×
Ad

ಬಿಜೆಪಿಯ ಮನೆ ತುಂಬುತ್ತಿದೆ, ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಮನೆ ಖಾಲಿಯಾಗುತ್ತಿವೆ: ನಳಿನ್ ಕುಮಾರ್ ಕಟೀಲ್

Update: 2023-03-08 00:25 IST

ಬೆಂಗಳೂರು, ಮಾ. 7: ‘ಬಿಜೆಪಿಯ ಮನೆ ತುಂಬುತ್ತಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಮನೆಗಳು ಖಾಲಿ ಆಗುತ್ತಿವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರು ಒಪ್ಪಿಕೊಂಡಿದ್ದಾರೆ. ರಾಜ್ಯದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ದೇಶದ ಅಭಿವೃದ್ಧಿ, ರಾಜ್ಯದ ಕಲ್ಯಾಣ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಭಾವನೆ ಜನರಲ್ಲಿದೆ’ ಎಂದು ಹೇಳಿದರು.

‘ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ. 3 ರಾಜ್ಯಗಳ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಪಕ್ಷವು ಶೂನ್ಯದತ್ತ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ವಿರೋಧ ಪಕ್ಷವಾಗಲು ನಾಲಾಯಕ್ ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ಕಟೀಲ್ ವಿಶ್ಲೇಷಿಸಿದರು.

ಅಧಿಕಾರ ಗಳಿಸುವ ರಾಜ್ಯದ ಕಾಂಗ್ರೆಸ್ಸಿಗರ ಕನಸು ಕೇವಲ ಹಗಲುಗನಸಾಗಲಿದೆ. ಚೆನ್ನಾಗಿ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಕಟೀಲ್ ಕರೆ ನೀಡಿದರು.

ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಸಾಮಾಜಿಕ ಕಾರ್ಯಕರ್ತ ಸೀಕಲ್ ರಾಮಚಂದ್ರಗೌಡ, ಉದ್ಯಮಿ ಎಸ್.ವಿ.ಆನಂದ ಗೌಡ, ಗ್ರಾ.ಪಂ.ಸದಸ್ಯ ಟಿ.ಪಿ.ಶ್ರೀಧರ್, ಸಿನಿಮಾ ನಿರ್ಮಾಪಕ ವಿಜಯ್‍ಕುಮಾರ್, ಸ್ಥಳೀಯ ಮುಖಂಡರುಗಳಾದ ಮಂಜುನಾಥ್ ಭಕ್ತರಹಳ್ಳಿ, ಮೂರ್ತಿ ಸೊನ್ನೆನಹಳ್ಳಿ, ರಾಜು ಬಳುವನಹಳ್ಳಿ, ಸುರೇಶ್ ಮಿಟ್ಟಿಮರಿ, ವೆಂಕಟರಾಮ್ ರೆಡ್ಡಿ, ವಿರೇಂದ್ರ, ನಾಗರಾಜ್ ಪಕ್ಷಕ್ಕೆ ಸೇರ್ಪಡೆಯಾದರು. ನಿವೃತ್ತ ಐಎಎಸ್ ಅಧಿಕಾರಿ ಎಂ.ಡಿ.ಲಕ್ಷ್ಮೀನಾರಾಯಣ್ ಹಾಜರಿದ್ದರು.

Similar News