×
Ad

ರಾಯಚೂರು ಜಿಲ್ಲೆ ಚುನಾವಣಾ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ರಾಜಮೌಳಿ ಆಯ್ಕೆ

Update: 2023-03-09 17:36 IST

ರಾಯಚೂರು, ಮಾ.9: 2023ರ ವಿಧಾನಸಭಾ ಚುನಾವಣೆಗೆ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿಯವರನ್ನು ರಾಜ್ಯ ಚುನಾವಣಾ ಆಯೋಗ ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ನೇಮಕ ಮಾಡಿ ಆದೇಶ ಮಾಡಿದೆ. 

ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರೀಡಾಪಟುಗಳು, ಚಲನಚಿತ್ರ ನಿರ್ದೇಶಕರು, ನಟರು ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವವ ಪ್ರತಿಷ್ಠಿತರನ್ನು ಚುನಾವಣಾ ಪ್ರಚಾರದ ಐಕಾನ್ ಆಗಿ ನೇಮಕ ಮಾಡುತ್ತದೆ. 

ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ನಿರ್ದೇಶಕ ರಾಜಮೌಳಿ ಅವರ ಹೆಸರನ್ನು ನೇಮಕ ಶಿಫಾರಸು ಮಾಡಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಮಾತನಾಡಿ, ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿಯವರನ್ನು ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. 

ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಅಮರೇಶ್ವರ ಕ್ಯಾಂಪ್‍ನವರಾಗಿದ್ದು ಜಿಲ್ಲೆಯ ಚುನಾವಣೆ ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. ಚುನಾವಣೆ ಮತದಾನ ಕುರಿತು ಜಾಗೃತಿ ಮೂಡಿಸಲು ನಿಟ್ಟಿನಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಇವರನ್ನು ಜನರು ಸುಲಭವಾಗಿ ಗುರುತಿಸುತ್ತಾರೆ. ನಿರ್ದೇಶಕ ಎಸ್.ಎಸ್.ರಾಜಮೌಳಿ ಕೂಡ ಸಮ್ಮತಿಸಿ ಒಪ್ಪಿಕೊಂಡಿದ್ದಾರೆ.

ಐಕಾನ್ ಆಗಿ ಆಯ್ಕೆ ಮಾಡಿರುವವರ ಮುಖ್ಯ ಕಾರ್ಯ ಮತದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದರ ಬಗ್ಗೆ ಜನರಿಗೆ ವಿಡಿಯೋ ಮುಖಾಂತರ ಸಂದೇಶ ರವಾನಿಸುವುದು ಆಗಿರುತ್ತದೆ. ಚುನಾವಣಾ ಆಯೋಗ ಸೂಚಿಸಿದಂತೆ ಅವರ ವಿಡಿಯೋ ಮೂಲಕ ಜನರಗೆ ಜಾಗೃತಿ ಸಾರಬೇಕಾಗುತ್ತದೆ. 

Similar News