ಚುನಾವಣಾ ಆಯುಕ್ತರು ‘ಹೌದಪ್ಪ’ಗಳಾಗಿರುವ ಹೊತ್ತಿನಲ್ಲಿ...

Update: 2023-03-07 07:29 GMT

ಈಗ ಸಿಇಸಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಹೊಸ ಸಮಿತಿಯನ್ನು ರಚಿಸಿದೆ. ಸಿಇಸಿ ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಕೆ.ಎಂ. ಜೋಸೆಫ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ ರಚಿಸಿರುವ ಈ ಹೊಸ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆ ಪ್ರತಿಪಕ್ಷ ನಾಯಕ (ಅಥವಾ ಅತಿದೊಡ್ಡ ವಿರೋಧ ಪಕ್ಷದ ನಾಯಕ) ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಇರುತ್ತಾರೆ. ಈ ಸಮಿತಿಯ ಸಲಹೆ ಮೇರೆಗೆ ರಾಷ್ಟ್ರಪತಿಗಳು ಸಿಇಸಿಯನ್ನು ನೇಮಿಸುತ್ತಾರೆ.

ಈ ಹಿಂದೆ ಕೇಂದ್ರದಲ್ಲಿನ ಯಾವುದೇ ಆಡಳಿತಾರೂಢ ಪಕ್ಷವು ತನಗೆ ಬೇಕಿರುವ ಹೌದಪ್ಪಥರದವರನ್ನು ನೇಮಿಸಬಹುದೆಂಬ ಆತಂಕವಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಈಗ ಸಿಜೆಐ ಮತ್ತು ಪ್ರತಿಪಕ್ಷ ನಾಯಕ ಕೂಡ ಪಾಲ್ಗೊಳ್ಳುವುದು ಹೊಸ ನಿರೀಕ್ಷೆಯನ್ನು ಹುಟ್ಟಿಸಿದೆ. ಮುಂದಿನ ಚುನಾವಣೆ ಹಿನ್ನೆಲೆಯಿಂದಲೂ ಇದು ಮಹತ್ವ ಪಡೆದಿದೆ.

ಚುನಾವಣಾ ಆಯೋಗ ತನ್ನ ಸ್ವಾಯತ್ತತೆ ಕಳೆದುಕೊಂಡು ಬಹುಕಾಲವೇ ಆಗಿಹೋಗಿದೆ. ಮತ್ತೆ ಮತ್ತೆ ಇದನ್ನು ಸುಪ್ರೀಂ ಕೋರ್ಟ್ ಈಚಿನ ದಿನಗಳಲ್ಲಿ ಹೇಳುತ್ತಲೇ ಬಂದಿತ್ತು. ಶೇಷನ್ ಥರದ ಮುಖ್ಯ ಚುನಾವಣಾ ಆಯುಕ್ತರು(ಸಿಇಸಿ) ಬೇಕು ಎಂದಿತ್ತು. ಸ್ವತಃ ಪ್ರಧಾನಿಯೇ ತಪ್ಪುಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತಹ ಸಿಇಸಿ ಬೇಕು ಎಂದಿತ್ತು. ಆಯುಕ್ತರು ಆಳುವವರ ಹೌದಪ್ಪಗಳಾಗಿಬಿಟ್ಟಾಗ ಚುನಾವಣಾ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗುವ ಕುರಿತ ಆತಂಕವೂ ಹಲವು ಬಾರಿ ವ್ಯಕ್ತವಾಗಿತ್ತು.

ಈಗ ಸಿಇಸಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಹೊಸ ಸಮಿತಿಯನ್ನು ರಚಿಸಿದೆ. ಸಿಇಸಿ ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಕೆ.ಎಂ. ಜೋಸೆಫ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ ರಚಿಸಿರುವ ಈ ಹೊಸ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆ ಪ್ರತಿಪಕ್ಷ ನಾಯಕ (ಅಥವಾ ಅತಿದೊಡ್ಡ ವಿರೋಧ ಪಕ್ಷದ ನಾಯಕ) ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಇರುತ್ತಾರೆ. ಈ ಸಮಿತಿಯ ಸಲಹೆ ಮೇರೆಗೆ ರಾಷ್ಟ್ರಪತಿಗಳು ಸಿಇಸಿಯನ್ನು ನೇಮಿಸುತ್ತಾರೆ.

ಈ ಸಂಬಂಧ ಸಂಸತ್ತು ಕಾನೂನು ರೂಪಿಸುವವರೆಗೆ ಈ ಪದ್ಧತಿ ಜಾರಿಯಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ್ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠ ಇಂಥದೊಂದು ಮಹತ್ವದ ತೀರ್ಪನ್ನು ಕೊಟ್ಟಿದೆ.

ಇಂಥ ಮಹತ್ವದ ಸಮಿತಿ ರಚನೆಯ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿರುವ ಹಿನ್ನೆಲೆಯನ್ನು ನೋಡುವ ಮೊದಲು, ಚುನಾವಣಾ ಆಯೋಗ, ಆಯುಕ್ತರ ಈವರೆಗಿನ ನೇಮಕ ವ್ಯವಸ್ಥೆ ಮತ್ತಿತರ ವಿಚಾರಗಳತ್ತ ಒಮ್ಮೆ ಕಣ್ಣು ಹಾಯಿಸಬೇಕು.

ಚುನಾವಣಾ ಆಯೋಗದ ಅಧಿಕಾರಗಳೇನು?

ಭಾರತದ ಸಂವಿಧಾನವು ನಿರ್ದಿಷ್ಟವಾಗಿ ಹೇಳದೆ ಚುನಾವಣಾ ಆಯೋಗಕ್ಕೆ ವ್ಯಾಪಕ ಅಧಿಕಾರವನ್ನು ನೀಡಿದೆ. ಜೂನ್ 15, 1949ರಂದು ಸಂವಿಧಾನ ಸಭೆಯಲ್ಲಿ ಈ ನಿಬಂಧನೆಯ ಬಗ್ಗೆ ಹೇಳುವಾಗ ಅಂಬೇಡ್ಕರ್ ಅವರು, ಇಡೀ ಚುನಾವಣಾ ಯಂತ್ರವು ಕೇಂದ್ರ ಚುನಾವಣಾ ಆಯೋಗದ ಕೈಯಲ್ಲಿರಬೇಕು, ಅದು ಚುನಾವಣಾ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಮತ್ತು ಇತರರಿಗೆ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿದೆ ಎಂದಿದ್ದರು. ಬಳಿಕ ಸಂಸತ್ತು ಆಯೋಗದ ಅಧಿಕಾರಗಳನ್ನು ವ್ಯಾಖ್ಯಾನಿಸಲು ಮತ್ತು ವಿಸ್ತರಿಸಲು ಜನರ ಪ್ರಾತಿನಿಧ್ಯ ಕಾಯ್ದೆ, 1950 ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ, 1951ನ್ನು ಜಾರಿಗೊಳಿಸಿತು. ಸಂವಿಧಾನದ ವಿಧಿ 324ರಂತೆ ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳ ಸಂಪೂರ್ಣ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊಂದಿದೆ ಮತ್ತು ಆ ಕಾರ್ಯವನ್ನು ನಿರ್ವಹಿಸಲು ಅಗತ್ಯ ಅಧಿಕಾರ ಅದಕ್ಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈವರೆಗೆ ಸಿಇಸಿ ನೇಮಕ ಆಗುತ್ತಿದ್ದುದು ಹೇಗೆ?

ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳ ನೇತೃತ್ವದ ಕೇಂದ್ರ ಸರಕಾರದ ಸಚಿವ ಸಂಪುಟದ ಸಲಹೆಯ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ. ಅವರು ಆರು ವರ್ಷಗಳವರೆಗೆ ಅಥವಾ 65 ವರ್ಷ ವಯಸ್ಸಿನವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ. ಅವರು ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನ, ಸಂಬಳ ಮತ್ತು ಸವಲತ್ತುಗಳನ್ನು ಪಡೆಯುತ್ತಾರೆ. ಸಂಸತ್ತಿನ ಮಹಾಭಿಯೋಗದ ಮೂಲಕ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆಯಲು ಸಾಧ್ಯ.

ಚುನಾವಣಾ ಆಯೋಗ ಮೊದಲಿನಿಂದಲೂ ಬಹುಸದಸ್ಯ ಸಂಸ್ಥೆಯಾಗಿರಲಿಲ್ಲ. 1950ರಲ್ಲಿ ಸ್ಥಾಪನೆಯಾದಾಗಿನಿಂದ ಅಕ್ಟೋಬರ್ 15, 1989ರವರೆಗೆ ಮುಖ್ಯ ಚುನಾವಣಾ ಆಯುಕ್ತರು ಮಾತ್ರ ಇದ್ದ ಏಕ ಸದಸ್ಯ ಸಂಸ್ಥೆಯಾಗಿತ್ತು.

ಅಕ್ಟೋಬರ್ 16, 1989ರಿಂದ, ಜನವರಿ 1, 1990ರವರೆಗೆ, ಇದು ಆರ್.ವಿ.ಎಸ್. ಪೆರಿಶಾಸ್ತ್ರಿ (ಸಿಇಸಿ) ಮತ್ತು ಎಸ್.ಎಸ್. ಧನೋವಾ ಮತ್ತು ವಿ.ಎಸ್. ಸೈಗಿಲ್ (ಚುನಾವಣಾ ಆಯುಕ್ತರು) ಇದ್ದ ಮೂವರು ಸದಸ್ಯರ ಸಂಸ್ಥೆಯಾಯಿತು. ಜನವರಿ 2, 1990ರಿಂದ ಸೆಪ್ಟಂಬರ್ 30, 1993ರವರೆಗೆ ಪುನಃ ಏಕಸದಸ್ಯ ಆಯೋಗವಾಯಿತು. ಅಕ್ಟೋಬರ್ 1, 1993ರಿಂದ ಮತ್ತೆ ಮೂವರು ಸದಸ್ಯರ ಆಯೋಗವಾಗಿದೆ.

ಆಯೋಗದ ಈ ಸ್ವರೂಪದಲ್ಲಿನ ಬದಲಾವಣೆಗೆ ಕಾರಣವಾಗಿದ್ದುದು ರಾಜಕೀಯ ಮಧ್ಯಪ್ರವೇಶ. ಚುನಾವಣಾ ಆಯೋಗಕ್ಕೆ ಅಕ್ಟೋಬರ್ 16, 1989ರಂದು ಇನ್ನೂ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಿಸಿದ್ದು ಪ್ರಧಾನಿ ರಾಜೀವ್ ಗಾಂಧಿಯವರ ಕಾಂಗ್ರೆಸ್ ಸರಕಾರ. ಅದರೊಂದಿಗೆ ಚುನಾವಣಾ ಆಯೋಗವನ್ನು ಬಹುಸದಸ್ಯ ಸಂಸ್ಥೆಯನ್ನಾಗಿ ಮಾಡಿತು. 9ನೇ ಸಾರ್ವತ್ರಿಕ ಚುನಾವಣೆಗೆ ಮೊದಲು ಈ ನೇಮಕಾತಿಗಳನ್ನು ಮಾಡಲಾಯಿತು ಮತ್ತು ಚುನಾವಣಾ ಆಯೋಗ ಮತ್ತು ಆಗಿನ ಸಿಇಸಿ ಆರ್.ವಿ.ಎಸ್. ಪೆರಿಶಾಸ್ತ್ರಿ ಅವರ ಸ್ವಾತಂತ್ರ್ಯವನ್ನು ತಗ್ಗಿಸುವ ಪ್ರಯತ್ನವೆಂದೇ ಕಾಂಗ್ರೆಸ್ ಸರಕಾರದ ಆ ಕ್ರಮ ಟೀಕೆಗೊಳಗಾಗಿತ್ತು.

ರಾಜೀವ್ ಗಾಂಧಿ ಸರಕಾರ ಮತ್ತು ಅಂದಿನ ಸಿಇಸಿ ಆರ್.ವಿ.ಎಸ್. ಪೆರಿಶಾಸ್ತ್ರಿ ನಡುವಿನ ಸಂಘರ್ಷವಿತ್ತು. ಈ ಭಿನ್ನಾಭಿಪ್ರಾಯ 1987ರ ರಾಷ್ಟ್ರಪತಿ ಚುನಾವಣೆ ವೇಳೆ ಸರಕಾರಕ್ಕೆ ಅಹಿತಕರ ಸಂದರ್ಭವನ್ನು ತಂದಿಟ್ಟಿತ್ತು. 1989ರ ಲೋಕಸಭಾ ಚುನಾವಣೆಯಲ್ಲಿ ಪೆರಿಶಾಸ್ತ್ರಿ ಇನ್ನೇನು ಮಾಡಿಯಾರೋ ಎಂಬ ಭಯದಿಂದಾಗಿ ರಾಜೀವ್ ಗಾಂಧಿ ಸರಕಾರ ಸಿಇಸಿ ಅಧಿಕಾರ ಮೊಟಕುಗೊಳಿಸಲು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ 9ನೇ ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ಆಯೋಗವನ್ನು ವಿಸ್ತರಿಸಲಾಯಿತು.

ಆದರೆ ಈ ವ್ಯವಸ್ಥೆ ಉಳಿಯಲಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಪ್ರಧಾನಿ ವಿ.ಪಿ. ಸಿಂಗ್ ಅವರ ರಾಷ್ಟ್ರೀಯ ರಂಗ ಸರಕಾರ ಜನವರಿ 2, 1990ರಂದು, ಈ ನಿಯಮಗಳಿಗೆ ತಿದ್ದುಪಡಿ ಮಾಡಿ, ಚುನಾವಣಾ ಆಯೋಗವನ್ನು ಪುನಃ ಏಕಸದಸ್ಯ ಸಂಸ್ಥೆಯನ್ನಾಗಿ ಮಾಡಿತು. ಆಗ ಇಸಿಗಳಲ್ಲಿ ಒಬ್ಬರಾಗಿದ್ದ ಧನೋವಾ ತಮ್ಮನ್ನು ತೆಗೆದುಹಾಕುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಆದರೆ ಅವರ ಅರ್ಜಿಯನ್ನು ವಜಾಗೊಳಿಸಲಾಯಿತು.

ಡಿಸೆಂಬರ್ 12, 1990ರಂದು ಟಿ.ಎನ್. ಶೇಷನ್ ಅವರನ್ನು ಸಿಇಸಿಯಾಗಿ ನೇಮಿಸಲಾಯಿತು. ಶೇಷನ್ ತೀವ್ರ ಸ್ವತಂತ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶೇಷನ್ ಅವರ ದಿಟ್ಟ ನಡೆ ಬಗ್ಗೆ ಅಸಮಾಧಾನವಿದ್ದ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಅಕ್ಟೋಬರ್ 1, 1993ರಂದು ಆಯೋಗವನ್ನು ಮತ್ತೆ ವಿಸ್ತರಿಸಲು ನಿರ್ಧರಿಸಿತು. ಎಂ.ಎಸ್. ಗಿಲ್ ಮತ್ತು ಜಿ.ವಿ.ಜಿ. ಕೃಷ್ಣಮೂರ್ತಿ ಅವರನ್ನು ಚುನಾವಣಾ ಆಯುಕ್ತರುಗಳನ್ನಾಗಿ ನೇಮಿಸಲಾಯಿತು.

ಅದೇ ವೇಳೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ಸೇವಾ ಷರತ್ತುಗಳು) ಕಾಯ್ದೆ, 1991ನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲಾಯಿತು. ಕಾನೂನಿನ ಹೆಸರನ್ನು ಚುನಾವಣಾ ಆಯೋಗ (ಚುನಾವಣಾ ಕಮಿಷನರ್‌ಗಳ ಸೇವಾ ನಿಯಮಗಳು ಮತ್ತು ವ್ಯವಹಾರ) ಕಾಯ್ದೆ, 1991 ಎಂದು ಬದಲಾಯಿಸಲಾಯಿತು. ಸರಕಾರವು ಮೂವರಿಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನವನ್ನು ನೀಡುವ ಮೂಲಕ ಸಿಇಸಿ ಮತ್ತು ಇಸಿಗಳನ್ನು ಸಮಾನರನ್ನಾಗಿಸಿತು. ಅಲ್ಲಿಯವರೆಗೆ ಇಸಿಗಳಿಗೆ ಹೈಕೋರ್ಟ್ ನ್ಯಾಯಾಧೀಶರ ಸ್ಥಾನಮಾನ ಮತ್ತು ಸೌಲಭ್ಯಗಳಿದ್ದವು. ಮೂವರ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ನಿಗದಿಗೊಳಿಸಲಾಯಿತು.

ಶೇಷನ್ ಅವರು ತಮ್ಮ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಇದೆಂದು ಆರೋಪಿಸಿ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರು. ಆದರೆ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತು. ಅಲ್ಲಿಂದ ಚುನಾವಣಾ ಆಯೋಗವು ಬಹು ಸದಸ್ಯ ಸಂಸ್ಥೆಯಾಗಿದ್ದು, ಬಹುಮತದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ.

ಆಯೋಗದ ಸುತ್ತಲಿನ ವಿವಾದಗಳು:

2021ರಲ್ಲಿ, ನಿವೃತ್ತ ಅಧಿಕಾರಿಗಳು ಮತ್ತು ರಾಜತಾಂತ್ರಿಕರ ಗುಂಪು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ, ಚುನಾವಣಾ ಆಯೋಗದ ದುರ್ಬಲ ನಡೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದು ಆಯೋಗದ ಬಿಕ್ಕಟ್ಟು ಎಂದು ಆ ಪತ್ರದಲ್ಲಿ ಹೇಳಲಾಗಿತ್ತು.

2014ರ ಲೋಕಸಭಾ ಚುನಾವಣೆಯ ನಂತರವಂತೂ ಚುನಾವಣಾ ಆಯೋಗದ ಪಾತ್ರದ ಬಗ್ಗೆ ವಿವಾದಗಳ ಸರಣಿಯೇ ಇದೆ. ಕೋವಿಡ್ ಎರಡನೇ ಅಲೆ ಸಮಯದಲ್ಲಿ ಹಲವಾರು ಕೋರ್ಟ್ ಆದೇಶಗಳ ಹೊರತಾಗಿಯೂ ಕೋವಿಡ್ ಸುರಕ್ಷತಾ ಸೂತ್ರ ಅನುಸರಿಸದೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದು ಕಟುಟೀಕೆಗೆ ತುತ್ತಾಗಿತ್ತು. ಎಪ್ರಿಲ್ 2021ರಲ್ಲಿ, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ, ಕೋವಿಡ್ ಎರಡನೇ ಅಲೆಗೆ ಚುನಾವಣಾ ಆಯೋಗ ನೇರ ಹೊಣೆ ಎಂದಿದ್ದರು. ಚುನಾವಣಾ ಆಯೋಗದ ಅಧಿಕಾರಿಗಳನ್ನು ಕೊಲೆ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದೂ ಮದ್ರಾಸ್ ಹೈಕೋರ್ಟ್ ಹೇಳಿತ್ತು.

ಮೇ 2019ರಲ್ಲಿ, ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅವರು ತಮ್ಮ ನಿರ್ಧಾರಗಳನ್ನು ದಾಖಲಿಸದೆ ಕಡೆಗಣಿಸಲಾದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳ ಕುರಿತು ನಿರ್ಧರಿಸುವ ಸಭೆಗಳಿಗೆ ಹಾಜರಾಗುವುದನ್ನು ನಿಲ್ಲಿಸಿದರು. ನೀತಿ ಸಂಹಿತೆ ಉಲ್ಲಂಘನೆಯೆಂದು ಕಾಣಿಸುತ್ತಿದ್ದ ಆರು ಘಟನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದ್ದನ್ನು ಅವರು ಆಕ್ಷೇಪಿಸಿದ್ದರು.

ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಎದ್ದ ಪ್ರಶ್ನೆಗಳು ಕೂಡ, ಹೇಗೆ ಚುನಾವಣಾ ಆಯೋಗ ಅಧಿಕಾರಸ್ಥರ ಕೈಗೊಂಬೆಯಾಗುತ್ತಿದೆ ಎಂಬುದರ ಕಡೆಗೆ ಗಮನ ಸೆಳೆದಿದ್ದವು.

ಈ ಹಿಂದೆ ಅರುಣ್ ಗೋಯೆಲ್ ಅವರನ್ನು ತರಾತುರಿಯಲ್ಲಿ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಸರಕಾರದಲ್ಲಿ ಹಾಲಿ ಕಾರ್ಯದರ್ಶಿಯಾಗಿದ್ದ ಅವರಿಗೆ ಸ್ವಯಂನಿವೃತ್ತಿಗೆ ಸಮ್ಮತಿಸಿ ಬಳಿಕ ಒಂದೇ ದಿನದಲ್ಲಿ ಇಸಿಯಾಗಿ ನೇಮಿಸಲಾಗಿತ್ತು. ಹಲವು ತಿಂಗಳುಗಳಿಂದ ಖಾಲಿಯಿದ್ದ ಹುದ್ದೆಗೆ ನೇಮಕ ಪ್ರಕ್ರಿಯೆ ಒಂದೇ ದಿನದಲ್ಲಿ ದಿಢೀರನೆ ಪೂರ್ಣಗೊಂಡಿದ್ದು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು.

ವಿಪಕ್ಷಗಳಂತೂ ಈಗ ಚುನಾವಣಾ ಆಯೋಗ ಸಂಪೂರ್ಣವಾಗಿ ನರೇಂದ್ರ ಮೋದಿ ಸರಕಾರದ ಕೈಗೊಂಬೆಯೇ ಆಗಿಬಿಟ್ಟಿದೆ ಎಂದು ವ್ಯಾಪಕವಾಗಿ ಆರೋಪ ಮಾಡುತ್ತಿವೆ.

ಹೀಗೆ ಚುನಾವಣಾ ಆಯುಕ್ತರ ನೇಮಕದಲ್ಲಿ ರಾಜಕೀಯ ಮಧ್ಯಪ್ರವೇಶ, ಅಧಿಕಾರಸ್ಥರು ತಮಗೆ ಬೇಕಾದಂತೆ ನಡೆಯುವ ರೀತಿಯನ್ನು ತಪ್ಪಿಸಲೆಂದೇ ಈಗ ಹೊಸ ಸಮಿತಿ ರಚನೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್ ಅವಲೋಕಿಸಿರುವ ಕೆಲವು ಪ್ರಮುಖ ಸಂಗತಿಗಳು ಹೀಗಿವೆ:

ಹಲವಾರು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಿದ್ದರೂ, ಅವಾವುವೂ ಚುನಾವಣಾ ಆಯೋಗದ ನೇಮಕಾತಿಗಾಗಿ ಕಾನೂನು ರೂಪಿಸಿಲ್ಲ. ಅವು ಕಾಯ್ದೆ ತರದೇ ಇರಲು ಕಾರಣವಿದೆ. ಅಧಿಕಾರದಲ್ಲಿರುವ ಪಕ್ಷ ಆಯೋಗದ ಮೂಲಕ ಅಧಿಕಾರದಲ್ಲಿ ಉಳಿಯುವ ದಾರಿಯನ್ನು ಹುಡುಕುತ್ತಿರುತ್ತದೆ. ಕಾನೂನಾತ್ಮಕ ಆಡಳಿತವನ್ನು ಖಾತರಿಪಡಿಸದ ಚುನಾವಣಾ ಆಯೋಗ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗುತ್ತದೆ.

ವ್ಯಾಪಕ ಅಧಿಕಾರಗಳನ್ನು ಅದು ಕಾನೂನುಬಾಹಿರವಾಗಿ ಅಥವಾ ಅಸಾಂವಿಧಾನಿಕವಾಗಿ ಚಲಾಯಿಸಿದರೆ, ಅದು ರಾಜಕೀಯ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

ಒಬ್ಬ ಪ್ರಾಮಾಣಿಕ ವ್ಯಕ್ತಿ ಸಾಮಾನ್ಯವಾಗಿ ನಿರ್ಭೀತನಾಗಿ ಅಧಿಕಾರಸ್ಥರು, ಬಲಾಢ್ಯರನ್ನು ಎದುರಿಸುತ್ತಾನೆ.

ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಸಾಮಾನ್ಯ ವ್ಯಕ್ತಿಯು ಆ ಪ್ರಾಮಾಣಿಕ ವ್ಯಕ್ತಿಯ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತಾನೆ.

ಚುನಾವಣಾ ಆಯೋಗದ ನೇಮಕಾತಿಗಾಗಿ ಕಾನೂನು ರೂಪಿಸದಿರುವುದು ಕಾನೂನಿನಲ್ಲಿ ಒಂದು ಖಾಲಿಭಾಗದಂತಿದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಈಗ ಚುನಾವಣಾ ಆಯ್ಕೆ ಪ್ರಕ್ರಿಯೆಯಲ್ಲಿ ಸಿಜೆಐ ಕೂಡ ಸೇರ್ಪಡೆಯಾಗುವುದು ಮಹತ್ವದ ಪಾತ್ರ ವಹಿಸಲಿದೆ ಎಂದಂತೂ ಹೇಳಬಹುದು. ಈ ಹಿಂದೆ ಕೇಂದ್ರದಲ್ಲಿನ ಯಾವುದೇ ಆಡಳಿತಾರೂಢ ಪಕ್ಷವು ತನಗೆ ಬೇಕಿರುವ ಹೌದಪ್ಪ ಥರದವರನ್ನು ನೇಮಿಸಬಹುದೆಂಬ ಆತಂಕವಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಈಗ ಸಿಜೆಐ ಮತ್ತು ಪ್ರತಿಪಕ್ಷ ನಾಯಕ ಕೂಡ ಪಾಲ್ಗೊಳ್ಳುವುದು ಹೊಸ ನಿರೀಕ್ಷೆಯನ್ನು ಹುಟ್ಟಿಸಿದೆ. ಮುಂದಿನ ಚುನಾವಣೆ ಹಿನ್ನೆಲೆಯಿಂದಲೂ ಇದು ಮಹತ್ವ ಪಡೆದಿದೆ.

ಆದರೆ ಸದ್ಯಕ್ಕೆ ಚುನಾವಣಾ ಆಯೋಗದ ಮೂವರೂ ಆಯುಕ್ತರ ಸ್ಥಾನ ಭರ್ತಿಯಾಗಿದೆ. ಹಾಗಾಗಿ ಇದರಲ್ಲಿ ಯಾವುದೇ ಸ್ಥಾನ ಖಾಲಿಯಾಗಿ ಹೊಸ ನೇಮಕಾತಿ ಆಗುವಾಗ ಅಥವಾ ಸರಕಾರ ಈ ವಿಷಯದಲ್ಲಿ ಹೊಸ ಕಾನೂನು ರೂಪಿಸುವವರೆಗೆ ಮಾತ್ರ ಸುಪ್ರೀಂ ಕೋರ್ಟ್‌ನ ಈ ಆದೇಶ ಜಾರಿಯಲ್ಲಿರಲಿದೆ.

Full View