ಮೇ 15ರ ವೇಳೆ ಸರಕಾರ ರಚನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2023-03-10 11:37 GMT

ಬೆಂಗಳೂರು, ಮಾ. 10: ‘ಕಾಂಗ್ರೆಸ್ ಪಕ್ಷದ ಮೂರು ಆಶ್ವಾಸನೆಗಳ ‘ಗ್ಯಾರಂಟಿ ಕಾರ್ಡ್’ಗೆ ನಾನು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹಿ ಮಾಡಿದ್ದು, ಈ ಕಾರ್ಡ್ ಅನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಬೇಕು. ಮೇ 15ರ ವೇಳೆಗೆ ಸರಕಾರ ರಚನೆಯಾಗಲಿದ್ದು, ಜೂನ್ ತಿಂಗಳಿಂದಲೇ ಈ ಯೋಜನೆ ಜಾರಿಗೆ ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಮಾಗಡಿಯಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಇಲ್ಲಿ ನೆರೆದಿರುವ ನೀವುಗಳು ನಿಮ್ಮ ಮನೆಯವರು ಹಾಗೂ ಸಂಬಂಧಿಗಳು, ಅಕ್ಕಪಕ್ಕದ ಮನೆಯವರು ಸೇರಿದಂತೆ ಒಬ್ಬೊಬ್ಬರು ನಾಲ್ಕೈದು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸಬೇಕು. ರಾಜ್ಯದಲ್ಲಿ ಭ್ರಷ್ಟ ಸರಕಾರ ಅಧಿಕಾರದಲ್ಲಿದೆ. ನಿಮ್ಮ ಕ್ಷೇತ್ರದಲ್ಲಿ ಕೆಲವು ಯುವಕರು ಪಿಎಸ್ಸೈ ಹುದ್ದೆ ಪಡೆಯಲು ಹಣ ನೀಡಿ ಜೈಲು ಸೇರಿ ಅವರ ಬದುಕು ನಾಶ ಮಾಡಿಕೊಂಡಿದ್ದಾರೆ. ನಮ್ಮ ಕಾಲದಲ್ಲಿ ನಾವು ಯಾರ ಬಳಿಯಾದರೂ ಹಣ ಪಡೆದು ಈ ರೀತಿ ಬದುಕು ನಾಶ ಮಾಡಿದ್ದೆವಾ?’ ಎಂದು ಪ್ರಶ್ನಿಸಿದರು.

‘ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ-ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ಹೀಗಾಗಿ ನೀವು ಕೈ ಜತೆ ಕೈಜೋಡಿಸಬೇಕೆಂದು ಪ್ರಾರ್ಥಿಸುತ್ತೇನೆ. ಈ ಕ್ಷೇತ್ರದಲ್ಲಿ ಬಾಲಕೃಷ್ಣ ಮಾತ್ರ ಟಿಕೆಟ್‍ಗೆ ಅರ್ಜಿ ಹಾಕಿದ್ದು, ನೀವೆಲ್ಲರೂ ಅವರನ್ನು ಗೆಲ್ಲಿಸಿ ವಿಧಾನಸೌಧದಲ್ಲಿ ಕೂರಿಸಿ ನಮಗೆ ಶಕ್ತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

‘ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಡವರ ಕುಟುಂಬಗಳನ್ನು ಉಳಿಸಬೇಕೆಂದು ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು 10 ಕೆ.ಜಿ.ಗೆ ಹೆಚ್ಚಿಸಲಾಗುವುದು. ಆ ಮೂಲಕ ಹಸಿವುಮುಕ್ತ ರಾಜ್ಯ ನಿರ್ಮಾಣಕ್ಕೆ ಪಣತೊಟ್ಟಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಇಂತಹ ಯೋಜನೆ ಜಾರಿ ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ಬಂದರೆ ನುಡಿದಂತೆ ನಡೆಯುತ್ತಾರೆಂದು ನೀವೆಲ್ಲರೂ ನಂಬಿಕೆ ಇಟ್ಟಿದ್ದೀರಿ’ ಎಂದು ಅವರು ತಿಳಿಸಿದರು.

Similar News