ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಣೆ

Update: 2023-03-09 09:47 GMT

ಹುಬ್ಬಳ್ಳಿ, ಮಾ.9:  'ಗಜಾನನ ಉತ್ಸವ ಮಹಾಮಂಡಳದವರು ಮಾರ್ಚ್ 7ರಂದು ನಗರದ ಚೆನ್ನಮ್ಮ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮನವಿ ಸಲ್ಲಿಸಿದ್ದರು. ಈ ಕುರಿತಂತೆ  ಮೇಯರ್ ಅವರು ಪರಿಶೀಲಿಸಲು ಸೂಚಿಸಿದ್ದರು. ಆದರೆ ಮಾರ್ಚ್ 12 ರಂದು ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸುವ ನಿಟ್ಟಿನಲ್ಲಿ  ಮಹಾಮಂಡಳಿ ಅವರು ನೀಡಿದ ಅರ್ಜಿಯನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ' ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ತಿಳಿಸಿದ್ದಾರೆ. 

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು   ಹುಬ್ಬಳ್ಳಿ ಈದ್ಗಾ ಮೈದಾನ ಪಾಲಿಕೆ ಜಾಗ ಆಗಿರುವುದರಿಂದ ಅನುಮತಿ ಕೊಡುವುದು ಬಿಡುವುದು ಪಾಲಿಕೆಗೆ ಸಂಬಂಧಿಸಿದ ವಿಷಯ. ಇದಕ್ಕೆ ಕಾರ್ಯ ನಿರ್ವಾಹಕರು ಆಯುಕ್ತರೇ ಆಗಿರುತ್ತಾರೆ. ಅನುಮತಿ ನೀಡಲು  ಯೋಚನೆ ಮಾಡಬೇಕಾಗುತ್ತದೆ. ಈ ಮೊದಲು ಗಣೇಶ, ಟಿಪ್ಪು ಆಚರಣೆಗೆ ಬಹಳ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರಿಂದ ಪರಿಶೀಲಿಸಿ ಅನುಮತಿ ನೀಡಿತ್ತು.

'ಇದೀಗ ಹೋಳಿ ಹುಣ್ಣಿಮೆ ಮುಗಿದಿದ್ದು,  ಅನುಮತಿ ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು,  ಮಹಾಮಂಡಳದವರ ಜೊತೆಗೆ ಚರ್ಚಿಸಿ  ಮನವಿಗೆ ಹಿಂಬರಹ ನೀಡಿ  ಮನವೊಲಿಸಲಾಗುವುದು' ಎಂದರು. 

ಇದೇ ವೇಳೆ ಪೊಲೀಸ್ ಆಯುಕ್ತರಾದ ರಮನ್ ಗುಪ್ತಾ ಮಾತನಾಡಿ,  'ಈಗಾಗಲೇ ಕಮೀಷನರೇಟ್ ವ್ಯಾಪ್ತಿಯಲ್ಲಿ 462 ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈಗ ಹುಣ್ಣಿಮೆ  ಮುಗಿದಿರುವುದರಿಂದ  ಮತ್ತು ಮಾರ್ಚ್ 12 ಕ್ಕೆ ಪ್ರಧಾನಮಂತ್ರಿ   ಮೋದಿ ಆಗಮನ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕಲ್ಪಿಸಬೇಕಾಗಿರುವುದರಿಂದ ಈ ಮನವಿಯನ್ನು ಪುರಸ್ಕರಿಸಲು ಆಗುವುದಿಲ್ಲ. ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೆ  ಶಾಂತಿ ಕದಡುವ ಸಾಧ್ಯತೆ ಇದೆ' ಎಂದರು.

Similar News