×
Ad

ಚಿಕ್ಕಮಗಳೂರು | ಬಾಳೆಹೊನ್ನೂರಿನಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಕಿಡಿಗೇಡಿ ಪೊಲೀಸ್ ಬಲೆಗೆ: ಇಬ್ಬರು ನಾಪತ್ತೆ

ನೂರಾರು ಎಕರೆ ಅರಣ್ಯ ಭಸ್ಮ, ಕಾಡ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ

Update: 2023-03-07 20:25 IST

ಚಿಕ್ಕಮಗಳೂರು, ಮಾ.7: ಬಸವನಕೋಟೆ ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಯೋರ್ವನನ್ನು ಎನ್.ಆರ್.ಪುರ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಯ ಕಸ್ಕೆಬೈಲು ಗ್ರಾಮದ ಬಸವನಕೋಟೆ ಅರಣ್ಯದಲ್ಲಿ ಕಳೆದ ರವಿವಾರ ರಘು ಎಂಬಾತ ತನ್ನ ಇಬ್ಬರು ಸ್ನೇಹಿತರಾದ ಕುಮಾರ್ ಹಾಗೂ ವೆಂಕಟೇಶ್ ಜೊತೆ ಸೇರಿ ಕಾಡಿಗೆ ಬೆಂಕಿ ಹಚ್ಚಿದ್ದರು. ಬೆಂಕಿಯಿಂದಾಗಿ ಹಲವು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅರಣ್ಯಕ್ಕೆ ಬೆಂಕಿ ಹಾಕಿದ್ದ ಮೂವರು ಆರೋಪಿಗಳ ಪೈಕಿ ರಘು ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.

ಕಿಡಿಗೇಡಿಗಳ ಅಟ್ಟಹಾಸಕ್ಕೆ ಹಸಿರು ಹೊದ್ದಿರುವ ಕಾನನ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿರುವುದು ಒಂದೆಡೆಯಾದರೇ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಾಣಕ್ಕೂ ಕುತ್ತು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

'ಕಿಡಿಗೇಡಿಗಳ ಕೃತ್ಯದಿಂದ ಕಾಡ್ಗಿಚ್ಚು ಈ ಬಾರೀ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿ ಕೊಳ್ಳುತ್ತಿದೆ. ವಾತವರಣದಲ್ಲಿ ಉಷ್ಠಾಂಶ ಜಾಸ್ತಿಯಾಗಿದೆ ಹಾಗೂ ತೇವಾಂಶ ಕಡಿ ಮೆಯಾಗಿದೆ. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಬೆಂಕಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೊಸ ಹುಲ್ಲು ಚೆನ್ನಾಗಿ ಬರಲಿ ಎಂದು ಮತ್ತು ತೋಟಗಳ ರಕ್ಷಣೆಗೆ ಅಜ್ಞಾನ ದಿಂದ ಕೆಲವರು ಇಂತಹ ಕೃತ್ಯ ಎಸಗುತ್ತಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಕಡಿ ವಾಣ ಹಾಕಲು ಅರಣ್ಯ ಇಲಾಖೆ ಮುಂದಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಕಿ ತಡೆಗೆ ಹೆಚ್ಚಿನ ಸಿಬ್ಬಂದಿ ಮತ್ತು ವಾಹನ ಕಾಯ್ದಿರಿಸಲಾಗಿದೆ. ಬೆಂಕಿ ನಿಯಂತ್ರಣಕ್ಕೆ ತಂಡಗಳನ್ನು ರಚಿಸಲಾಗಿದೆ. ಈ ಬಾರಿ ಬಿಸಿಲಿನ ಕಾವು ಹೆಚ್ಚಿರುವುದರಿಂದ ಸಣ್ಣ ಬೆಂಕಿಯೂ ತೀವ್ರವಾಗುತ್ತಿದೆ. ಅಲ್ಲದೇ ತೀವ್ರ ಗಾಳಿ ಇರುವುದರಿಂದ ಬೆಂಕಿ ವೇಗವಾಗಿ ಹರಡುತ್ತಿದೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಡು ಬಂದಿದ್ದ ಕಾಡ್ಗಿಚ್ಚು ಸದ್ಯ ನಿಯಂತ್ರಣಕ್ಕೆ ಬಂದಿದೆ'.

- ಕ್ರಾಂತಿ, ಡಿಎಫ್‍ಇ


 

Similar News