ಅಮಿತ್ ಶಾಗೆ ಕಪ್ಪ ಕೊಡಲು ಹಣ ಸಂಗ್ರಹ ಮಾಡುತ್ತಿದ್ದಾಗ ವಿರೂಪಾಕ್ಷಪ್ಪ ಮಗ ಲೋಕಾಯುಕ್ತ ಬಲೆಗೆ: ಬಿ.ಕೆ.ಹರಿಪ್ರಸಾದ್ ಆರೋಪ

Update: 2023-03-06 14:19 GMT

ಚಿಕ್ಕಮಗಳೂರು, ಮಾ.6: ಅಮಿತ್ ಶಾ ರಾಜ್ಯಕ್ಕೆ ಬಂದಿದ್ದ ವೇಳೆ ಕಪ್ಪಕಾಣಿಕೆ ಸಲ್ಲಿಸಲು ಅರ್ಜೆಂಟ್ ಅರ್ಜೆಂಟಾಗಿ ದುಡ್ಡು ಕಲೆಕ್ಟ್ ಮಾಡಲು ಹೋಗಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಲೋಕಾಯುಕ್ತರಿಗೆ ಸಿಕ್ಕಿಬಿದಿದ್ದಾರೆ. ಇದಕ್ಕೆ ಅಮಿತ್ ಶಾ ಮತ್ತು ಬಸವ ರಾಜ ಬೊಮ್ಮಾಯಿ ಅವರೇ ನೇರ ಹೊಣೆ ಎಂದು ವಿಪ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯ ಹೊಣೆಹೊತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜೀನಾಮೆ ಕೊಡಬೇಕು. ನಾವು ರಾಜೀನಾಮೆ ಕೇಳುತ್ತಿದ್ದೇವೆ. ಅವರು ಕೊಡುತ್ತಿಲ್ಲ ಆದ್ದರಿಂದ ರಾಜ್ಯ ಬಂದ್ ಕರೆ ನೀಡಿದ್ದೇವೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರ ನಡೆದಿತ್ತು ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ. ಷಡ್ಯಂತ್ರ ಮಾಡಿದವರು ಯಾರು? ಎಂದ ಪ್ರಶ್ನಿಸಿದ ಅವರು, ಬಿಎಸ್‍ವೈ ಅವರನ್ನು ಜಿಲ್ಲೆಯ ಮಹಾನಾಯಕ ಎನ್ನುತ್ತಲೇ ಮುದಿ ಎತ್ತು ಎಂದು ಬಿಜೆಪಿಯವರೇ ಜರಿದರು. ಒಂದು ವರ್ಷದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಬಿಎಸ್‍ವೈ ಕಣ್ಣೀರು ಹಾಕಿಕೊಂಡು ರಾಜೀನಾಮೆ ನೀಡಿದರು. ಇದರ ಹಿಂದಿನ ಷಡ್ಯಂತ್ರ ಯಾರದ್ದು ಎಂದು ಬಸವರಾಜ್ ಬೊಮ್ಮಾಯಿ ಹೇಳಬೇಕು ಎಂದರು.

ಬಿಎಸ್‍ವೈ ಅವರನ್ನು ಬಿಜೆಪಿಯವರು ವೋಟ್ ಮಿಷನ್ ಮಾಡಿಕೊಂಡಿದ್ದಾರೆ. ಒಂದು ಇವಿಎಂ ಮಿಷನ್, ಮತ್ತೊಂದು ಯಡಿಯೂರಪ್ಪ ಓಟ್ ಮಿಷನ್, ಇವರೆರಡೇ ಬಿಜೆಪಿಯವರಿಗೆ ಗೊತ್ತಿರುವುದು. ಆದ್ದರಿಂದ ಅವರನ್ನು ಸಮಾಧಾನ ಮಾಡಲು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಯಡಿಯೂರಪ್ಪ, ಬಿಜೆಪಿ, ಆರೆಸೆಸ್ ಬಗ್ಗೆ ಕಾಂಗ್ರೆಸ್‍ಗೆ ಕನಿಕರವು ಇಲ್ಲ, ಅನುಕಂಪವು ಇಲ್ಲ ಎಂದರು.

ಬಿಜೆಪಿಗೆ ಪ್ರತ್ಯುತ್ತರ ನೀಡಲು ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹುಟ್ಟಿದ್ದೆ ಚಡ್ಡಿಗಳು, ಕರಿಟೋಪಿ, ದೊಣ್ಣೆಯವರಿಗೆ ಉತ್ತರ ಕೊಡಲು. ನಾನು ಬದುಕಿರುವುದು ಅದಕ್ಕೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳುತ್ತಿದ್ದರು. ಶಾಸಕ ಮಾಡಾಳ್ ಪ್ರಕರಣದಲ್ಲಿ ಸಿಕ್ಕಿದೆ. ಆದರೆ ಅದರ ಬಗ್ಗೆ ಮೋದಿ ಮಾತನಾಡುತ್ತಿಲ್ಲ ಎಂದರು.

Similar News