ವಿದ್ಯಾರ್ಥಿಗಳ ಅಂಕಗಳಿಂದ ಬುದ್ಧಿವಂತಿಕೆ ಅಳೆಯಲು ಸಾಧ್ಯವೇ?: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಮಾ.9: ವಿದ್ಯಾರ್ಥಿಗಳು ಪಡೆಯುವ ಅಂಕಗಳ ಆಧಾರದಲ್ಲಿ ಅವರ ಬುದ್ಧಿವಂತಿಕೆ ಅಳೆಯುವುದಕ್ಕೆ ಸಾಧ್ಯವೇ ಎಂದು ಹೈಕೋರ್ಟ್ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 5 ಮತ್ತು 8ನೆ ತರಗತಿಗಳ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನ ಬದಲಾಯಿಸುವ(ಬೋರ್ಡ್ ಪರೀಕ್ಷೆ) ಸಂಬಂಧ ರಾಜ್ಯ ಸರಕಾರದ ನಿರ್ಧಾರ ಪ್ರಶ್ನಿಸಿ ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ(ಕುಸ್ಮಾ), ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ, ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣಗಳ ಸಂಘ(ಓಯುಆರ್‍ಎಸ್) ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಸರಕಾರವನ್ನು ಪ್ರಶ್ನೆ ಮಾಡಿತು.
ಸರಕಾರದ ಪರ ವಾದಿಸಿದ ವಕೀಲರು, ಕೋವಿಡ್ ಸಂದರ್ಭದಲ್ಲಿ ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಇದನ್ನು ಹೆಚ್ಚಳ ಮಾಡುವುದಕ್ಕಾಗಿ 5 ಮತ್ತ 8ನೆ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಅವರನ್ನು ಅದೇ ತರಗತಿಯಲ್ಲಿ ಮುಂದುವರೆಸುವುದಿಲ್ಲ. ಮಕ್ಕಳಲ್ಲಿನ ಬುದ್ಧಿವಂತಿಕೆಯನ್ನು ತಿಳಿದುಕೊಳ್ಳುವುದಕ್ಕಾಗಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಕ್ಕಳು ಪಡೆದ ಅಂಕಗಳ ಆಧಾರದಲ್ಲಿ ಬುದ್ಧಿವಂತಿಕೆ ಪರೀಕ್ಷೆ ನಡೆಸಲಾಗುತ್ತಿದೇಯೇ ಎಂದು ಪ್ರಶ್ನಿಸಿತು. ಜತೆಗೆ, ಮಕ್ಕಳ ಸಾಮಥ್ರ್ಯ, ವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನು ಅವರ ಅಂಕಗಳ ಮೇಲೆ ಅಳೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಜತೆಗೆ, ಕೆಲವು ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮಲ್ಲಿ ಓದುತ್ತಿರುವ ಮಕ್ಕಳು ಶೇ.90ಕ್ಕೂ ಹೆಚ್ಚು ಅಂಕಗಳನ್ನು ಪಡೆಯದಿದ್ದಲ್ಲಿ ಬೇರೊಂದು ಶಾಲೆಗಳಿಗೆ ಕಳುಹಿಸಲಾಗುತ್ತಿದೆ ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಮಕ್ಕಳ ಬುದ್ಧಿವಂತಿಕೆಯನ್ನು ಅಳೆಯಲು ಈ ವಿಧಾನ ಸರಿಯಿಲ್ಲ ಎಂದು ತಿಳಿಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸರಕಾರ ಏಕಾಏಕಿ 5 ಮತ್ತು 8ನೆ ತರಗತಿಗಳ ಮಕ್ಕಳಿಗೆ ಬೋರ್ಡ್ ಮಟ್ಟದ ಪರೀಕ್ಷೆಯನ್ನು ಜಾರಿ ಮಾಡಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸರಕಾರ ಹೊರಡಿಸಿರುವ ಸುತ್ತೋಲೆ ರದ್ದು ಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅಂತಿಮ ಆದೇಶವನ್ನು ಕಾಯ್ದಿರಿಸಿ ವಿಚಾರಣೆ ಮುಂದೂಡಿದೆ.