ಅಲ್ಪಾವಧಿ ಟೆಂಡರ್ ಗಳ ಮೂಲಕ ವಸೂಲಿಗೆ ಇಳಿದಿರುವ ಸರಕಾರ: ಡಿ.ಕೆ.ಶಿವಕುಮಾರ್ ಆರೋಪ

Update: 2023-03-06 12:52 GMT

ಬೆಂಗಳೂರು, ಮಾ.6: ಕರ್ನಾಟಕದ ಸ್ವಾಭಿಮಾನ ಉಳಿಸಲು ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ. ಬೆಳಗಾವಿಯಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಕಾರ ಕಮಿಷನ್ ಹಾಗೂ ಕಾಮಗಾರಿಗಳ ದುಪ್ಪಟ್ಟು ಅಂದಾಜು ಮೂಲಕ ಅಕ್ರಮವಾಗಿ ಅಲ್ಪಾವಧಿಯ ಟೆಂಡರ್ ಕರೆದು ಚುನಾವಣೆಗೂ ಮುನ್ನ ಗುತ್ತಿಗೆದಾರರಿಂದ ಎಷ್ಟು ಸಾಧ್ಯವೋ ಅಷ್ಟು ವಸೂಲಿಗೆ ಮುಂದಾಗಿದೆ ಎಂದು ಆರೋಪಿಸಿದರು.

ಸಾವಿರ ಕೋಟಿಯ ಯೋಜನೆಗೆ ಎರಡು ಸಾವಿರ ಕೋಟಿ ರೂ. ಅಂದಾಜು ಮಾಡಲಾಗುತ್ತಿದೆ. ನಮ್ಮ ಕಾಲದಲ್ಲಿ ಬೆಳಗಾವಿ ಕಾಮಗಾರಿ 300 ಕೋಟಿ ರೂ.ಇದ್ದದ್ದು ಈಗ 900 ಕೋಟಿ ರೂ.ಗಳೆಂದು ಅಂದಾಜಾಗಿದೆ. ಈ ಬಗ್ಗೆ ನಾವು ನಾನು, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಸಿದ್ದರಾಮಯ್ಯ ಅವರ ಕಾಲದಲ್ಲಿ ಅತಿಥಿ ಸತ್ಕಾರದ ಹೆಸರಲ್ಲಿ ಅಕ್ರಮ ನಡೆದಿದೆ ಎಂದು ಹೇಳಿರುವ ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಯಾಕೆ ಧ್ವನಿ ಎತ್ತಲಿಲ್ಲ? ಕಳೆದ ಮೂರೂವರೆ ವರ್ಷಗಳಿಂದ ಸರಕಾರ ಏನು ಮಾಡುತ್ತಿತ್ತು? ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಈಗ ಅವರು ಟ್ವೀಟ್ ಮಾಡಿದರೆ ಏನು ಪ್ರಯೋಜನ? ಎಂದು ಅವರು ತಿರುಗೇಟು ನೀಡಿದರು.

ನನ್ನ ವಿರುದ್ಧ ಯಾವ ಭ್ರಷ್ಟಾಚಾರದ ದಾಖಲೆ ಇದೆಯೋ ಅದನ್ನು ಇಟ್ಟುಕೊಂಡು ತನಿಖೆ ಮಾಡಿಸಲಿ. ನಾನು ನೇಮಕಾತಿ, ಉಪಕರಣ ಖರೀದಿ ಅಥವಾ ಇತರ ಯಾವುದೇ ವಿಚಾರದಲ್ಲಿ ಅಕ್ರಮ ಮಾಡಿದ್ದರೆ ತನಿಖೆ ಮಾಡಿಸಿ. ನಮ್ಮ ಅವಧಿಯಲ್ಲಿ ಇಂಧನ ಇಲಾಖೆ ಹೇಗಿತ್ತು, ಈಗ ಸಿಎಜಿ ವರದಿಯಲ್ಲಿ ಏನಿದೆ? ಎಂಬುದು ಗೊತ್ತಿದೆ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೇಲಿನ ದೂರು ನಾವು ತಪ್ಪಿಸಬಹುದಿತ್ತು, ಆದರೆ ಆ ರೀತಿ ಮಾಡಿಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಅವರ ಮಾತಿನ ಪ್ರಕಾರ ಮನಸ್ಸು ಮಾಡಿದ್ದರೆ ಕೇಸ್ ತಡೆಯಬಹುದಾಗಿತ್ತು ಎನ್ನುವುದಾದರೆ ಇವರು ಲೋಕಾಯುಕ್ತ ಸಂಸ್ಥೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರಾ? ತನಿಖಾ ಸಂಸ್ಥೆಗಳು ಅವರ ನಿಯಂತ್ರಣದಲ್ಲಿ ಇವೆಯೇ?’ ಎಂದು ಪ್ರಶ್ನಿಸಿದರು.

ಬೇರೆ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಬರೆಸಿದಂತೆ ಈ ಪ್ರಕರಣದಲ್ಲಿ ಬರೆಸಲಿ ನೋಡೋಣ. ಲೋಕಾಯುಕ್ತ ವ್ಯವಸ್ಥೆ ರಾಮಕೃಷ್ಣ ಹೆಗಡೆ ಕಾಲದಲ್ಲೆ ಜಾರಿಗೆ ಬಂದಿತ್ತು. ಈ ಬಿಜೆಪಿಯವರೇನು ಬಂದು ಲೋಕಾಯುಕ್ತ ಸಂಸ್ಥೆ ಹುಟ್ಟುಹಾಕಿಲ್ಲ ಎಂದು ಶಿವಕುಮಾರ್ ಟೀಕಿಸಿದರು.

ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿಗೆ ಅನುಮತಿ ನೀಡಿದ್ದು ಕೇಂದ್ರದ ಮಾಜಿ ಸಚಿವ ಆಸ್ಕರ್ ಫನಾರ್ಂಡೀಸ್. ಸಿದ್ದರಾಮಯ್ಯ ಸರಕಾರದಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿತ್ತು. ಈ ಹೆದ್ದಾರಿಗೆ ಸರ್ವೀಸ್ ರಸ್ತೆ ಮಾಡಬೇಕಿದೆ. ಹಳ್ಳಿ ಜನ ಈ ಕಡೆಯಿಂದ ಆ ಕಡೆಗೆ ಹೋಗಲು 15-20 ಕಿ.ಮೀ ಸಂಚಾರ ಮಾಡಬೇಕಿದೆ. ಸರ್ವೀಸ್ ರಸ್ತೆ ಮಾಡಿಸಿ ನಂತರ ಟೋಲ್ ಸಂಗ್ರಹಿಸಲಿ ಎಂದು ಅವರು ಹೇಳಿದರು.

ಈ ರಸ್ತೆಯ ಗುಣಮಟ್ಟ ಉತ್ತಮವಾಗಿಲ್ಲ. ಪ್ರಧಾನಿಯಿಂದ ಉದ್ಘಾಟನೆ ಮಾಡಿಸಿ ರೋಡ್ ಶೋ ಮಾಡಲು ತರಾತುರಿಯಲ್ಲಿ ರಸ್ತೆ ಮಾಡಲಾಗಿದೆ. ಬೆಂಗಳೂರು ಬಿಟ್ಟರೆ ಮೈಸೂರು ತಲುಪುವವರೆಗೂ ಎಲ್ಲೂ ವಿಶ್ರಾಂತಿಗೆ ಅವಕಾಶವಿಲ್ಲ. ಮಧುಮೇಹ ಸಮಸ್ಯೆ ಇರುವವರ ಗತಿ ಏನು? ರಾಮನಗರ, ಮಂಡ್ಯ, ಚನ್ನಪಟ್ಟಣ, ಮದ್ದೂರಿನ ಹೊಟೇಲ್ ವ್ಯಾಪಾರಸ್ಥರನ್ನು ನಾಶ ಮಾಡಲಾಗಿದೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
.
‘ಮಾ.9 ರಂದು ನಾವು ದ್ವಿತೀಯ ಪಿಯುಸಿ ಪರೀಕ್ಷೆ, ಶೈಕ್ಷಣಿಕ ಸಂಸ್ಥೆಗಳು, ಸಾರಿಗೆ ಹಾಗೂ ಆಸ್ಪತ್ರೆ ಸೇವೆಗಳಿಗೆ ಅಡ್ಡಿಪಡಿಸುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಕೇವಲ ವ್ಯಾಪಾರ ವಹಿವಾಟುಗಳನ್ನು 2 ಗಂಟೆಗಳ ಕಾಲ ಬಂದ್ ಮಾಡಿ ಭ್ರಷ್ಟ ಸರಕಾರ ಕಿತ್ತೊಗೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದ್ದೇವೆ’


-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News