ವಿಜಯನಗರ ಜಿಲ್ಲೆಯಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಸಚಿವ ಆನಂದ್ ಸಿಂಗ್

Update: 2023-03-08 15:25 GMT

ಬೆಂಗಳೂರು: ಮಾ.8: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿ ಹಂಪಿ ಶುಗರ್ಸ್ ಪ್ರೈ.ಲಿ. ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲಿದ್ದು, ಇದಕ್ಕೆ ಸಂಪುಟ ಸಭೆಯ ಒಪ್ಪಿಗೆ ದೊರೆತಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿತ್ತು. ಇದೀಗ 84 ಎಕರೆ ಪ್ರದೇಶದಲ್ಲಿ ಹಂಪಿಶುಗರ್ಸ್ ಕಾರ್ಖಾನೆ ತಲೆ ಎತ್ತಲಿದೆ. ಇದಕ್ಕೆ ಬೇಕಾದ ಸ್ಥಳವನ್ನು ನೀಡಲು ಕಂದಾಯ ಇಲಾಖೆ ಒಪ್ಪಿಗೆಯನ್ನು ಸೂಚಿಸಿದೆ. ಜಂಬೂನಾಥನಹಳ್ಳಿಯಲ್ಲಿ 484 ಕೋಟಿ ರೂ.ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಹಂಪಿ ಶುಗರ್ಸ್ ಪ್ರೈ.ಲಿ.ಕಾರ್ಖಾನೆ ಸಂಸದರಾದ ಜಿ.ಎಂ.ಸಿದ್ದೇಶ್ವರ ಒಡೆತನದ ಕಾರ್ಖಾನೆಯಾಗಿದೆ ಎಂದರು.  

ಇದೀಗ ನೂತನ ಕಾರ್ಖಾನೆ ಆರಂಭವಾಗುವುದರಿಂದ ಸ್ಥಳೀಯವಾಗಿ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದ್ದು, ಶೀಘ್ರವೇ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ಆರಂಭವಾಗಲಿದೆ. ಸಕ್ಕರೆ ಕಾರ್ಖಾನೆಯನ್ನು ಪುನಃ ಸ್ಥಾಪಿಸಬೇಕೆಂಬುದು ಇಲ್ಲಿನ ಸ್ಥಳೀಯರ ಬೇಡಿಕೆಯಾಗಿತ್ತು. ಮನವಿಗೆ ಸ್ಪಂದಿಸಿ ಕಾರ್ಖಾನೆ ಸ್ಥಾಪಿಸಲು ಸಹಕರಿಸಿದ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Similar News