ಜನಾರ್ದನ ರೆಡ್ಡಿ ಹಣದ ಜಾಡು: 4 ದೇಶಗಳಿಗೆ ಮನವಿ ಪತ್ರ ನೀಡಲು ಸಿಬಿಐ ನ್ಯಾಯಾಲಯ ಆದೇಶ

Update: 2023-03-09 12:56 GMT

ಬೆಂಗಳೂರು, ಮಾ.9: ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಉದ್ಯಮಿ, ಮಾಜಿ ಸಚಿವ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಅವರ ಹಣದ ಜಾಡು ಹಿಡಿದಿರುವ ವಿವರಗಳನ್ನು ನೀಡುವಂತೆ ಸ್ವಿಟ್ಜರ್ಲೆಂಡ್, ಸಿಂಗಾಪುರ, ಐಲ್ ಆಫ್ ಮ್ಯಾನ್ ಮತ್ತು ಯುಎಇ ದೇಶದ ಸಕ್ಷಮ ಪ್ರಾಧಿಕಾರಗಳಿಗೆ ಮನವಿ ಪತ್ರಗಳನ್ನು ನೀಡುವಂತೆ ಗುರುವಾರ ವಿಶೇಷ ಸಿಬಿಐ ನ್ಯಾಯಾಲಯ ಆದೇಶ ನೀಡಿದೆ. 

ಸ್ವಿಟ್ಜರ್ಲೆಂಡ್‌ನಲ್ಲಿರುವ ಸಕ್ಷಮ ಪ್ರಾಧಿಕಾರಕ್ಕೆ ನ್ಯಾಯಾಂಗ ಸಹಾಯಕ್ಕಾಗಿ ಸಿಆರ್‌ಪಿಸಿ ಸೆಕ್ಷನ್ 166(ಎ) ಪ್ರಕಾರ ಸಲ್ಲಿಸಲಾದ ಅರ್ಜಿಯನ್ನು ಈ ಮೂಲಕ ಅನುಮತಿಸಲಾಗಿದೆ ಎಂದು ಮಾ.4ರಂದು ನೀಡಿದ ಆದೇಶದಲ್ಲಿ, ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಚಂದ್ರಕಲಾ ಅವರು ತಿಳಿಸಿದ್ದಾರೆ. 

ಆದೇಶದ ಪ್ರತಿ ಮತ್ತು ದಾಖಲೆಗಳ ವಿವರಗಳನ್ನು ಪ್ರಾಧಿಕಾರಕ್ಕೆ ಕಳುಹಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಸಿಂಗಾಪುರ, ಯುಎಇ ಮತ್ತು ಐಲ್ ಆಫ್ ಮ್ಯಾನ್‌ನಲ್ಲಿರುವ ಅಧಿಕಾರಿಗಳಿಂದ ಜಿಎಲ್‌ಎ ಟ್ರೇಡಿಂಗ್ ಇಂಟರ್ ನ್ಯಾಶನಲ್  ಪ್ರೈವೇಟ್ ಲಿಮಿಟೆಡ್‌ನ ವಿವರಗಳ್ನು ಕೋರಿ ಸಿಬಿಐ ಕೋರಿರುವ ಮನವಿಗೆ ಸಂಬಂಧಿಸಿದಂತೆ ಇದೇ ರೀತಿಯ ಆದೇಶಗಳನ್ನು ನೀಡಲಾಗಿದೆ. 

ಜನಾರ್ದನರೆಡ್ಡಿ ಅವರು ವಿಧಾನಸಭಾ ಚುನಾವಣೆಗೆ ಹೊಸ ಪಕ್ಷ ಸಂಘಟಿಸಿ ಭರ್ಜರಿ ಪ್ರಚಾರ ನಡೆಸುತ್ತಿರುವ ವೇಳೆಯಲ್ಲೇ ಸಿಬಿಐ ವಿಶೇಷ ಕೋರ್ಟ್ ಈ ಆದೇಶ ನೀಡಿದೆ.

Similar News