ಕಸಾಪ ಸದಸ್ಯತ್ವದಿಂದ ನಿರ್ಮಲಾ ಯಲಿಗಾರ್ ಅಮಾನತ್ತು, ‘ಪಂಕಜಶ್ರೀ ಸಾಹಿತ್ಯ ಪ್ರಶಸ್ತಿ’ ಹಿಂಪಡೆದ ಪರಿಷತ್

Update: 2023-03-09 15:09 GMT

ಬೆಂಗಳೂರು, ಮಾ. 9: ಕಸಾಪ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ದೂರದರ್ಶನ ಚಂದನದ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ.ಯಲಿಗಾರ್ ಅವರನ್ನು ಕಸಾಪ ಸದಸ್ಯತ್ವ ದಿಂದ ಮುಂದಿನ ಆದೇಶದ ವರೆಗೆ ಅಮಾನತ್ತಿನಲ್ಲಿರಿಸಲಾಗಿದೆ. ಜೊತೆಗೆ ಅವರಿಗೆ ಪ್ರಕಟಿಸಲಾದ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಯ ಆಯ್ಕೆಯನ್ನು ಹಿಂಪಡೆಯಲಾಗಿದೆ.

ನಿರ್ಮಲಾ ಸಿ.ಯಲಿಗಾರ್ ಅವರು ಜನವರಿ 6, 7 ಹಾಗೂ 8 ರಂದು ಮೂರು ದಿನಗಳ ಕಾಲ ಹಾವೇರಿಯಲ್ಲಿ ಜರುಗಿದ 86ನೆ ಸಾಹಿತ್ಯ ಸಮ್ಮೇಳನದಲ್ಲಿ ಚಂದನದ ಕಾರ್ಯಕ್ರಮ ಮುಖ್ಯಸ್ಥರು ಎಂದು ಹೇಳಿಕೊಂಡು ಭಾಗವಹಿಸಿದ್ದರು. ಸಮ್ಮೇಳನದ ಕಾರ್ಯಕ್ರಮಗಳ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ಅವರು, ತಮ್ಮ 31 ಸಿಬ್ಬಂದಿಗಳಿಗೆ ವಸತಿ ಮತ್ತು ಕಾರ್ಯಕ್ರಮಗಳ ಪ್ರಸಾರಕ್ಕೆ 65/35 ಕೆವಿಎ ಡಿಸೇಲ್ ಜನರೇಟರ್ ಅನ್ನು ಪರಿಷತ್ತಿನಿಂದ ನೀಡಲಿಲ್ಲ, ಎಂಬ ಕಾರಣಕ್ಕಾಗಿ ಮಾಧ್ಯಮಗಳ ಎದುರು ಅಸಂಬದ್ಧವಾಗಿ ಮಾತನಾಡಿದ್ದರು.

ಜೊತೆಗೆ ‘ಮಧ್ಯದಲ್ಲಿಯೇ ಸಮ್ಮೇಳನದ ಪ್ರಸಾರವನ್ನು ಸ್ಥಗಿತಗೊಳಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಅಲ್ಲದೆ, ಯಲಿಗಾರ್ ಅವರು ದೂರದರ್ಶನ ಕೇಂದ್ರದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಒಂದು ನಿಮಿಷದ ಮೌನವನ್ನೂ ಆಚರಿಸಿರುತ್ತಾರೆ. ಈ ರೀತಿ ಮೌನಾಚರಣೆ ಮಾಡುವುದು ಯಾರಾದರು ಮೃತ ಹೊಂದಿದ ಸಂದರ್ಭದಲ್ಲಿ. ಕಸಾಪ ಮೃತ ಹೊಂದುವ ಸಂಸ್ಥೆಯಲ್ಲ. ಸೂರ್ಯ-ಚಂದ್ರರಿರುವವರೆಗೂ ಹಾಗೂ ಕನ್ನಡಿಗರು ಈ ಭೂಮಿಯಲ್ಲಿ ಇರುವವರೆಗೂ ಪರಿಷತ್ತು ಜೀವಂತವಾಗಿರುವ ಸಂಸ್ಥೆ ಎಂದು ಕಸಾಪ ತಿಳಿಸಿದೆ. 

108 ವರ್ಷಗಳ ಇತಿಹಾಸ ಹೊಂದಿರುವ ಕಸಾಪ ಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ಸಮಸ್ತ ಕನ್ನಡಿಗರು ಆಗ್ರಹ ಮಾಡಿದ್ದರು. ಜೊತೆಗೆ ಇಂತಹ ಕುಚೇಷ್ಟೆ  ಮಾಡುವರ ವಿರುದ್ಧ ಪರಿಷತ್ತು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಕಸಾಪ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಪರಿಷತ್ತಿನ ಘನತೆ-ಗೌರವಗಳನ್ನು ಪಾಲಿಸದ ವ್ಯಕ್ತಿಗೆ ಪರಿಷತ್ತಿನ ದತ್ತಿ ಪ್ರಶಸ್ತಿ ನೀಡುವುದು ಸಮಂಜಸವಲ್ಲ. ಜೊತೆಗೆ ನಿರ್ಮಲಾ ಯಲಿಗಾರ್‍ರ ಈ ವರ್ತನೆ ದತ್ತಿ ನಿಧಿಯ ಆಶಯಗಳಿಗೂ, ದತ್ತಿ ದಾನಿಗಳ ಆಶಯಗಳಿಗೂ ವಿರುದ್ಧವಾಗಿರುವುದರಿಂದ, 2022ನೆ ಸಾಲಿನ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಗಾಗಿ  ಯಲಿಗಾರ ಅವರ ಆಯ್ಕೆಯನ್ನು ರದ್ದುಗೊಳಿಸಲಾಗಿದೆ ಎಂದು ಪರಿಷತ್ತು ತಿಳಿಸಿದೆ.

Similar News