ರಾಹುಲ್ ಗಾಂಧಿ ವಿರುದ್ಧ ನಳಿನ್ ಕುಮಾರ್ ಕಟೀಲ್ ಅವಹೇಳನಕಾರಿ ಹೇಳಿಕೆ ವಿಡಿಯೋ ವೈರಲ್

ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆಯ ಅಗತ್ಯವಿದೆ ಎಂದ ಕಾಂಗ್ರೆಸ್

Update: 2023-03-06 15:31 GMT

ಬೆಂಗಳೂರು, ಮಾ. 6: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಅವಹೇಳನಕಾರಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿರುವ ಜನಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ‘ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ‘ಕೋವಿಡ್-19 ಲಸಿಕೆ ತೆಗೆದುಕೊಳ್ಳಬೇಡಿ, ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ’ ಎಂದರು. ಆದರೆ, ‘ಸಿದ್ದರಾಮಯ್ಯ, ರಾಹುಲ್ ಗಾಂಧಿ ಕದ್ದು ರಾತ್ರೋರಾತ್ರಿ ಲಸಿಕೆ ತೆಗೆದುಕೊಂಡರು. ಅವರ ಲಸಿಕೆ ತೆಗೆದುಕೊಂಡ ಕಾರಣಕ್ಕೆ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ ಎಂದು ಎಂಎಲ್‍ಸಿ ಮಂಜುನಾಥ್ ಹೇಳಿದರು’ ಎಂದು ಉಲ್ಲೇಖಿಸಿದರು.

ಕಟೀಲ್ ಹೇಳಿಕೆಯ ವಿಡಿಯೋ ಟ್ವಿಟ್ಟರ್, ಫೇಸ್‍ಬುಕ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ, ಕಟೀಲ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ. ಸುಧಾಕರ್ ಅವರು ನಾನು ಅವರ ಮಾತನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ANI ಸುದ್ದಿ ಸಂಸ್ಥೆಯ ಟ್ವೀಟ್ ಒಂದರಲ್ಲಿ ಉಲ್ಲೇಖಿಸಲಾಗಿದೆ. "ನಮ್ಮ ರಾಜ್ಯಾಧ್ಯಕ್ಷರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ, ನಾನು ಈ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುತ್ತೇನೆ ಮತ್ತು ಈ ಹೇಳಿಕೆಯನ್ನು ಬೆಂಬಲಿಸಲು ನಾನು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

‘ಹುಚ್ಚು ಹೆಚ್ಚಾಗುವ ಮುನ್ನ ಆತನನ್ನು ಆಸ್ಪತ್ರೆಗೆ ದಾಖಲಿಸಿ’: ಕಾಂಗ್ರೆಸ್ ಲೇವಡಿ

'ಮೆದುಳಿಗೂ ನಾಲಿಗೆಗೂ ಕನೆಕ್ಷನ್ ತಪ್ಪಿಹೋರುವ ನಳಿನ್ ಕುಮಾರ್ ಕಟೀಲ್  ಎಂಬ ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆಯ ಅಗತ್ಯವಿದೆ. ಕಟೀಲ್ ಅವರ ಮಾನಸಿಕ ಚಿಕಿತ್ಸೆಯ ವೆಚ್ಚವನ್ನು ಕಾಂಗ್ರೆಸ್ ಭರಿಸಲು ತಯಾರಿದೆ. ಬಸವರಾಜ ಬೊಮ್ಮಾಯಿ ಅವರೇ, ಹುಚ್ಚು ಹೆಚ್ಚಾಗುವ ಮುನ್ನ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ! ಇಲ್ಲವಾದಲ್ಲಿ ರಾಜಕೀಯ ವ್ಯವಸ್ಥೆಗೆ ಕಳಂಕ ತಪ್ಪದು' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

Similar News