ಕಾಂಗ್ರೆಸ್‍ನಲ್ಲಿ ಮೋದಿಗೆ ಸರಿಸಮನಾದ ನಾಯಕ ಇಲ್ಲ: ಬಿ.ಎಸ್.ಯಡಿಯೂರಪ್ಪ

Update: 2023-03-06 17:45 GMT

ಕಲಬುರಗಿ, ಮಾ.6: ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸರಿಸಮನಾದ ಯಾವೊಬ್ಬ ನಾಯಕನು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸೋಮವಾರ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಮನಬಂದಂತೆ ಮಾತನಾಡುತ್ತಿರುವುದನ್ನು ನಿಲ್ಲಿಸಬೇಕು ಎಂದರು.

ಬಿಜೆಪಿ ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾನ-ಮಾನ, ಗೌರವವನ್ನು ನೀಡಿದ್ದು, ಈ ಪರಿಯಾದ ಗೌರವ ಬೇರಾರಿಗೂ ನೀಡಿಲ್ಲ. ನಾನೆ ಸ್ವತಃ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿದ್ದೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಯಾರೆ ಮಾಡಿದರು, ಅದು ಅಕ್ಷಮ್ಯ ಅಫರಾಧವಾಗಿದ್ದು, ಈ ಘಟನೆಗೆ ನಮ್ಮದು ಯಾವ ಬೆಂಬಲವು ಇಲ್ಲ. ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಕರಣವು ತನಿಖೆ ಹಂತದಲ್ಲಿ ಇದೆ. ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿಲ್ಲ. ಅವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಇಂದು ಅಥವಾ ನಾಳೆ ಅವರ ಬಂಧನವಾಗಲಿದ್ದು, ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಮಾತೆ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.

ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಅವರು ಸ್ವಷ್ಟ ನಿಲುವು ಹೇಳಿಲ್ಲ. ಹಾಗೂ ಸಚಿವ ಸೋಮಣ್ಣ ಪಕ್ಷ ಬಿಡುವ ಪ್ರಶ್ನೆ ಉದ್ಬವವಾಗುವುದಿಲ್ಲ ಎಂದ ಅವರು, ಸಚಿವ ನಾರಾಯಣ ಗೌಡರನ್ನು ಗೆಲ್ಲಿಸುವುದಕ್ಕೆ ಆಗದೆ ಇರುವ ಕಡೆಯಲ್ಲಿ ಕಷ್ಟಪಟ್ಟು ಗೆಲ್ಲಿಸಿದ್ದೇವೆ. ಈಗ ಯಾರೆಲ್ಲ ಏನು ಮಾಡುತ್ತಾರೆ ನೋಡೋಣ ಎಂದರು.

Similar News