×
Ad

'ಕೊರೋನ ವೇಳೆ 1ಕೆಜಿ ಅಕ್ಕಿ ಕೊಡಲು ಯೋಗ್ಯತೆ ಇಲ್ಲದವರು': ಸೀರೆ ಹಂಚಿದ ಬಿಜೆಪಿ ಮುಖಂಡರ ವಿರುದ್ಧ ಗ್ರಾಮಸ್ಥರ ಆಕ್ರೋಶ

''ರಸ್ತೆಯಲ್ಲೇ ಸೀರೆ ಸುಟ್ಟು ಸಿಟಿ ರವಿ ಬೆಂಬಲಿಗರಿಗೆ ತರಾಟೆ''

Update: 2023-03-08 19:20 IST

ಚಿಕ್ಕಮಗಳೂರು, ಮಾ.8: ಕಾಫಿನಾಡಿನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಚುನಾವಣೆ ಘೋಷಣೆಗೂ ಮುನ್ನ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ತಮ್ಮದೇಯಾದ ಕಸರತ್ತು ಮಾಡುತ್ತಿವೆ. ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಮುಖಂಡರು ಮತದಾರರಿಗೆ ಯುಗಾದಿ ಹಬ್ಬದ ಅಂಗವಾಗಿ ಸೇರೆ ಹಂಚಿಕೆ ಮಾಡಲು ಹೋಗಿ ಗ್ರಾಮಸ್ಥರಿಂದ ಛೀಮಾರಿ ಹಾಕಿರುವುದಲ್ಲದೇ ಸೀರೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಿಟಿ ರವಿ ಅವರ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಸ್ಥಳೀಯ ಬಿಜೆಪಿ ಮುಖಂಡರು  ಭಕ್ತರಹಳ್ಳಿ ಹಾಗೂ ಮಲ್ಲೇನಹಳ್ಳಿ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಸೀರೆ ಹಂಚಿಕೆ ಮಾಡುತ್ತಿದ್ದ ವೇಳೆ ಗ್ರಾಮಸ್ಥರು ಮುಖಂಡರನ್ನು ತಡೆದು ತರಾಟೆಗೆ ಪಡೆದುಕೊಂಡಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಗ್ರಾಮದ ವ್ಯಕ್ತಿಯೊಬ್ಬರು ಸೀರೆಗಳಿಗೆ ಬೆಂಕಿ ಹಚ್ಚಿ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಬಿಜೆಪಿ ಮುಖಂಡರು ಹಂಚಿದ್ದಾರೆಂದು ಹೇಳಲಾಗುತ್ತಿರುವ ಸೀರೆಗಳನ್ನು ಸುಟ್ಟು ಹಾಕಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಳೆದ 5 ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಗೆದ್ದ ಶಾಸಕರು ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಗ್ರಾಮಕ್ಕೆ ಮೂಲಸೌಕರ್ಯಗಳನ್ನೂ ಒದಗಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸೆಳೆದುಕೊಳ್ಳಲು ಸೀರೆ ಹಂಚಿಕೆ ಮಾಡಿ ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ತಿನ್ನಲು ಅನ್ನ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ 1ಕೆಜಿ ಅಕ್ಕಿ ನೀಡಲೂ ಯೋಗ್ಯತೆ ಇಲ್ಲದವರು ಈಗ ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ ಹಂಚುತ್ತಿರುವುದು ನಾಚಿಕೆಗೇಡಿನ ಸಂಗತಿ. ಗ್ರಾಮದ ಮಹಿಳೆಯರು ಒಂದು ಸೀರೆಗೆ ಗತಿ ಇಲ್ಲದಷ್ಟು ನಿರ್ಗತಿಕರಾಗಿಲ್ಲ ಎಂದು ಈ ವೇಳೆ ಸೀರೆ ಹಂಚಿಕೆ ಮಾಡಿದ್ದ ಮುಖಂಡರ ವಿರುದ್ಧ ಗ್ರಾಮಸ್ಥರು ಹರಿಹಾಯ್ದಿದ್ದಾರೆ.

Similar News