ಸ್ಮಶಾನ ಜಾಗ ಒದಗಿಸಿರುವ ಬಗ್ಗೆ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆ; ಡಿಸಿಗಳಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ

Update: 2023-03-09 15:21 GMT

ಬೆಂಗಳೂರು, ಮಾ.9: ರಾಜ್ಯದ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಜಾಗ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾ.17ರ ಶುಕ್ರವಾರ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.  

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಈ ಸೂಚನೆ ನೀಡಿದೆ. 

ಅಲ್ಲದೇ, ತಪ್ಪು ಮಾಹಿತಿ ನೀಡುವ ಮೂಲಕ ಕೋರ್ಟ್‍ಗೆ ವಂಚನೆ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿದವರಲ್ಲಿ ನಾಲ್ವರು ಜಿಲ್ಲಾಧಿಕಾರಿಗಳನ್ನುಮನೆಗೆ ಕಳುಹಿಸಿದರೇ ಮಾತ್ರ ಈ ವ್ಯವಸ್ಥೆ ಸರಿಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಅಲ್ಲದೆ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು, ಸ್ಮಶಾನ ಜಾಗ ಒದಗಿಸುವಲ್ಲಿ ಸರಕಾರ ತಪ್ಪು ಮಾಹಿತಿ ನೀಡಿದೆ. ಇನ್ನೂ 2,041 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕೊಟ್ಟಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದೇ ವೇಳೆ ಸರಕಾರದ ಪರ ವಕೀಲರು, ಜಿಲ್ಲಾಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಒಪ್ಪಿಕೊಂಡರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ ಮುಂದಿನ ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳು ಖುದ್ದು ಹಾಜರಿರಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.

Similar News