ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರುವ ವಿಶ್ವಾಸವಿದೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಮಾ.10: 'ಮಾಜಿ ಸಚಿವ ಜನಾರ್ದನರೆಡ್ಡಿ ಅವರು ಇನ್ನೂ ತಮ್ಮ ತೀರ್ಮಾನವನ್ನು ಪ್ರಕಟ ಮಾಡಿಲ್ಲ. ಮೂರು ದಶಕಗಳಿಂದ ರಾಜಕಾರಣದಲ್ಲಿದ್ದಾರೆ. ಅವರ ನಿರ್ಣಯವನ್ನು ಅವರು ತೆಗೆದುಕೊಳ್ಳುತ್ತಾರೆ. ಅವರು ಮತ್ತು ಬಿಜೆಪಿಗೆ ಹಳೆ ಸಂಬಂಧವಿರುವುದು ಸತ್ಯ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 65 ಸ್ಥಾನ ಬರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಹುಶಃ ಅವರು ತಮ್ಮ ಪಕ್ಷಕ್ಕೆ ದೊರೆಯುವ ಸ್ಥಾನಗಳ ಬಗ್ಗೆ ಮಾತನಾಡಿರಬಹುದು ಎಂದು ತಿರುಗೇಟು ನೀಡಿದರು.
'ನಮ್ಮ ಪಕ್ಷವು ಗಟ್ಟಿಯಾದ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಹೊಂದಿದೆ. ಅದೇ ನಮ್ಮ ಶಕ್ತಿ. ಚುನಾವಣೆ ಮೂರನೇ ಹಂತದ ಪ್ರಚಾರ ನಡೆಯುತ್ತಿದೆ. ಬೂತ್ ವಿಜಯ, ಬೂಟ್ ಮಟ್ಟದ ವಿಜಯ ಸಂಕಲ್ಪ, ಈಗ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಎಲ್ಲ ಜಿಲ್ಲೆಯಲ್ಲಿ ಮೋರ್ಚಾಗಳ ಸಮ್ಮೇಳನ ಆಗುತ್ತಿದೆ. ನನ್ನ ಪ್ರಕಾರ 224 ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಸಂಘಟನಾತ್ಮಕ ಕೆಲಸಗಳು ನಡೆಯುತ್ತಿವೆ' ಎಂದು ಮುಖ್ಯಮಂತ್ರಿ ಹೇಳಿದರು.
ಅದ್ಭುತ ಬೆಂಬಲ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಕೆಲಸ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ, ನನ್ನ ಕೆಲಸಗಳೂ ಸೇರಿ ದೊಡ್ಡ ಪ್ರಮಾಣದ ಕೆಲಸ ಕೆಳ ಮಟ್ಟದಿಂದ ದೊರೆಯುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ ಅದ್ಭುತವಾದ ಬೆಂಬಲ ದೊರೆಯುತ್ತಿದ್ದು, ಸಂಪೂರ್ಣವಾದ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜನಾರ್ದನ ರೆಡ್ಡಿ ಹಣದ ಜಾಡು: 4 ದೇಶಗಳಿಗೆ ಮನವಿ ಪತ್ರ ನೀಡಲು ಸಿಬಿಐ ನ್ಯಾಯಾಲಯ ಆದೇಶ
ಹಲವಾರು ಆಯಾಮಗಳ ಮೇಲೆ ನಿರ್ಧಾರ: ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ, ಹಲವಾರು ಆಯಾಮಗಳಲ್ಲಿ ಸಮೀಕ್ಷೆ ಮಾಡಿ ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ. ಒಂದೇ ಬಾರಿಗೆ ಟಿಕೆಟ್ ತಪ್ಪುತ್ತದೆ ಎಂದು ಹೇಳುವುದು ಅಥವಾ ಎಲ್ಲರಿಗೂ ಸಿಗಲಿದೆ ಎನ್ನುವುದು ರಾಜಕಾರಣದಲ್ಲಿ ಸರಿಯಲ್ಲ ಎಂದರು.