ಪದವೀಧರ ಶಿಕ್ಷಕರ ನೇಮಕಾತಿ ಪಟ್ಟಿ ಪ್ರಕಟ: ಸಚಿವ ಬಿ.ಸಿ.ನಾಗೇಶ್

Update: 2023-03-08 15:20 GMT

ಬೆಂಗಳೂರು, ಮಾ.8:ಪದವೀಧರ (6ರಿಂದ 8ನೇ ತರಗತಿ) ಶಿಕ್ಷಕರ ನೇಮಕಾತಿಯ 1:1 ಅನುಪಾತದ ಅಂತಿಮ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಲಾಗಿದೆ ಎಂದುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಅಂತಿಮ ಪಟ್ಟಿಯಾಗಿದ್ದು, ತಾತ್ಕಾಲಿಕ ಪಟ್ಟಿಗೆ ಬಂದ 700ಕ್ಕೂ ಹೆಚ್ಚಿನ ಆಕ್ಷೇಪಣೆಗಳನ್ನು ಪರಿಶೀಲಿಸಿ, ಕೆಲವು ಅಂಶಗಳನ್ನು ಪರಿಗಣಿಸಿ ಆನಂತರ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದರು.

ಹೈಕೋರ್ಟ್ ಆದೇಶದಂತೆ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದ ಮಹಿಳಾ ಅಭ್ಯರ್ಥಿಗಳನ್ನೂ ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಅದಕ್ಕೂ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ನಂತರ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಇದೀಗ 13,351 ಮಂದಿಯ ಅಂತಿಮ ಆಯ್ಕೆ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದರು.

ಆಯ್ಕೆಯಾದ ಅಭ್ಯರ್ಥಿಗಳ ಎಲ್ಲ ಮೂಲ ದಾಖಲೆಗಳ ಪರಿಶೀಲನೆ ಸೇರಿದಂತೆ ಇನ್ನಿತರೆ ಪ್ರಕ್ರಿಯೆಗಳನ್ನೂ ಆದಷ್ಟು ಬೇಗ ಪೂರ್ಣಗೊಳಿಸಿ ಮೇ-ಜೂನ್‍ನಿಂದ ಆರಂಭವಾಗುವ ಮುಂದಿನ ಶೈಕ್ಷಣಿಕ ಸಾಲಿನ ವೇಳೆಗೆ ಶಾಲೆಗಳಿಗೆ ಕರ್ತವ್ಯಕ್ಕೆ ನಿಯೋಜಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

Similar News