×
Ad

ಚಾರ್ಮಾಡಿಯ ಸಸ್ಯ ಸಂಪತಿಗೆ ಕೊಳ್ಳಿಯಿಟ್ಟ ಕಾಡ್ಗಿಚ್ಚು: ನಿಂತೇ ಹೋಯಿತು ಅಪಾರ ಹಸಿರಿನ ಉಸಿರು

Update: 2023-03-06 23:46 IST

ಕೊಟ್ಟಿಗೆಹಾರ, ಮಾ.6: ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನಲ್ಲಿ ಕಳೆದ 15 ದಿನಗಳಿಂದ ಉಂಟಾಗುತ್ತಿರುವ ಬೆಂಕಿ ಪ್ರಕರಣಗಳು, ಕಾಡ್ಗಿಚ್ಚು ಹಸಿರು ಸಂಪತ್ತು, ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಆರಂಭವಾದ ಬೆಂಕಿಯ ಪ್ರತಾಪ ಚಾರ್ಮಾಡಿ ಘಾಟಿವರೆಗೂ ಮುಂದುವರಿದಿದೆ.

ನಿರಂತರ ಕಾರ್ಯಾಚರಣೆಯಿಂದ ಹತೋಟಿಗೆ ಬಂದಿದ್ದ ಬೆಂಕಿ ಇದೀಗ ಮತ್ತೆ ಚಾರ್ಮಾಡಿಯ ಚಿಕ್ಕಮಗಳೂರು ವಿಭಾಗದ ಆಲೇಖಾನ್ ಹೊರಟ್ಟಿ ಪ್ರದೇಶದಲ್ಲಿ ತನ್ನ ಪ್ರತಾಪವನ್ನು ಮುಂದುವರಿಸಿದ್ದು ಹಲವಾರು ಹೆಕ್ಟೇರ್ ಅರಣ್ಯ ಪ್ರದೇಶದ ನಾಶಕ್ಕೆ ಕಾರಣವಾಗಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನಳನಳಿಸುವ ಹಸಿರು ಸಂಪತ್ತಿಗೆ ಕಾಡ್ಗಿಚ್ಚು ಕೊಳ್ಳಿ ಇಟ್ಟಿದೆ.

ಬೆಂಕಿಯ ಪ್ರತಾಪಕ್ಕೆ ಇಲ್ಲಿ ವಾಸಿಸುವ ಪ್ರಾಣಿ, ಪಕ್ಷಿ, ಸರೀಸೃಪ, ವನ್ಯಮೃಗಗಳಿಗೂ ಹಾನಿ ಉಂಟಾಗಿರುವ ಸಾಧ್ಯತೆ ಇದೆ. ಕಾಡ್ಗಿಚ್ಚಿನಿಂದ ನೆಲೆ ಕಳೆದುಕೊಂಡಿರುವ ವನ್ಯಜೀವಿಗಳು ನಾಡಿಗೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಮರಮಟ್ಟು ಸಹಿತ ಔಷಧೀಯ ಸಸ್ಯಗಳು ಸುಟ್ಟು ಕರಕಲಾಗಿವೆ. ಹಸಿರು ಹೊದ್ದ ಘಾಟಿ ಪ್ರದೇಶ ಬೆಂಕಿಯ ಕೆನ್ನಾಲಿಗೆಯಿಂದ ಬರಡು ಭೂಮಿಯಾಗುತ್ತಿದೆ.

ಕಾಡ್ಗಿಚ್ಚಿನಿಂದ ಬಿಸಿ ಇನ್ನಷ್ಟು ಹೆಚ್ಚಾಗಿ ಉರಿ ಬಿಸಿಲು, ಚಳಿಯ ವಾತಾವರಣ ನಿರ್ಮಾಣವಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬತ್ತುತ್ತಿರುವ ಜಲಮೂಲಗಳು ನೀರಿನ ಮಟ್ಟ ಸಂಪೂರ್ಣ ಕುಸಿದು ನೀರಿನ ಸಮಸ್ಯೆಗೆ ಕಾರಣವಾಗಿದೆ.

ಕಿಡಿಗೇಡಿಗಳ ಕೃತ್ಯ: ಘಾಟಿ ಪ್ರದೇಶದಲ್ಲಿ ಬೆಂಕಿ ಪ್ರಕರಣಗಳು ಉಂಟಾಗಲು ಮುಖ್ಯ ಕಾರಣ ಕಿಡಿಗೇಡಿಗಳು. ಹಸಿರು ಮತ್ತು ಅರಣ್ಯದ ಮಹತ್ವ ಅರಿಯದ ವಿಕೃತ ಮನಸ್ಸಿನ ಕೆಲವು ಜನರು ಉಂಟು ಮಾಡುವ ಹೇಯ ಕೃತ್ಯಗಳು ಬೆಂಕಿ ಉತ್ಪತ್ತಿಗೆ ಕಾರಣವಾಗುತ್ತಿದೆ. ಘಾಟಿ ಪ್ರದೇಶದಲ್ಲಿ ಅಡುಗೆ, ಧೂಮಪಾನ ಮಾಡುವ ಜತೆ ವಿನಾಕಾರಣ ತರಗೆಲೆಗಳಿಗೆ ಬೆಂಕಿ ಹಚ್ಚುವ ಒಂದಿಷ್ಟು ಮಂದಿ ಕಾಡ್ಗಿಚ್ಚಿಗೆ ಕಾರಣವಾಗಿ ಮನುಷ್ಯರ, ವನ್ಯಜೀವಿಗಳ ಜೀವನದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಲು ಕಾರಣವಾಗುತ್ತಿದ್ದಾರೆ.

ಘಾಟಿ ಪರಿಸರದಲ್ಲಿ ವಿಕೃತ ಜನರ ಅಟ್ಟಹಾಸವಾದರೆ ಜನ ವಾಸ್ತವ್ಯ ಇರುವ ಪ್ರದೇಶಗಳಲ್ಲಿ ಬೆಂಕಿಯ ಕಿಡಿ ಉತ್ಪತ್ತಿ ಮಾಡುವ ವಿದ್ಯುತ್ ಪರಿವರ್ತಕ ತಂತಿಗಳು ಬೆಂಕಿ ಅನಾಹುತಕ್ಕೆ ಮುನ್ನುಡಿ ಇಡುತ್ತಿವೆ.

ಅರಣ್ಯ ಇಲಾಖೆ ಹೋರಾಟ: ಸಿಬ್ಬಂದಿ ಕೊರತೆಯಿಂದ ತತ್ತರಿಸುತ್ತಿರುವ ಅರಣ್ಯ ಇಲಾಖೆಗೆ ಬೆಂಕಿ ಪ್ರಕರಣಗಳು ಸವಾಲಾಗಿ ಪರಿಣಮಿಸುತ್ತಿವೆ. ಕಾಡನ್ನು ಆವರಿಸುವ ಬೆಂಕಿಯನ್ನು ಹತೋಟಿಗೆ ತರುವುದು ಸುಲಭದ ಮಾತಲ್ಲ. ಹಳೇ ಪದ್ಧತಿ ಮೂಲಕವೇ ಬೆಂಕಿ ನಂದಿಸುವ ಪ್ರಕ್ರಿಯೆ ನಡೆಯಬೇಕಿದ್ದು, ಇರುವ ಬೆರಳೆಣಿಕೆ ಸಿಬ್ಬಂದಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತಿದೆ. ಅಹರ್ನಿಶಿಯಾಗಿ ದುಡಿಯುವ ಸಿಬ್ಬಂದಿಗೆ ಇಲ್ಲಿ ಸರಿಯಾದ ನೀರು ಆಹಾರ ವ್ಯವಸ್ಥೆಯೂ ಇಲ್ಲ. ಕಾಡಿನ ಪ್ರದೇಶಕ್ಕೆ ವಾಹನಗಳು ಹೋಗುವ ರಸ್ತೆ ಇಲ್ಲದೆ ಕಾಲ್ನಡಿಗೆ ಮೂಲಕವೇ ಸಾಗಿ ಬೆಂಕಿ ನಂದಿಸಬೇಕು. ಕಾಲ್ನಡಿಗೆ ಮೂಲಕ ಬೆಂಕಿ ಉಂಟಾಗಿರುವ ಸ್ಥಳವನ್ನು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೆ ಬೆಂಕಿ ಹತೋಟಿ ಮೀರಿ ಉರಿಯ ತೊಡಗುತ್ತದೆ.

ಶಿಕಾರಿ ಕಾರಣ: ಚಾರ್ಮಾಡಿ ಘಾಟಿ ಪರಿಸರದಲ್ಲಿ ವಿದ್ಯುತ್ ತಂತಿ ಪರಿವರ್ತಕಗಳಿಲ್ಲ. ಇಲ್ಲಿ ಬೆಂಕಿ ಉಂಟಾಗಲು ಇವು ಕಾರಣವಾಗುವುದೂ ಇಲ್ಲ. ಪ್ರಕೃತಿ ಪ್ರೇಮಿಗಳು ಹೇಳುವ ಪ್ರಕಾರ ಇಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುವುದು ಅರಣ್ಯದೊಳಗೆ ಶಿಕಾರಿಗೆ ತೆರಳುವ ದುರುಳರು. ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಇರುವಿಕೆ ಗಮನಿಸಲು ಇವರು ಹಚ್ಚುವ ಬೆಂಕಿ ಇಡೀ ಅರಣ್ಯವನ್ನು ಸರ್ವನಾಶ ಮಾಡುತ್ತಿದೆ. ಬೆಂಕಿ ಹಚ್ಚುವ ದುರುಳರು ತಮ್ಮ ಕೆಲಸ ಮುಗಿದೊಡನೆ ಅದರ ಬಗ್ಗೆ ಯೋಚಿಸದೇ ಹಿಂದಿರುಗುತ್ತಾರೆ. ಸಹಸ್ರಾರು ಎಕರೆ ಕಾಡು ನಾಶ ಹೊಂದುತ್ತದೆ. ಅರಣ್ಯ ಇಲಾಖೆ ಮತ್ತು ಪ್ರಕೃತಿ ಪ್ರಿಯರು ಎಷ್ಟೇ ಹೋರಾಟ ನಡೆಸಿದರೂವಿನಾಕಾರಣ ಅರಣ್ಯ ಬೆಂಕಿಗೆ ಆಹುತಿಯಾಗುತ್ತಿದೆ.

'ಕರ್ನಾಟಕದುದ್ದಗಲಕ್ಕೂ ಕಾಡುಗಳು ಕಿಡಿಗೇಡಿಗಳಿಂದ ಹಾಗೂ ಕಾಡ್ಗಿಚ್ಚಿ ನಿಂದ ದಹಿಸಿಹೋಗುತ್ತಿವೆ. ಸಕಲೇಶಪುರ ತಾಲೂಕಿನಲ್ಲಿ ಬೆಂಕಿಯನ್ನು ನಂದಿಸಲು ಹೋದ ಅರಣ್ಯ ಇಲಾಖೆಯ ನೌಕರರೊಬ್ಬರು ಜೀವ ತೆತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬಂಡೀಪುರದಲ್ಲಿ ಇಬ್ಬರು ಅರಣ್ಯ ವೀಕ್ಷಕರು ಸಜೀವ ದಹನವಾಗಿದ್ದರು. ದೇವರಮನೆ ಕಣಿವೆಯ ಬಹುತೇಕ ಪ್ರದೇಶವು ಬೆಂಕಿಗಾಹುತಿಯಾಗಿದೆ. ಎರಡು ದಿನಗಳಿಂದ ನೂರಾರು ಎಕರೆ ಅರಣ್ಯ, ಚಾರ್ಮಾಡಿ ಘಾಟಿ ಸಮೀಪವಿರುವ ಅಲೆಕಾನ್ ಗುಡ್ಡ ಸಂಪೂರ್ಣ ಬೆಂಕಿಗಾಹುತಿಯಾಗುತ್ತಿದೆ. ಪ್ರಾಣಿಗಳ, ಅರಣ್ಯ ಇಲಾಖೆಯ ನೌಕರರ ಜೀವವನ್ನು ಕಾಪಾಡಲು ಸರಕಾರ ಕೂಡಲೇ ಅರಣ್ಯ ಇಲಾಖೆಗೆ ಅಗ್ನಿಶಾಮಕ ಹೆಲಿಕಾಪ್ಟರ್ ವ್ಯವಸ್ಥೆ ಒದಗಿಸಬೇಕು'. 

ಕಾರ್ತಿಕ್ ಬೆಳಗೋಡು, ಪರಿಸರವಾದಿ

'ಮಲೆನಾಡು ಚಿಕ್ಕಮಗಳೂರು ಭಾಗದಲ್ಲಿ ಕಾಡ್ಗಿಚ್ಚು ಹೆಚ್ಚಾಗಿದ್ದು, ಕೆಲ ಕಿಡಿಗೇಡಿಗಳಿಂದ ಅರಣ್ಯ ಸುಟ್ಟು ಕರಕಲಾಗಿದೆ. ಹೊಸ ಹುಲ್ಲು ಚಿಗುರಲಿ ಎಂದು ಕೆಲ ಕಿಡಿಗೇಡಿಗಳು ಕಾಡಿಗೆ ಬೆಂಕಿ ಕೊಡುವ ಸಾಧ್ಯತೆ ಹೆಚ್ಚಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ'.

ಕ್ರಾಂತಿ, ಡಿಎಫ್‌ಒ, ಚಿಕ್ಕಮಗಳೂರು

Similar News