ಮೈಸೂರು:ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೇ ಕಾನೂನು ಉಲ್ಲಂಘನೆ; ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆರೋಪ

Update: 2023-03-09 04:57 GMT

ಮೈಸೂರು, ಮಾ.8: ನಗರದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಿಸದೆ ಸುಪ್ರೀಂ ಕೋರ್ಟ್‌ನ ನಿಯಮವನ್ನು ಉಲ್ಲಂಘಿಸುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

ಈ ಸಂಬಂಧ ನಗರ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪೋಷಕರು ಮಾತನಾಡಿ, ನಗರದ ಟಿ.ಕೆ.ಲೇಔಟ್‌ನಲ್ಲಿರುವ ರಾಯಲ್ ಕಾನ್‌ಗ್ರೇಡ್ ಶಾಲೆಯ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಂದ ತನಗಿಷ್ಟ ಬಂದಂತೆ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಇದನ್ನು ಪ್ರಶ್ನಿಸಿದಕ್ಕೆ ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಕಳುಹಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಬಿಇಒ, ಡಿಡಿಪಿಐ, ಜಿಲ್ಲಾಧಿಕಾರಿಯವರ ಗಮನಕ್ಕೂ ತಂದರೂ ಆಡಳಿತ ಮಂಡಳಿ ಕ್ಯಾರೆ ಎನ್ನಲಿಲ್ಲ, ಸ್ವತಃ ಸಂಸದ ಪ್ರತಾಪಸಿಂಹ ಅವರು ಶಾಲೆಗೆ ಬಂದು ಹೆಚ್ಚಿನ ಶುಲ್ಕ ವಸೂಲಿ ಮಾಡಬೇಡಿ ಎಂದರೂ ಕೇಳಲಿಲ್ಲ. ಇದರಿಂದ ಬೇಸತ್ತ ನಾವುಗಳು ನ್ಯಾಯಾಲಯಕ್ಕೆ ಹೋದೆವು, ಅಲ್ಲಿ ಆಡಳಿತ ಮಂಡಳಿ ಎಷ್ಟು ಶುಲ್ಕ ಕಟ್ಟಲು ಹೇಳುತ್ತದೋ ಅಷ್ಟನ್ನು ಕಟ್ಟುವಂತೆ ಆದೇಶಿಸಿ ಮಕ್ಕಳಿಗೆ ಪರೀಕ್ಷೆ ಬರೆಯಲು ಸೂಚನೆ ನೀಡಿದೆ. ಇದರಿಂದ ಫೀಸ್ ಕಟ್ಟಲು ಹೋದ ನಮಗೆ ಆಡಳಿತ ಮಂಡಳಿಯವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ನಮ್ಮ ಮಕ್ಕಳು ಎರಡು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಇನ್ನು ಮೂರು ಪರೀಕ್ಷೆಗಳು ಬಾಕಿ ಇದೆ. ದಯಮಾಡಿ ನಮ್ಮ ಮಕ್ಕಳಿಗೆ ಪುನರ್ ಪರೀಕ್ಷೆ ನಡೆಸಿ ಇನ್ನು ಮಾ.9ರಿಂದ ನಡೆಯುವ ಮೂರು ಪರೀಕ್ಷೆಗಳಿಗೆ ಅವಕಾಶ ಕಲ್ಪಿಸಬೇಕು. ಈ ಪರೀಕ್ಷೆಯ ನಂತರ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ಪೋಷಕರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ, ಚಲುವೇಗೌಡ, ಬಾಲರಾಜ್, ಸೋಸಲೆ ಸಿದ್ದರಾಜು, ಅರವಿಂದ ಶರ್ಮಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Similar News