ತುಮಕೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ

Update: 2023-03-06 14:28 GMT

ತುಮಕೂರು: ತುಮಕೂರಿನ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವತಿಯಿಂದ ಮಾರ್ಚ್ 7 ಮತ್ತು 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023ನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆಗಳು ನಡೆದಿವೆ ಎಂದು ವಾಣಿ ಪೆರಿಯೋಡಿ ಮತ್ತು ಕಸಾಪ ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ತಿಳಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಶಾಂತಿ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯವನ್ನು ಆದರ್ಶವಾಗಿ ಇಟ್ಟುಕೊಂಡಿದ್ದು, ಮಹಿಳಾ ಘನತೆ, ಸಮಾನತೆ, ಸ್ವಾಯತ್ತತೆಗಳನ್ನು ಎತ್ತಿ ಹಿಡಿಯುತ್ತಾ ಇದ್ದು, 2023ರ ಮಾರ್ಚ್ 7ರಂದು ಬೆಳಗ್ಗೆ 10 ಗಂಟೆಗೆ ತುಮಕೂರಿನ ಟೌನ್ ಹಾಲ್ ಸರ್ಕಲ್ಲಿನ ‘ಸಾಲುಮರದ ತಿಮ್ಮಕ್ಕ ವೇದಿಕೆ’ಯಲ್ಲಿ ಹಕ್ಕೊತ್ತಾಯ ಜಾಥಾವನ್ನು ಕೇರಳದ ಮಾಜಿ ಆರೋಗ್ಯ ಸಚಿವರು ಹಾಗೂ ಶಾಸಕರಾದ ಕೆ.ಕೆ.ಶೈಲಜಾ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿರವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ನಂತರ ವಿಶೇಷ ಆಹ್ವಾನಿತರೊಡಗೂಡಿ ಅಮಾನಿಕೆರೆಯ ಗಾಜಿನಮನೆಯವರೆಗೆ ಮೆರವಣಿಗೆ ಮೂಲಕ ನಡೆದು, ಸಮಾವೇಶ ನೆರೆಯಲಿದೆ. ಅಲ್ಲಿ ‘ಸೂಲಗಿತ್ತಿ ನರಸಮ್ಮ ವೇದಿಕೆ’ಯಲ್ಲಿ ಸಮಾವೇಶ ಉದ್ಘಾಟನೆಯನ್ನು ತಮಟೆ ನರಸಮ್ಮ ಮತ್ತು ಸ್ಲಂ ಕಲಾ ತಂಡದವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಲಿದ್ದು, ಉದ್ಘಾಟನಾ ಮಾತುಗಳನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ನಾಹೀದ ಝಮ್​ ಝಮ್ ಅವರು ಆಡಲಿದ್ದಾರೆ, ದಿಕ್ಸೂಚಿ ಮಾತುಗಳನ್ನು ಕೇರಳದ ಮಾಜಿ ಸಚಿವರು ಹಾಗೂ ಶಾಸಕರಾದ ಕೆ.ಕೆ.ಶೈಲಜಾ ಮಾತನಾಡಿದರೆ, ಮಹಿಳಾ ಚೈತನ್ಯ ದಿನ ಕುರಿತು ಎಐಎಂಎಸ್‍ಎಸ್‍ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಸುಧಾ ಕಾಮತ್ ಮಾತನಾಡಲಿದ್ದು, ಅಧ್ಯಕ್ಷತೆಯನ್ನು ಬಾ.ಹ.ರಮಾಕುಮಾರಿ ಅವರು ವಹಿಸಲಿದ್ದಾರೆ.

ಮಾರ್ಚ್ 7ರ ಸಂಜೆ 5.30ಕ್ಕೆ ತುಮಕೂರಿನ ಸ್ವತಂತ್ರ ಚೌಕದಲ್ಲಿ ಮೋಂಬತ್ತಿ ಹಿಡಿದು ‘ಕಪ್ಪು ಉಡುಗೆಯಲ್ಲಿ ಮಹಿಳೆಯರು’ ಮೌನ ಜಾಗೃತಿ ಕಾರ್ಯಕ್ರಮ ‘ಸರ್ವ ಜನಾಂಗದ ಶಾಂತಿಯ ದೇಶ’ ಘೋಷವಾಕ್ಯದೊಂದಿಗೆ ನಡೆಯಲಿದೆ, ಪ್ರಾಸ್ತಾವಿಕ ಮಾತುಗಳನ್ನು ಡಾ.ಎಚ್.ಎಸ್.ಅನುಪಮಾ ಆಡಲಿದ್ದಾರೆ ಎಂದು ತಿಳಿಸಿದರು.

ಮಾಚ್ 8ರಂದು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸಾರಾ ಅಬೂಬಕರ್ ವೇದಿಕೆಯಲಿ ದಿಕ್ಸೂಚಿ ಮಾತುಗಳನ್ನು ಬೆಂಗಳೂರಿನ ವಿಹಾನ್ ಆಡಲಿದ್ದು, ಮಹಿಳಾ ದಿನದ ಮಾತುಗಳನ್ನು ಸುಮನಾ ನೆಟ್ಟರ್ ಆಡಲಿದ್ದಾರೆ, ಮಧ್ಯಾಹ್ನ ಮಹಿಳೆ ಮತ್ತು ರಾಜಕೀಯ ಮೀಸಲಾತಿ ಬಗ್ಗೆ ಸಿ.ಜಿ.ಮಂಜುಳ, ಮಹಿಳೆ-ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಡಾ.ಸಬಿತಾ ಬನ್ನಾಡಿ, ಸರಕು ಸಂಸ್ಕøತಿ ಮತ್ತು ಮಹಿಳೆ ಬಗ್ಗೆ ಡಾ.ಸುಶಿ ಕಾಡನಕುಪ್ಪೆ ಹಾಗೂ ಮಹಿಳಾ ಹೋರಾಟ-ಇಂದು ಎಂಬ ವಿಷಯದ ಬಗ್ಗೆ ಪಲ್ಲವಿ ಇಡೂರು ಮಾತನಾಡಲಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಕೋಲಾರದ ಗಮನ ಮಹಿಳಾ ಸಮೂಹದ ಶಾಂತಮ್ಮ ವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಲೇಸ ಸಂಘದ ಅಧ್ಯಕ್ಷರಾದ ಮಲ್ಲಿಕಾಬಸವರಾಜು, ಕವಯತ್ರಿ ಶೈಲಾನಾಗರಾಜು, ರಾಣಿಚಂದ್ರಶೇಖರ್, ಪ್ರವೇಣಿ ಸ್ಪೂರ್ತಿ ಮುಂತಾದವರಿದ್ದರು.

Similar News