ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನನ್ನ ಬೆಂಬಲ: ಸಂಸದೆ ಸುಮಲತಾ ಘೋಷಣೆ

Update: 2023-03-10 10:50 GMT

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಮಂಡ್ಯ ಸಂಸದೆ (ಪಕ್ಷೇತರ) ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿದ್ದಾರೆ. 

ಇಂದು ಮಂಡ್ಯದ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮೋದಿ ನಾಯಕತ್ವ ನಂಬಿದ್ದೇನೆ. ದೇಶ, ವಿದೇಶದಲ್ಲಿ ತಲೆ ಎತ್ತಿ ನಾನು ಭಾರತೀಯ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ಬಂದಿದೆ ಎಂದರು. ಹಿತೈಷಿಗಳನ್ನು ಕೇಳಿ ಈ ನಿರ್ಧಾರ ಕೈಗೊಂಡಿದ್ದೇನೆ. ಅಂಬರೀಶ್ ಇದ್ದರೂ ಇದನ್ನು ಬೆಂಬಲಿಸುತ್ತಿದ್ದರು'' ಎಂದು ಹೇಳಿದರು.

''ಹಲವು ಪಕ್ಷಗಳು ಅಧಿಕಾರಕ್ಕೆ ಬಂದಿದ್ದರೂ ಮಂಡ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮಂಡ್ಯ ಜಿಲ್ಲೆ ಅಭಿವೃದ್ದಿ ಆಗಬೆಕು ಎಂದರೆ ನಾನು ಒಂದು ಹೆಜ್ಜೆ ಮುಂದೆ ಇಡಬೇಕಾಗಿದೆ. ಇಷ್ಟು ಯೋಜನೆಗಳನ್ನು ತರಲು ಸುಲಭವಾಗಲು ಕೇಂದ್ರ ಸರ್ಕಾರದ ಅವಕಾಶ ಮಾಡಿಕೊಟ್ಟಿದೆ'' ಎಂದು ತಿಳಿಸಿದರು. 

ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

''ನನ್ನ ಈ ನಿಲುವಿನಿಂದ ಹಲವರಿಗೆ ಬೇಜಾರಾಗಿರಬಹುದು. ಅಂಬರೀಶ್ ಕಾಂಗ್ರೆಸ್ ನಲ್ಲಿ ದೀರ್ಘಕಾಲ ಇದ್ದರೂ ಅವರೊಬ್ಬ ಪಕ್ಷಾತೀತ ವ್ಯಕ್ತಿಯಾಗಿದ್ದರು. ಈ ನನ್ನ ನಿರ್ಧಾರಕ್ಕೆ ಅಂಬರೀಶ್ ಬೆಂಬಲಿಗರು, ನನ್ನ ಬೆಂಬಲಿಗರು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ'' ಎಂದು ಅವರು ಹೇಳಿದರು.

''ಬೇಕಾದರೆ ರಾಜಕಾರಣ ಬಿಡುತ್ತೇನೆ ಸ್ವಾಭಿಮಾನ ಬಿಡುವುದಿಲ್ಲ. ಪ್ರಾಣಬಿಟ್ಟರು ಮಂಡ್ಯ ಬಿಟ್ಟು ಬೇರೆ ಕಡೆ ರಾಜಕಾರಣ ಮಾಡುವುದಿಲ್ಲ'' ಎಂದು ಅವರು ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದರು.

''ಕೆ. ಆರ್. ನಗರದ ಸಮಾರಂಭ ಒಂದರಲ್ಲಿ ಶಾಸಕರ ನಾಲ್ವರು ಬೆಂಬಲಿಗರು ಬಹಿರಂಗವಾಗಿಯೇ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಪೊಲೀಸರು ಇದ್ದರೂ ಏನು ಮಾಡಲು ಆಗಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ, ಮೈಸೂರು ಎಸ್ ಪಿ ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ದೂರು ನೀಡಿದ್ದೇನೆ. ಆದರೆ, ಶಾಸಕರ ಒತ್ತಡದಿಂದ ಏನೂ ಕ್ರಮವಾಗಿಲ್ಲ'' ಎಂದು ಸುಮಲತಾ ಆರೋಪಿಸಿದರು.

''ಸದ್ಯಕ್ಕೆ ಬಿಜೆಪಿ ಸೇರ್ಪಡೆ ಇಲ್ಲ''

ಬಿಜೆಪಿ ಸೇರ್ಪಡೆಗೆ ಕೆಲವೊಂದು ಕಾನೂನು ತೊಡಕುಗಳಿವೆ. ಆದ್ದರಿಂದ ಸದ್ಯಕ್ಕೆ ಬಿಜೆಪಿ ಸೇರ್ಪಡೆ ಇಲ್ಲ ಎಂದು ಸುಮಲತಾ ಅವರು ಸ್ಷಷ್ಟಪಡಿಸಿದರು. 

ಇದನ್ನೂ ಓದಿ: ಸುಮಲತಾಗೆ ಅಭಿಮಾನಿಗಳೇ ಹೈಕಮಾಂಡ್?; ಕುತೂಹಲ ಮೂಡಿಸುತ್ತಿರುವ ಮಂಡ್ಯ ರಾಜಕೀಯ

Similar News