ವಿಧಾನಸಭಾ ಚುನಾವಣೆಯಲ್ಲಿ ಗಂಗಾಮತ ಸಮಾಜಕ್ಕೆ 10ರಿಂದ 12 ಟಿಕೆಟ್ ಕೊಡಿ: ಮೀನುಗಾರರ ಸಂಘ ಒತ್ತಾಯ
ಬೆಂಗಳೂರು, ಮಾ.8: ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಸಂಖ್ಯೆಯಲ್ಲಿರುವ ಅತಿ ಹಿಂದುಳಿದ ವರ್ಗಕ್ಕೆ ಸೇರಿರುವ ಗಂಗಾಮತ ಸಮಾಜಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 10ರಿಂದ 12 ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ರಾಷ್ಟ್ರೀಯ ಮೀನುಗಾರರ ಸಂಘ ಒತ್ತಾಯಿಸಿದೆ.
ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಹೇಜ್ಮಾಂಡಿ, ರಾಜ್ಯದ 224 ಕ್ಷೇತ್ರಗಳ ಪೈಕಿ 56 ಮತಕ್ಷೇತ್ರಗಳಲ್ಲಿ 25ರಿಂದ 90 ಸಾವಿರಕ್ಕೂ ಹೆಚ್ಚು ನಮ್ಮ ಸಮುದಾಯದ ಮತದಾರರನ್ನು ಹೊಂದಿದ್ದೇವೆ. 15ರಿಂದ 20 ಜನ ಪ್ರಬಲ ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುತ್ತಾರೆ. ಆದುದರಿಂದ ಎಲ್ಲ ರಾಜಕೀಯ ಪಕ್ಷಗಳ ಅಧ್ಯಕ್ಷರು ನಮ್ಮ ಸಮುದಾಯದ ಜನಸಂಖ್ಯೆ ಮತ್ತು ಸಮಾಜಮುಖಿ ಕೆಲಸಗಳನ್ನು ಗಮನಿಸಿ, ಪ್ರಬಲ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮೀನುಗಾರರು ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯಲ್ಲಿ ಶಾಸಕರಿಲ್ಲ. ಆದ್ದರಿಂದ ಕನಿಷ್ಠ 12 ಕ್ಷೇತ್ರಗಳಲ್ಲಿ ಮೀನುಗಾರರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ, ಚುನಾವಣೆಯಲ್ಲಿ ಮತದಾನದ ಮೂಲಕ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಎಚ್ಚರಿಸಿದರು.