಜೆಪಿಯನ್ನು ಬಿರುಗಾಳಿಯಂತೆ ಗುಡಿಸಿ ಹಾಕಲಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
‘ನೆಮ್ಮದಿ ಮತ್ತು ಸಮೃದ್ಧಿ ಬಯಸುವ ಕರ್ನಾಟಕವು ಗುಜರಾತಿನ ಅಂಬಾನಿ ಮತ್ತು ಅದಾನಿಗಳ ಲೂಟಿಗೆ ಅವಕಾಶ ಮಾಡಿಕೊಡಲು ಅವರಿಬ್ಬರ ರಾಯಭಾರಿಗಳಂತೆ ಓಡಾಡುತ್ತಿರುವ ಬಿಜೆಪಿ ನಾಯಕರ ಹುನ್ನಾರವನ್ನು ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಕನ್ನಡಿಗರು ಗುಜರಾತ್ ಮೂಲದ ದೇಶದ್ರೋಹಿ ವ್ಯಾಪಾರಿಗಳ ಲೂಟಿಗೆ ಎಂದೆಂದಿಗೂ ಅವಕಾಶ ಕೊಡಲಾರರು. ಬಿಜೆಪಿಗೆ ಓಟು ಕೊಡುವುದೆಂದರೆ ಅದಾನಿ, ಅಂಬಾನಿಗಳ ಲೂಟಿಗೆ ಅವಕಾಶ ಕೊಡುವುದು ಎಂದರ್ಥ ಎಂದು ಅವರು ವಿಶ್ಲೇಷಿಸಿದ್ದಾರೆ.
‘ಈಗಾಗಲೆ ನಮ್ಮ ವಿದ್ಯುತ್ ಸೇರಿದಂತೆ ಎಲ್ಲವನ್ನೂ ಕಿತ್ತುಕೊಂಡು ರೈತರ ಕೊಳವೆ ಬಾವಿಗಳಿಗೂ ಮೀಟರ್ ಹಾಕಲು, ಸಣ್ಣ ಕೈಗಾರಿಕೋದ್ಯಮಿಗಳ ಉತ್ಪಾದನೆ ನಾಶ ಮಾಡಿ ಚೀನಾದ ವಸ್ತುಗಳನ್ನು ಅದಾನಿ ಮುಂತಾದವರಿಂದ ಕೊಳ್ಳುವಂತೆ ಮಾಡಿ ನಮ್ಮ ರಾಜ್ಯದ ಆರ್ಥಿಕ ಚೈತನ್ಯವನ್ನು ನಾಶ ಮಾಡಲು ಸಂಚು ಹೂಡಿದ್ದಾರೆ. ಈ ದುಷ್ಟ ಸಂಚನ್ನು ಅರಿತುಕೊಂಡು ಭ್ರಷ್ಟ ಬಿಜೆಪಿಯನ್ನು ರಾಜ್ಯದಿಂದ ನಿರ್ಮೂಲನೆ ಮಾಡಬೇಕಾಗಿದೆ’ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.