ಅರಣ್ಯ ರಕ್ಷಣೆ ಕಾಯ್ದೆ ಮತ್ತು ಉದ್ಯಮಕ್ಕೆ ಕೆಂಪುಹಾಸು

Update: 2023-03-09 19:30 GMT

ಪ್ರತಿವರ್ಷ ಅಂದಾಜು 25,000-30,000 ಹೆಕ್ಟೇರ್ ಕಾಡು ಅರಣ್ಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಬೆಂಗಳೂರಿನ ಅಶೋಕಾ ಟ್ರಸ್ಟ್(ಏಟ್ರಿ)ನ ಪರಿಸರ ಮತ್ತು ಅಭಿವೃದ್ಧಿ ಕೇಂದ್ರದ ವರದಿ ಪ್ರಕಾರ, ‘2008-2018ರ ಅವಧಿಯಲ್ಲಿ ಅರಣ್ಯಗಳಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಸಲ್ಲಿಕೆಯಾದ 128 ಅರ್ಜಿಗಳಲ್ಲಿ 74 ಎರಡನೇ ಹಂತದ ಹಾಗೂ 46 ಮೊದಲ ಹಂತದ ಅನುಮತಿ ಪಡೆದುಕೊಂಡಿವೆ. ಕೇವಲ 5 ಅರ್ಜಿಗಳು ಮಾತ್ರ ತಿರಸ್ಕೃತಗೊಂಡಿದ್ದು, ಇದಕ್ಕೆ ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆ ಕಾರಣವಲ್ಲ’.


ರಾಜ್ಯದ ಕಾಡುಗಳು ಉರಿಯುತ್ತಿದ್ದು, ಫೆಬ್ರವರಿ 15ರಿಂದ ಮಾರ್ಚ್ 5ರ ಅವಧಿಯಲ್ಲಿ 2,020 ಕಾಡ್ಗಿಚ್ಚು ಪ್ರಕರಣಗಳು ಸಂಭವಿಸಿವೆ; ಸೊಪ್ಪು-ಸದೆ ಹಿಡಿದು ಕಾಡ್ಗಿಚ್ಚನ್ನು ತಡೆಯಲು ಮುಂದಾದ ಇಬ್ಬರು ಅರಣ್ಯ ರಕ್ಷಕರು ಜೀವ ಕಳೆದುಕೊಂಡಿದ್ದಾರೆ. ಐಸೆಕ್ ವರದಿ ಪ್ರಕಾರ, ಕಳೆದ ಐದು ವರ್ಷದಲ್ಲಿ 38,000 ಹೆಕ್ಟೇರ್ ಅರಣ್ಯ ಬೆಂಕಿಗೆ ಕರಕಲಾಗಿದೆ. ಕಾಡ್ಗಿಚ್ಚು ತಡೆಗೆ ಸಂಬಂಧಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯ ಶಿಫಾರಸುಗಳು ಕಡತಗಳ ರಾಶಿಯಲ್ಲಿ ಸಿಲುಕಿಕೊಂಡಿವೆ.

ಬಡತನ, ಅಸಮಾನತೆ, ಶೋಷಣೆಯಿಂದ ಬಿಡುಗಡೆ ಕಾಣದ ಆದಿವಾಸಿಗಳು/ಮೂಲವಾಸಿಗಳ ಕಥನ, ವಿಠಲ ಮಲೆಕುಡಿಯ ಅವರ ಅನುಭವಗಳನ್ನು ಅನಾವರಣಗೊಳಿಸುವ ‘19.20.21’ ಸಿನೆಮಾ ಬಿಡುಗಡೆಗೊಂಡಿದೆ. ದೇಶದಲ್ಲಿ ಸೋಲಿಗರು, ಕುಣಬಿಗಳು, ಮಲೆಕುಡಿಯರು, ಚೆಂಚುಗಳು ಸೇರಿದಂತೆ 705ಕ್ಕೂ ಅಧಿಕ ಬುಡಕಟ್ಟು ಜನಾಂಗಗಳಿದ್ದು, ಒಟ್ಟು ಜನಸಂಖ್ಯೆಯಲ್ಲಿ ಇವರ ಪಾಲು ಶೇ.8. ಅಸಂಖ್ಯಾತ ಅರಣ್ಯವಾಸಿಗಳ ಹಕ್ಕನ್ನು ರಕ್ಷಿಸಿದ್ದ, ಒಂದಿಷ್ಟು ಘನತೆಯ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದ ಅರಣ್ಯ ಹಕ್ಕು(ರಕ್ಷಣೆ) ಕಾಯ್ದೆ(ಎಫ್‌ಆರ್‌ಎ)ಗೆ ಜೂನ್ 28, 2022ರಂದು ತಿದ್ದುಪಡಿ ಮಾಡಿರುವ ಒಕ್ಕೂಟ ಸರಕಾರ, ಅರಣ್ಯವಾಸಿಗಳ ಹಕ್ಕುಗಳನ್ನು ಕಸಿದಿದೆ ಹಾಗೂ ಉದ್ಯಮಗಳಿಗೆ ಅರಣ್ಯಗಳ ಪರಭಾರೆಯನ್ನು ಸುರಳೀತಗೊಳಿಸಿದೆ.

ಪ್ರಗತಿಶೀಲ ಕಾಯ್ದೆ:

ವಸಾಹತುಶಾಹಿ ಆಡಳಿತದಲ್ಲಿ ಅರಣ್ಯವಾಸಿ/ಆದಿವಾಸಿಗಳಿಗೆ ಕಾಡುಗಳ ಮೇಲೆ ಯಾವುದೇ ಹಕ್ಕು ಇರಲಿಲ್ಲ. ಸ್ವಾತಂತ್ರ್ಯಾನಂತರವೂ ಅವರನ್ನು ಒತ್ತುವರಿದಾರರು ಎಂದೇ ಪರಿಗಣಿಸಲಾಗುತ್ತಿತ್ತು. ಅಭಿವೃದ್ಧಿ ಯೋಜನೆಗಳ ಜಾರಿಗೆ ಅವರನ್ನು ಹಿಂಸಾತ್ಮಕವಾಗಿ ತೆರವುಗೊಳಿಸಲಾಗುತ್ತಿತ್ತು. 2006ರಲ್ಲಿ ಯುಪಿಎ ಸರಕಾರ ಪರಿಶಿಷ್ಟ ವರ್ಗ ಹಾಗೂ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಅಂಗೀಕಾರ) ಕಾಯ್ದೆ ಅಥವಾ ಎಫ್‌ಆರ್‌ಎಯನ್ನು ರೂಪಿಸಿತು ಮತ್ತು ಜಾರಿಗೊಳಿಸುವ ಅಧಿಕಾರವನ್ನು ಬುಡಕಟ್ಟು ವ್ಯವಹಾರಗಳ ಮಂತ್ರಾಲಯಕ್ಕೆ ವಹಿಸಿತು. ಆದಿವಾಸಿಗಳು ಹಾಗೂ 75 ವರ್ಷ ಇಲ್ಲವೇ 3 ತಲೆಮಾರಿಗಿಂತ ಹೆಚ್ಚು ಕಾಲ ಅರಣ್ಯಗಳಲ್ಲಿ ವಾಸ ಮಾಡಿಸಿದವರ ಹಕ್ಕುಗಳನ್ನು ಖಾತ್ರಿಗೊಳಿಸುವ ಈ ಕಾಯ್ದೆಯು 150 ದಶಲಕ್ಷಕ್ಕೂ ಅಧಿಕ ಅರಣ್ಯವಾಸಿಗಳಿಗೆ ಬಲತುಂಬಿದ ಶಾಸನ. ಕಾಯ್ದೆಯು ಅರಣ್ಯವಾಸಿ ಪರಿಶಿಷ್ಟ ವರ್ಗಗಳು(ಎಫ್‌ಡಿಎಸ್‌ಟಿ) ಹಾಗೂ ಇನ್ನಿತರ ಸಾಂಪ್ರದಾಯಿಕ ಅರಣ್ಯವಾಸಿ(ಒಟಿಎಫ್‌ಡಿ)ಗಳಿಗೆ ಅರಣ್ಯದ ವೈಯಕ್ತಿಕ ಹಾಗೂ ಸಾಮುದಾಯಿಕ ಹಕ್ಕು ಮತ್ತು ಗ್ರಾಮಗಳ ಗಡಿಗಳೊಳಗೆ ಅರಣ್ಯ ಸಂಪನ್ಮೂಲಗಳ ನಿರ್ವಹಣೆಯ ಹಕ್ಕುಗಳನ್ನು ಕೊಟ್ಟಿತು. ಸಂರಕ್ಷಿತ ಸೇರಿದಂತೆ ಎಲ್ಲ ವಿಧದ ಅರಣ್ಯಗಳಲ್ಲಿ ಅರಣ್ಯವಾಸಿಗಳ 14 ವಿಧದ ಹಕ್ಕುಗಳನ್ನು ಕಾಯ್ದೆ ಗುರುತಿಸಿತು.

ಅತ್ಯಂತ ಮುಖ್ಯ ಹಕ್ಕುಗಳು ವಿಭಾಗ 3(1)ರಲ್ಲಿ ಇದ್ದವು. 3(1)(ಎ) ಅಡಿ ಅರಣ್ಯ ಭೂಮಿಯಲ್ಲಿ ವಾಸಿಸುವ/ಕೃಷಿ ಮಾಡುವ ಹಕ್ಕು, 3(1)(ಬಿ)ಯಿಂದ 3(1)(ಎಂ)ವರೆಗೆ ಅರಣ್ಯ ಭೂಮಿ ಹಾಗೂ ಸಂಪನ್ಮೂಲದ ಬಳಕೆ/ಪ್ರವೇಶಾವಕಾಶದ ಸಾಮುದಾಯಿಕ ಹಕ್ಕುಗಳು(ಸಿಎಫ್‌ಆರ್) ಮತ್ತು 3(1)(1) ಸಾಮುದಾಯಿಕ ಅರಣ್ಯ ಸಂಪನ್ಮೂಲಗಳ ಹಕ್ಕು(ಸಿಎಫ್‌ಆರ್‌ಆರ್)ಗಳನ್ನು ಕೊಡಲಾಯಿತು. 2012ರಲ್ಲಿ ಎಫ್‌ಆರ್‌ಎಗೆ ತಂದ ತಿದ್ದುಪಡಿಯು ಸಿಎಫ್‌ಆರ್‌ಆರ್‌ಗಳನ್ನು ಪಡೆಯಲು ನಮೂನೆ ಸಿ(ಫಾರ್ಮ್ ಸಿ)ಯನ್ನು ಪರಿಚಯಿಸಿತು. ವಿಭಾಗ 5ರನ್ವಯ ಅರಣ್ಯದ ಬಳಕೆ, ನಿರ್ವಹಣೆ ಹಾಗೂ ಸಂರಕ್ಷಣೆಗೆ ಸಮುದಾಯಗಳು ತಮ್ಮದೇ ನಿಯಮಗಳನ್ನು ರೂಪಿಸಿಕೊಳ್ಳಬಹುದಿತ್ತು ಮತ್ತು ಅರಣ್ಯದ ಯಜಮಾನಿಕೆ ಗ್ರಾಮಸಭೆಗೆ ಸೇರುತ್ತಿತ್ತು. ಕಾಯ್ದೆಯು ‘ಕಾಡುಗಳನ್ನು ಕಡಿಯುವ ಮುನ್ನ ಸಂಬಂಧಿಸಿದ ಗ್ರಾಮಸಭೆಗಳ ಮೂಲಕ ಆದಿವಾಸಿ/ಅರಣ್ಯವಾಸಿಗಳ ಲಿಖಿತ ಒಪ್ಪಿಗೆ’ಯನ್ನು ಕಡ್ಡಾಯಗೊಳಿಸಿತು.

ಆದರೆ, ಪರಿಸರ ಸಚಿವಾಲಯದ ಅರಣ್ಯ ಸಂರಕ್ಷಣೆ ಕಾಯ್ದೆ(ಎಫ್‌ಸಿಎ) ‘ಅಧಿಕಾರಿಗಳ ವಿವೇಚನೆಯನ್ನು ಆಧರಿಸಿದ ಅರಣ್ಯ ಕಡಿತ’ಕ್ಕೆ ಅನುಮತಿ ನೀಡುತ್ತಿತ್ತು. ಈ ವಿರೋಧಾಭಾಸವನ್ನು ನಿವಾರಿಸಲು 2009ರಲ್ಲಿ ರೂಪಿಸಿದ ಹೊಸ ನಿಯಮವು, ‘ಅರಣ್ಯ ಹಕ್ಕುಗಳ ಕಾಯ್ದೆಯ ಎಲ್ಲ ನಿಯಮಗಳ ಪಾಲನೆಯಾಗಿದೆ/ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ರಾಜ್ಯ ಸರಕಾರಗಳು ದೃಢಪಡಿಸಿದ ಬಳಿಕವಷ್ಟೇ ಪರಿಸರ ಮಂತ್ರಾಲಯ ಅರಣ್ಯ ಕಡಿತಲೆಗೆ ಅನುಮತಿ ನೀಡಬೇಕು’ ಎಂದು ಸೂಚಿಸಿತು. ಇದಕ್ಕೆ ಬಲ ತುಂಬಿದ್ದು ವೇದಾಂತ ತೀರ್ಪು. ಒಡಿಶಾದ ನಿಯಾಮ್‌ಗಿರಿ ಬೆಟ್ಟದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಮುಂದಾಗಿದ್ದ ವೇದಾಂತ ಕಂಪೆನಿಯ ಯೋಜನೆಯನ್ನು 12 ಗ್ರಾಮಸಭೆಗಳು ತಿರಸ್ಕರಿಸಿದವು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ‘ಗ್ರಾಮಸಭೆಗಳ ಮೂಲಕ ಆದಿವಾಸಿಗಳು/ಅರಣ್ಯವಾಸಿಗಳ ಲಿಖಿತ ಒಪ್ಪಿಗೆ ಪಡೆದುಕೊಳ್ಳುವುದು ಕಡ್ಡಾಯ’ ಎಂದು ಸುಪ್ರೀಂ 2013ರಲ್ಲಿ ತೀರ್ಪು ನೀಡಿತು. ಇದೊಂದು ಮೈಲುಗಲ್ಲು ತೀರ್ಪು.

ಪರಿಸರ ಮಂತ್ರಾಲಯ 2017ರಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಎಫ್‌ಆರ್‌ಎ ಅಡಿ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಬದಲಿಸಿತು. ಅರಣ್ಯ ಭೂಮಿ ಅಗತ್ಯವಿರುವ ಉದ್ಯಮಿಗಳು ರಾಜ್ಯ ಸರಕಾರಕ್ಕೆ ಅರ್ಜಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ಸಂಬಂಧಿಸಿದ ಗ್ರಾಮಸಭೆಗಳ ಒಪ್ಪಿಗೆ ಪ್ರಕ್ರಿಯೆಗೆ ಚಾಲನೆ ನೀಡುವುದಲ್ಲದೆ, ಅರಣ್ಯ ಹಕ್ಕುಗಳ ಕಾಯ್ದೆ ಸೇರಿದಂತೆ ಎಲ್ಲ ಸಂರಕ್ಷಣೆ ಕಾಯ್ದೆಗಳ ಪಾಲನೆಯಾಗುತ್ತಿದೆಯೇ ಎಂದು ದೃಢಪಡಿಸಿಕೊಳ್ಳಬೇಕು. ಪರಿಸರ ಮಂತ್ರಾಲಯ ಮೊದಲ ಹಂತದ ಅನುಮತಿ ನೀಡುವುದರೊಳಗೆ ಈ ಪ್ರಕ್ರಿಯೆಗಳು ಮುಗಿಯಬೇಕು. ಆನಂತರ ಎರಡನೇ ಹಂತದ ಅನುಮತಿ ನೀಡಲಾಗುತ್ತಿತ್ತು. ಅರಣ್ಯ ಭೂಮಿಯಲ್ಲಿ ಯಾವುದೇ ಯೋಜನೆಯ ಮೊದಲ ಹಂತದ ಅನುಮತಿಗೆ ಒಕ್ಕೂಟ ಸರಕಾರವನ್ನು, ಆನಂತರ ಎರಡನೇ ಹಂತದ ಅನುಮತಿಗೆ ರಾಜ್ಯ ಸರಕಾರವನ್ನು ಸಮೀಪಿಸುವ ಮುನ್ನ ಸಂಬಂಧಿಸಿದ ಗ್ರಾಮಸಭೆಯ ಅನುಮತಿ ಪಡೆದುಕೊಳ್ಳಬೇಕಿತ್ತು. ಈ ಎರಡು ಹಂತದ ಪ್ರಕ್ರಿಯೆಗಳಿಂದ ವೃಥಾ ವಿಳಂಬವಾಗುತ್ತಿದೆ ಎಂದು ಉದ್ಯಮಿಗಳು ಗೊಣಗುತ್ತಿದ್ದರು. ಇದಕ್ಕೆ ಒಕ್ಕೂಟ ಸರಕಾರ ಪ್ರತಿಕ್ರಿಯಿಸಿದ್ದು-ಜೂನ್ 28, 2022ರ ಆದೇಶದ ಮೂಲಕ. ಈ ಆದೇಶದಲ್ಲಿ ಎರಡು ಹಂತದ ಪ್ರಕ್ರಿಯೆಯನ್ನು ಕೈ ಬಿಡಲಾಯಿತು. ನೂತನ ನಿಯಮಗಳಲ್ಲಿ ಗ್ರಾಮಸಭೆಯ ಶಬ್ದವೇ ಇರಲಿಲ್ಲ. ಬದಲಾಗಿ, ಉದ್ಯಮಿ ಎರಡನೇ ಹಂತದ ಅನುಮತಿಗಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಆಡಳಿತವನ್ನು ನೇರವಾಗಿ ಸಂಪರ್ಕಿಸ ಬಹುದು. ಇದರರ್ಥ-ಕೇಂದ್ರದ ಅನುಮತಿ ಬಳಿಕ ಯೋಜನೆಗೆ ವಿರೋಧ ಎದುರಾದಲ್ಲಿ ಅದನ್ನು ಬಗೆಹರಿಸುವುದು ರಾಜ್ಯಗಳ ಜವಾಬ್ದಾರಿ ಆಗಿರುತ್ತದೆ. ಪರಿಸರ ಮಂತ್ರಾಲಯ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಿ, ಕಾಡು ಕಡಿ ಯಲು ಅನುಮತಿ ನೀಡುತ್ತದೆ. ಗಣಿಗಾರಿಕೆ, ರೆಸಾರ್ಟ್-ವೈಭವೋಪೇತ ವಸತಿಗೃಹಗಳ ಸಮುಚ್ಚಯಗಳ ನಿರ್ಮಾಣ ಇತ್ಯಾದಿಗೆ ಬೆಟ್ಟಗುಡ್ಡ, ಕಾಡಿನ ಒಡಲನ್ನು ಬಗೆದಿರುವ ಉದ್ಯಮಿಗಳಿಗೆ ಕಾಯ್ದೆ ಕೆಂಪು ಹಾಸು ಹಾಸಲಿದೆ.

ಎನ್‌ಸಿಎಸ್‌ಟಿ ಆಕ್ಷೇಪ:
2022ರ ನಿಯಮಗಳಿಗೆ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ(ಎನ್‌ಸಿಎಸ್‌ಟಿ) ಆಕ್ಷೇಪ ವ್ಯಕ್ತಪಡಿಸಿದೆ. ‘ಯಾವುದೇ ಯೋಜನೆಗೆ ಮೊದಲ ಹಂತದ ಅನುಮತಿ ನೀಡುವ ಮುನ್ನ ಆದಿವಾಸಿ ಹಾಗೂ ಇನ್ನಿತರ ಸಾಂಪ್ರದಾಯಿಕ ಅರಣ್ಯವಾಸಿಗಳ ಅನುಮತಿ ಕಡ್ಡಾಯ’ ಎನ್ನುವ 2014 ಹಾಗೂ 2017ರ ಕಾಯ್ದೆಯಲ್ಲಿದ್ದ ಖಂಡವನ್ನು 2022ರ ನಿಯಮಗಳು ಕೈಬಿಟ್ಟಿವೆ ಎನ್ನುವುದು ಆಕ್ಷೇಪಕ್ಕೆ ಕಾರಣ. ಎಫ್‌ಆರ್‌ಎ ಅನ್ವಯ ಅರಣ್ಯ ಭೂಮಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಪರಿಶಿಷ್ಟ ವರ್ಗ ಹಾಗೂ ಒಟಿಎಫ್‌ಡಿಗಳಿಗೆ ಆದ್ಯತೆ ನೀಡಬೇಕಾಗುತ್ತದೆ.

ಎನ್‌ಸಿಎಸ್‌ಟಿ ಅಧ್ಯಕ್ಷ ಹರ್ಷ್ ಚೌಹಾಣ್ ಈ ಸಂಬಂಧ ಪರಿಸರ ಸಚಿವ ಭೂಪೇಂದ್ರ ಯಾದವ್‌ಗೆ ಬರೆದ ಪತ್ರದಲ್ಲಿ ‘‘ಹಿಂದಿನ ಕಾಯ್ದೆಯನ್ನು ಬಲಪಡಿಸಬೇಕು. 2022ರ ನಿಯಮಗಳನ್ನು ತಡೆಹಿಡಿಯಬೇಕು. ಮೊದಲ ಹಂತದ ಅನುಮತಿ ಸಿಕ್ಕಿದ ಬಳಿಕ ಆದಿವಾಸಿ/ಅರಣ್ಯವಾಸಿಗಳ ಅನುಮತಿ ಪಡೆಯುವುದರಲ್ಲಿ ಅರ್ಥವಿಲ್ಲ. ಅಷ್ಟರಲ್ಲಿ ಉದ್ಯಮಿ ಸಾಕಷ್ಟು ಹೂಡಿಕೆ ಮಾಡಿರುತ್ತಾರೆ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಮೇಲೆ ಒತ್ತಡ ಹೇರಿ, ಅನುಮತಿ ಗಿಟ್ಟಿಸುತ್ತಾನೆ’’ ಎಂದಿದ್ದಾರೆ.

ಪ್ರತಿವರ್ಷ ಅಂದಾಜು 25,000-30,000 ಹೆಕ್ಟೇರ್ ಕಾಡು ಅರಣ್ಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಬೆಂಗಳೂರಿನ ಅಶೋಕಾ ಟ್ರಸ್ಟ್(ಏಟ್ರಿ)ನ ಪರಿಸರ ಮತ್ತು ಅಭಿವೃದ್ಧಿ ಕೇಂದ್ರದ ವರದಿ ಪ್ರಕಾರ, ‘2008-2018ರ ಅವಧಿಯಲ್ಲಿ ಅರಣ್ಯಗಳಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಸಲ್ಲಿಕೆಯಾದ 128 ಅರ್ಜಿಗಳಲ್ಲಿ 74 ಎರಡನೇ ಹಂತದ ಹಾಗೂ 46 ಮೊದಲ ಹಂತದ ಅನುಮತಿ ಪಡೆದುಕೊಂಡಿವೆ. ಕೇವಲ 5 ಅರ್ಜಿಗಳು ಮಾತ್ರ ತಿರಸ್ಕೃತಗೊಂಡಿದ್ದು, ಇದಕ್ಕೆ ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆ ಕಾರಣವಲ್ಲ’. ಇದಲ್ಲದೆ ರಸ್ತೆ ನಿರ್ಮಾಣ, ಸರಕಾರಿ- ಖಾಸಗಿ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಭೂಮಿ ಕೋರಿ ಅಸಂಖ್ಯ ಅರ್ಜಿಗಳು ಪ್ರತಿವರ್ಷ ಸಲ್ಲಿಕೆ ಆಗುತ್ತವೆ. ಇವುಗಳಲ್ಲಿ ಹೆಚ್ಚಿನವಕ್ಕೆ ಅನುಮತಿ ಸಿಗುತ್ತದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ 2019-2020ರ ವರದಿ ಪ್ರಕಾರ, 22 ರಾಜ್ಯಗಳಲ್ಲಿ ಜನವರಿ 1ರಿಂದ ನವೆಂಬರ್ 2018ರ ಅವಧಿಯಲ್ಲಿ 932 ಅರಣ್ಯೇತರ ಯೋಜನೆಗಳಿಗೆ 11,467 ಹೆಕ್ಟೇರ್ ಹಾಗೂ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 746 ಹೆಕ್ಟೇರ್ ಅರಣ್ಯವನ್ನು ನೀಡಲಾಗಿದೆ. ಇದರ ಜೊತೆಗೆ, ಅಕ್ರಮ ಪರಭಾರೆ ವ್ಯಾಪಕವಾಗಿ ನಡೆಯು ತ್ತದೆ. ಇದರ ಲೆಕ್ಕ ಯಾರ ಬಳಿಯೂ ಇಲ್ಲ.

ಸಸ್ಟೇನಬಲ್ ಯೂಸ್ ಆಫ್ ವೈಲ್ಡ್ ಲೈಫ್‌ನ ಜುಲೈ 2022ರ ವರದಿ ಪ್ರಕಾರ, ‘ಜಗತ್ತಿನಾದ್ಯಂತ ಶೇ.15ರಷ್ಟು ಅರಣ್ಯಗಳನ್ನು ಸ್ಥಳೀಯ ಸಮುದಾಯಗಳು/ಮೂಲವಾಸಿಗಳು ನಿರ್ವಹಿಸುತ್ತಿದ್ದಾರೆ. 87 ದೇಶಗಳ 38 ದಶಲಕ್ಷ ಚದರ ಕಿ.ಮೀ.(ಭಾರತದ ಒಟ್ಟು ವಿಸ್ತೀರ್ಣ 32.87 ದಶಲಕ್ಷ ಚದರ ಕಿ.ಮೀ.) ವ್ಯಾಪ್ತಿಯ ಅರಣ್ಯ ಆದಿವಾಸಿಗಳ ನಿರ್ವಹಣೆಯಲ್ಲಿದೆ. ಇದು ಒಟ್ಟು ಸಂರಕ್ಷಿತ ಪ್ರದೇಶದ ಶೇ.40. ಇಂಥ ಕಡೆ ಅರಣ್ಯನಾಶ ಕಡಿಮೆ ಇದೆ. ಅರಣ್ಯವಾಸಿ ಸಮುದಾಯಗಳಿಗೆ ಅರಣ್ಯಗಳ ನಿಯಂತ್ರಣ ಸಿಕ್ಕಿದರೆ, ಸಂರಕ್ಷಣೆ ವೇಗ ಪಡೆದುಕೊಳ್ಳುತ್ತದೆ ಮತ್ತು ಅರಣ್ಯಗಳು ಶೀಘ್ರ ಪುನರುಜ್ಜೀವನ ಪಡೆದುಕೊಳ್ಳುತ್ತವೆ. ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲ ವಾಸಿಗಳ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಇಡೀ ಜಗತ್ತು ಹೇಳುತ್ತಿದ್ದರೆ, ನಾವು ತದ್ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದೇವೆ’. ಸಂರಕ್ಷಣೆ ದೃಷ್ಟಿಯಲ್ಲಿ ಅರಣ್ಯ ಹಕ್ಕು ಕಾಯ್ದೆಗೆ ಸರಿಸಾಟಿಯಾದ ಕಾನೂನು ಬೇರೆ ಇಲ್ಲ.

ಇನ್ನೊಂದು ಅಡ್ಡ ದಾರಿ:
ಅರಣ್ಯವಾಸಿಗಳಿಗೆ ಹಕ್ಕು-ಜೀವನಾಧಾರದ ನಿರಾಕರಣೆ ಜೊತೆಗೆ ಸಮುದಾಯಗಳ ಹಿಡಿತದಲ್ಲಿರುವ ಅರಣ್ಯಗಳನ್ನು ಕಸಿದುಕೊಳ್ಳುವ ಒಳದಾರಿಯೊಂದನ್ನು ಸರಕಾರ ಕಂಡುಕೊಂಡಿದೆ. ಈಶಾನ್ಯ ಭಾರತದಲ್ಲಿ ಅತ್ಯುತ್ತಮ ಸಂರಕ್ಷಣಾ ವ್ಯವಸ್ಥೆ ಇದ್ದು, ಶೇ.33ರಷ್ಟು ಅರಣ್ಯ ಪ್ರದೇಶ ಇರುವ 13 ರಾಜ್ಯಗಳಲ್ಲಿ 8 ಈ ಪ್ರಾಂತದಲ್ಲಿವೆ. ಸಂವಿಧಾನ ಈ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಿದ್ದು, ಇಲ್ಲಿ ನಿರ್ದಿಷ್ಟ ಸಂರಕ್ಷಣಾ ಕಾಯ್ದೆಗಳು ಚಾಲ್ತಿಯಲ್ಲಿವೆ. ಇಲ್ಲಿ ಅರಣ್ಯಗಳು ಆದಿವಾಸಿಗಳ ಮಾಲಕತ್ವ ಹಾಗೂ ನಿರ್ವಹಣೆಯಲ್ಲಿವೆ. ಇಂಥ ಅರಣ್ಯಗಳನ್ನು ಸರಕಾರ ಸ್ಥಳೀಯ ಸ್ವಯಮಾಡಳಿತದ ಜೊತೆ ಒಪ್ಪಂದ(ಎಂಒಯು) ಮಾಡಿಕೊಂಡು, ಕೈವಶ ಮಾಡಿಕೊಳ್ಳುತ್ತಿದೆ. ಉದಾಹರಣೆಗೆ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಸ್ವಾಯತ್ತ ಗ್ರಾಮ ಅಥವಾ ಜಿಲ್ಲಾ ಮಂಡಳಿಗಳೊಡನೆ ಹಾಗೂ ಮಣಿಪುರ/ಅರುಣಾಚಲ ಪ್ರದೇಶದ ಗ್ರಾಮಸಭೆಗಳೊಟ್ಟಿಗೆ ಒಪ್ಪಂದ ಮಾಡಿಕೊಂಡು, ‘ಅವರ್ಗೀಕೃತ’ ಕಾಡುಗಳನ್ನು ‘ಸಮುದಾಯ ಸಂರಕ್ಷಿತ’ ಎಂದು ಬದಲಿಸಲಾಗುತ್ತಿದೆ. ಈ ಕಾಡುಗಳ ಸಂರಕ್ಷಣೆ ಹಾಗೂ ಸಮುದಾಯಗಳಿಗೆ ಜೀವನಾಧಾರ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಲಾಗುತ್ತದೆ. ಕಳೆದ 15 ವರ್ಷದಲ್ಲಿ 1,300 ಚದರ ಕಿ.ಮೀ. ಕಾಡು ಸರಕಾರದ ಪಾಲಾಗಿದೆ.

ಭಾರತದ ಅರಣ್ಯಗಳ ಪರಿಸ್ಥಿತಿ ವರದಿ 2021ರ ಪ್ರಕಾರ, ಅರಣ್ಯಗಳಲ್ಲಿ ಮೂರು ವಿಧ-ಕಾಯ್ದಿಟ್ಟ, ಸಂರಕ್ಷಿತ ಹಾಗೂ ಅವರ್ಗೀಕೃತ. ಕಾಯ್ದಿಟ್ಟ ಕಾಡುಗಳಿಗೆ ಗರಿಷ್ಠ ರಕ್ಷಣೆ, ಸಂರಕ್ಷಿತ ಅರಣ್ಯಗಳಿಗೆ ಸೀಮಿತ ರಕ್ಷಣೆ(ಅರಣ್ಯ ಇಲಾಖೆ ನಿಷೇಧಿಸಿದ ಚಟುವಟಿಕೆ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಅವಕಾಶ) ಇರುತ್ತದೆ. ವ್ಯಕ್ತಿಗಳು, ಸಮುದಾಯ ಇಲ್ಲವೇ ಬುಡಕಟ್ಟು ಗುಂಪುಗಳು ಅವರ್ಗೀಕೃತ ಕಾಡುಗಳನ್ನು ಹೊಂದಿರಬಹುದು. ಈಶಾನ್ಯ ರಾಜ್ಯಗಳಲ್ಲಿರುವ ಕಾಡುಗಳನ್ನು ಅವರ್ಗೀಕೃತ ಎಂದು ದಾಖಲಿಸಲಾಗುತ್ತಿದೆ. ಆದರೆ, ಅವುಗಳನ್ನು ಅಭಯಾರಣ್ಯ ಇಲ್ಲವೇ ಸಂರಕ್ಷಿತ ಪ್ರದೇಶದಲ್ಲಿ ಸೇರ್ಪಡೆಗೊಳಿಸುತ್ತಿಲ್ಲ. ಬದಲಾಗಿ, ಸಮುದಾಯ ಅರಣ್ಯವಾಗಿ ಪರಿವರ್ತಿಸ ಲಾಗುತ್ತಿದೆ. ಇಂಥ ಪರಿವರ್ತನೆಯಲ್ಲಿನ ದೊಡ್ಡ ಲೋಪವೆಂದರೆ, ಒಪ್ಪಂದದ ಅವಧಿ ಮುಗಿದ ಬಳಿಕ ಅಂಥ ಕಾಡುಗಳನ್ನು ಪೂರ್ವ ಸ್ಥಿತಿಗೆ ತರಲಾಗುವುದಿಲ್ಲ.

ಸಂರಕ್ಷಿತ ಅರಣ್ಯದ ಡಿನೋಟಿಫಿಕೇಷನ್ ಬಹಳ ತ್ರಾಸದಾಯಕ. ಭಾರತದ ಅರಣ್ಯ ಪರಿಸ್ಥಿತಿ ವರದಿ 2021ರ ಅನ್ವಯ, ನಾಗಾಲ್ಯಾಂಡ್‌ನಲ್ಲಿರುವ 8,623 ಚದರ ಕಿ.ಮೀ. ಕಾಡಿನಲ್ಲಿ 8,389 ಚದರ ಕಿ.ಮೀ. ಅವರ್ಗೀಕೃತ(ಶೇ.98) ಕಾಡು. ಮೇಘಾಲಯದ ಶೇ.88, ಮಣಿಪುರ ಶೇ. 75 ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ.53ರಷ್ಟು ಕಾಡು ಅವರ್ಗೀಕೃತ. ಸಮುದಾಯ ಅರಣ್ಯ ಎಂದು ಘೋಷಿಸಿದ ಬಳಿಕ ಕೃಷಿ, ಬೇಟೆ, ಮೀನುಗಾರಿಕೆ, ಅರಣ್ಯ ಉತ್ಪನ್ನಗಳ ಸಂಗ್ರಹ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ. ಅರಣ್ಯ ಇಲಾಖೆ ಹಾಗೂ ಗ್ರಾಮ ಸಮಿತಿ ಸದಸ್ಯರ ಜಂಟಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಕೇಂದ್ರ ಬಿಡುಗಡೆಗೊಳಿಸಿದ ಅನುದಾನವನ್ನು ಸಂರಕ್ಷಣೆ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತದೆ ಮತ್ತು ಇಂಥ ಕಾರ್ಯಗಳಲ್ಲಿ ತೊಡಗಿಸಿ ಕೊಂಡವರಿಗೆ ಹಂಚಿಕೆಯಾಗುತ್ತದೆ. ಒಂದು ವೇಳೆ ಹಂಚಿಕೆಯಾಗುವ ಮೊತ್ತ ಜೀವನೋಪಾಯಕ್ಕಾಗಿ ಅರಣ್ಯವನ್ನೇ ಆಧರಿಸಿರುವ ಸ್ಥಳೀಯರ ಅಗತ್ಯಗಳನ್ನು ತೀರಿಸಲು ವಿಫಲವಾದರೆ, ಕಳ್ಳ ಬೇಟೆ, ಕಾಡಿಗೆ ಅತಿಕ್ರಮ ಪ್ರವೇಶ ಇತ್ಯಾದಿ ಆರಂಭಗೊಳ್ಳುತ್ತದೆ; ಸಿಕ್ಕಿಬಿದ್ದಲ್ಲಿ ಸೆರೆವಾಸ/ದಂಡ ಖಾತ್ರಿ. ಒಂದುಕಡೆ ಅರಣ್ಯ ಅವರ ಕೈತಪ್ಪುತ್ತದೆ; ಆದಾಯ ಮೂಲವಿಲ್ಲದೆ ಹಸಿವು ಕಾಡುತ್ತದೆ. ವ್ಯವಸ್ಥೆ ಅವರನ್ನು ಕಳ್ಳರನ್ನಾಗಿ ಮಾಡುತ್ತದೆ.

‘‘ಇಂದಿಗೂ ಕುತ್ಲೂರಿನಲ್ಲಿ ಮೂಲಸೌಲಭ್ಯಗಳಿಲ್ಲ; ರಸ್ತೆಯನ್ನು ಗ್ರಾಮದವರೇ ಮಾಡಿಕೊಂಡಿದ್ದಾರೆ. ವಿದ್ಯುತ್ ಸೌಲಭ್ಯ ಇಲ್ಲ. ಪ್ರಶ್ನಿಸಿದವರನ್ನು ಬಂಧಿಸಿ, ಹಿಂಸಿಸಲಾಗುತ್ತದೆ’’ ಎಂದು ವಿಠಲ ಮಲೆಕುಡಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ದೇಶದ ಬಹುತೇಕ ಆದಿವಾಸಿ/ಮೂಲವಾಸಿ ಹಾಡಿಗಳ ಸ್ಥಿತಿ ಇದೇ ಆಗಿದೆ. ಮಧ್ಯ ಭಾರತದಲ್ಲಿ ಖಾಸಗಿ- ಸರಕಾರದ ಸಂಸ್ಥೆಗಳು ಆದಿವಾಸಿಗಳ ಮೇಲೆ ನಡೆಸಿದ ಹಲ್ಲೆ, ಸಲ್ವಾ ಜುಡುಂನಂಥ ಪ್ರಾಯೋಜಿತ ಸೇನೆ ನಡೆಸಿದ ಹಿಂಸಾಕಾಂಡ ಸ್ವಾಭಾವಿಕ ಸಂಪನ್ಮೂಲಕ್ಕಾಗಿ ನಡೆದಂಥವು. ಬಂಡವಾಳಿಗರ ಹಿತ ಕಾಯಲು ನಡೆಯುವ ಇಂತಹ ಕೆಲಸಗಳೆಲ್ಲವೂ ಅಂತಿಮವಾಗಿ ಏಣಿಯ ಕೆಳ ಭಾಗದವರ ಮೇಲೆ ಹಲ್ಲೆ ನಡೆಸುತ್ತವೆ. ಜನರ ಜೀವನಾಧಾರವನ್ನು ಕಿತ್ತುಕೊಂಡು ಅವರಿಗೆ ಹಣೆಪಟ್ಟಿ ಹಚ್ಚುವುದು ಕ್ರೌರ್ಯದ ಪರಮಾವಧಿ. ಇದಕ್ಕೆ ಕ್ಷಮೆಯಿಲ್ಲ; ಇರಬಾರದು.