ಗಣಿಭಾದಿತ ಪ್ರದೇಶಗಳಲ್ಲಿ ಪರಿಸರ ಪುನಃಶ್ಚೇತನ ಯೋಜನೆ ಅನುಷ್ಠಾನ: ಸಂಪುಟ ಸಭೆ ತೀರ್ಮಾನ

ರಾಷ್ಟ್ರೋತ್ಥಾನ ಪರಿಷತ್‍ಗೆ ಜಮೀನು ಮಂಜೂರು

Update: 2023-03-08 17:29 GMT

ಬೆಂಗಳೂರು, ಮಾ.8: ಸುಪ್ರೀಂಕೋರ್ಟ್ ಆದೇಶದನ್ವಯ ಗಣಿಭಾದಿತ ಪ್ರದೇಶಗಳಲ್ಲಿ ಸಮಗ್ರ ಗಣಿ ಪರಿಸರ ಪುನಃಶ್ಚೇತನ ಯೋಜನೆಯಡಿಯಲ್ಲಿ ನೇರ ಇಲಾಖೆಗಳಿಂದ(ಲೈನ್ ಡಿಪಾರ್ಟ್‍ಮೆಂಟ್ಸ್) ಆಡಳಿತಾತ್ಮಕ ಅನುಮೋದನೆ ಕೋರಿ ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ಮತ್ತು ರೈಲ್ವೆ ಮೂಲಭೂತ ಸೌಕರ್ಯ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮ(ಕೆಎಂಇಆರ್‍ಸಿ)ಕ್ಕೆ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಒಡಿಶಾ ಮಾದರಿಯಲ್ಲಿ ನಾವು ಗಣಿಭಾದಿತ ಪ್ರದೇಶಗಳ ಅಭಿವೃದ್ಧಿ ಮಾಡಲಿದ್ದೇವೆ. ಈ ಹಿಂದೆ ಯೋಜನೆಗಳಿಗೆ ಡಿಪಿಆರ್ ಮಾಡಿಕೊಟ್ಟ ನಂತರ, ಅದು ಸಂಪುಟ ಸಭೆಯ ಮುಂದೆ ಬರಬೇಕೇ, ಬೇಡವೆ ಎಂಬುದರ ಕುರಿತು ಗೊಂದಲ ಇತ್ತು. ಇದೀಗ, ಆಯಾ ಇಲಾಖೆಗಳು ಹಾಗೂ ಕೆಎಂಇಆರ್ ಸಮಿತಿಯೆ ಅನುಮೋದನೆ ನೀಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.

ಈ ಯೋಜನೆಯ ಅನುಷ್ಠಾನದಿಂದಾಗಿ ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು, ರಾಯಚೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಕನಿಷ್ಠ 24 ಸಾವಿರ ಕೋಟಿ ರೂ.ಗಳು ಈ ಯೋಜನೆಯಡಿ ಬಳಕೆಯಾಗಲಿದ್ದು, ಅದರಲ್ಲಿ 17ಸಾವಿರ ಕೋಟಿ ರೂ.ಗಳು ಬಳ್ಳಾರಿ ಹಾಗೂ ಹೊಸಪೇಟೆಗೆ ಲಭ್ಯವಾಗಲಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಗೆ 1,200ಕೋಟಿ ರೂ.ಸಿಗುತ್ತದೆ ಎಂದು ಮಾಧುಸ್ವಾಮಿ ಹೇಳಿದರು.

ಉಪ ಖನಿಜ ನೀತಿ: ಉಪ ಖನಿಜ ನೀತಿಯನ್ನು ಮಾಡಲು ನಿರ್ಧರಿಸಿದ್ದೇವೆ. ಅದರಡಿಯಲ್ಲಿ ಕ್ವಾರಿ, ಕ್ರಷಿಂಗ್, ಸರಬರಾಜು, ಜಲ್ಲಿ ಕ್ರಷರ್, ಎಂ.ಸ್ಯಾಂಡ್ ಸರಬರಾಜು, ಗಣಿ ಮಂಜೂರಾತಿ, ಲೀಸ್ ನಿಯಮಗಳನ್ನು ಸುಲಭ ಮಾಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ನಾವು ಘೋಷಣೆ ಮಾಡಿದ್ದೆವು. ಇಡೀ ರಾಜ್ಯದಲ್ಲಿ ಒಂದೆ ರೀತಿಯ ರಾಯಲ್ಟಿ ಇರಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಳಾಯಿನಲ್ಲಿರುವ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೀನು ಸಂಸ್ಕರಣಾ ಸ್ಥಾವರವನ್ನು 25 ಕೋಟಿ ರೂ.ವೆಚ್ಚದಲ್ಲಿ(ಕೇಂದ್ರದ ಪಾಲು 10.92 ಕೋಟಿ ರೂ.)ಮರೈನ್ ಎಕ್ಸ್‍ಪೋರ್ಟ್ ಯೂನಿಟ್ ಆಗಿ ಉನ್ನತೀಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ರಾಜ್ಯ ಸರಕಾರಿ ನೌಕರರ ವೇತನವನ್ನು ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ಹೆಚ್ಚಳ ಮಾಡಿರುವುದರಿಂದ ಸರಕಾರಕ್ಕೆ ವಾರ್ಷಿಕ 7246.85 ಕೋಟಿ ರೂ.ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ರಾಯಚೂರು ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ 219 ಕೋಟಿ ರೂ.ಪರಿಷ್ಕøತ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನಗಳನ್ನು ಸಮಾಪನಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

2022-23ನೆ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳು ಮೋಟಾರು ವಾಹನ ತೆರಿಗೆ ಮೊತ್ತ 166.99 ಕೋಟಿ ರೂ.ಗಳನ್ನು ಸರಕಾರಕ್ಕೆ ಪಾವತಿಸುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 2022-23ನೆ ಸಾಲಿನ ಸರಕಾರದ ವಿವೇಚನಾ ನಿಧಿ ಕ್ರಿಯಾ ಯೋಜನೆಯಡಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್, ಎಲ್‍ಎಂಎಸ್ ಜೊತೆಗೆ ಹೈಬ್ರೀಡ್ ಕಲಿಕೆ ಸೌಲಭ್ಯ, ವಿಡಿಯೋ ಕಾನ್ಫರೆನ್ಸಿಂಗ್, ಮಾನಿಟರಿಂಗ್ ಅಳವಡಿಸುವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು 13.69 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಆಲಮಟ್ಟಿ ಜಲಾಶಯ ಬಳಿ 13 ಕೋಟಿ ರೂ.ವೆಚ್ಚದಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರ ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಗಿಣಿಗೇರಾ-ರಾಯಚೂರು, ತುಮಕೂರು-ರಾಯದುರ್ಗ, ಬಾಗಲಕೋಟೆ-ಕುಡಚಿ ಮತ್ತು ಚಿಕ್ಕಮಗಳೂರು-ಬೇಲೂರು ನೂತನ ರೈಲು ಮಾರ್ಗಗಳ ಯೋಜನೆಗಳ ಪರಿಷ್ಕøತ ಅಂದಾಜುಗಳಿಂದ ಹೆಚ್ಚಾಗಿರುವ ರಾಜ್ಯದ ಪಾಲಿನ ಮೊತ್ತ 964.41 ಕೋಟಿ ರೂ.ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಭಾರತ ಸರಕಾರದ ‘4-ಜಿ ಸ್ಯಾಚುರೇಶನ್ ಪ್ರಾಜೆಕ್ಟ್’ ಕಾರ್ಯಕ್ರಮದ ಅಡಿಯಲ್ಲಿ ದೂರ ಸಂಪರ್ಕ ಜಾಲವಿಲ್ಲದ ಗ್ರಾಮಗಳಲ್ಲಿ ದೂರ ಸಂಪರ್ಕ ಸ್ಥಾವರಗಳನ್ನು ಸ್ಥಾಪಿಸಲು, ಅಂತಹ 1200-1300 ಗ್ರಾಮಗಳಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಗೆ 2 ಸಾವಿರ ಚದರ ಅಡಿ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಯಲಹಂಕ ತಾಲೂಕು ಜಾಲ ಹೋಬಳಿಯ ಹೊಸಹಳ್ಳಿಯಲ್ಲಿ 7 ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಕೊಡವ ಸಮಾಜಕ್ಕೆ ಕೊಡಲಾಗಿತ್ತು. ಈಗ ಮಾರ್ಗಸೂಚಿ ದರದ ಆಧಾರದಲ್ಲಿ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡುಗಳಲ್ಲಿ ಪ್ರಾಥಮಿಕ ಕಸ ಸಂಗ್ರಹಣೆ ಮತ್ತು ಸಾಗಾಣೆ ಮಾಡುತ್ತಿರುವ ಮೆ.ಅಂತೋಣಿ ವೇಸ್ಟ್ ಹ್ಯಾಡಲಿಂಗ್ ಸಂಸ್ಥೆಗೆ 6 ತಿಂಗಳು ಅವಧಿ ವಿಸ್ತರಣೆ. ಗೋಕಾಕ್ ಜಲಪಾತದ ಕೆಳಭಾಗದಿಂದ ಘಟಪ್ರಭಾ ನದಿ ನೀರಿನಿಂದ ಗೋಕಾಕ್ ನಗರವನ್ನು ರಕ್ಷಿಸುವ ಕಾಮಗಾರಿಗೆ 688 ಕೋಟಿ ರೂ.ಗಳನ್ನು ಮಂಜೂರು ಆಡಳಿತಾತ್ಮಕ ಅನುಮೊದನೆ ನೀಡಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೋತ್ಥಾನ ಪರಿಷತ್‍ಗೆ ಜಮೀನು ಮಂಜೂರು:

ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಸ.ನಂ.110ರಲ್ಲಿ 10 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‍ಗೆ ಶೈಕ್ಷಣಿಕ ಉದ್ದೇಶಕ್ಕೆ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಸ್ಥೆಗೆ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ 1.31 ಎಕರೆ ಜಮೀನು ಸ್ಮಶಾನದ ಬದಲಾಗಿ ‘ಶೈಕ್ಷಣಿಕ ಉದ್ದೇಶ’ ಎಂದು ಮಾರ್ಪಾಡು ಮಾಡಿ ಮಂಜೂರು. ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್‍ಗೆ ಶಿಕಾರಿಪುರ ತಾಲೂಕಿನ ಧೂಪದ ಹಳ್ಳಿಯಲ್ಲಿ 20 ಗುಂಟೆ ಹಾಗೂ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ 2 ಎಕರೆ, ಬೆಂಗಳೂರು ದಕ್ಷಿಣ ತಾಲೂಕಿನ ಕುರುಬರಹಳ್ಳಿಯಲ್ಲಿ ಸ.ನಂ.89ರಲ್ಲಿ ಜನಸೇವಾ ಟ್ರಸ್ಟ್‍ಗೆ 10.33 ಗುಂಟೆ ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

‘ಶಾಸಕ ಮಾಡಾಳ್ ವಿರುಪಾಕ್ಷಪ್ಪಗೆ ಜಾಮೀನು ಸಿಕ್ಕಿರುವ ಕುರಿತು ಲೋಕಾಯುಕ್ತ ವಕೀಲರು ಯಾವ ರೀತಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗೆ ಪ್ರಶ್ನಿಸಬೇಕು, ನಮ್ಮನ್ನಲ್ಲ. ಲೋಕಾಯುಕ್ತಕ್ಕೆ ನಾವು ಕೊಟ್ಟಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವು ಕ್ರಮ ಕೈಗೊಳ್ಳಲು ನಮಗೆ ಅವಕಾಶ ಇಲ್ಲ. ಲೋಕಾಯುಕ್ತರು ಯಾವುದಾದರೂ ಶಿಫಾರಸ್ಸು ಮಾಡಿದರೆ ಮಾತ್ರ ನಾವು ಪರಿಗಣಿಸಬಹುದು. ಲೋಕಾಯುಕ್ತಕ್ಕೆ ನಿರ್ದೇಶನ ನೀಡುವ ಅಧಿಕಾರ ನಮಗಿಲ್ಲ. ಪ್ರಶಾಂತ್ ಮಾಡಾಳ್ 48 ಗಂಟೆಯವರೆಗೆ ಕಸ್ಟಡಿಯಲ್ಲಿ ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ’

-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

Similar News