5, 8ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದುಗೊಳಿಸಿದ ಹೈಕೋರ್ಟ್

Update: 2023-03-10 15:32 GMT

ಬೆಂಗಳೂರು, ಮಾ.10: ಪ್ರಸಕ್ತ ಶೈಕ್ಷಣಿಕ ಸಾಲಿನ ಮಾ.13ರಿಂದ ಪ್ರಾರಂಭವಾಗಬೇಕಿದ್ದ 5, 8ನೆ ತರಗತಿಯ ಬೋರ್ಡ್ ಪರೀಕ್ಷೆ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಎಂದಿನಂತೆ ಸಾಮಾನ್ಯ ವಾರ್ಷಿಕ ಪರೀಕ್ಷೆ ನಡೆಸಿ, ಶಾಲಾ ಮಟ್ಟದಲ್ಲೇ ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಿದೆ.

2022ರ ಡಿ.12 ರಂದು ರಾಜ್ಯ ಸರಕಾರ 2022ನೇ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8ನೆ ತರಗತಿಗಳ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನ ಬದಲಾಯಿಸುವುದಕ್ಕಾಗಿ (ಬೋರ್ಡ್‍ಪರೀಕ್ಷೆ) ಹೊರಡಿಸಿದ್ದ ಸುತ್ತೋಲೆಯನ್ನು ಹೊರಡಿಸಿತ್ತು. ಈ ಸಂಬಂಧ ಸರಕಾರದ ನಿರ್ಧಾರ ಪ್ರಶ್ನಿಸಿ ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ (ಕುಸ್ಮಾ), ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ, ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣಗಳ ಸಂಘ (ಓಯುಆರ್ ಎಸ್) ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರುರ ಅವರಿದ್ದ ನ್ಯಾಯಪೀಠ ಸರಕಾರದ ಸುತ್ತೋಲೆಯನ್ನು ರದ್ದುಗೊಳಿಸಿ ಆದೇಶಿಸಿದೆ.

ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸರಕಾರ ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಹಾಗೂ ಎಲ್ಲ ಮಕ್ಕಳಗೂ ಅನ್ವಯವಾಗುವಂತಿರಬೇಕು. ಮಕ್ಕಳ ಮೌಲ್ಯಪಾಮನ ಮಾಡುವುದಕ್ಕಾಗಿ ಔಪಚಾರಿಕವಾಗಿ ನಡೆಸುವುದಕ್ಕಾಗಿ ಈ ನಿರ್ಧಾರಕ್ಕೆ ಬಂದಿದೆ ಎಂಬುದಾಗಿ ಹೇಳಿದ್ದಾರೆ. ಆದರೂ, ರಾಜ್ಯ ಸರಕಾರ ಶಿಕ್ಷಣ ಕಾಯಿದೆ ಹಕ್ಕು ಅಡಿಗಳಲ್ಲಿ ಸುತ್ತೋಲೆ ಹೊರಡಿಸಿದೆ. ಈ ರೀತಿಯ ಸಂದರ್ಭದಲ್ಲಿ ಕಾಯಿದೆಯ ಸೆಕ್ಷನ್ 38(4) ನಿಯಮಗಳ ಪ್ರಕಾರ ಸರಕಾರ ಅಧಿಸೂಚನೆ ಹೊರಡಿಸಬೇಕಾದಲ್ಲಿ ನಿಮಗಳ ಪ್ರಕಾರ ಇರಬೇಕೆಂದುಪೀಠ ತಿಳಿಸಿತು.

ಏನಿದು ಸುತ್ತೋಲೆ?: 2022-23ನೆ ಶೈಕ್ಷಣಿ ಸಾಲಿನಲ್ಲಿ 5 ಮತ್ತು 8ನೆ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ (ಬೋರ್ಡ್ ಪರೀಕ್ಷೆ) 2022ರ ಡಿಸೆಂಬರ್ 12 ರಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.

ರುಪ್ಸ ಕರ್ನಾಟಕ ಸ್ವಾಗತ

''ರಾಜ್ಯ ಶಿಕ್ಷಣ ಇಲಾಖೆಯು ಅವೈಜ್ಞಾನಿಕವಾಗಿ 5 ಮತ್ತು 8ನೇ ತರಗತಿಗೆ ನಡೆಸಲು ಉದ್ದೇಶಿಸಿದ್ದ ವಾರ್ಷಿಕ ಪರೀಕ್ಷೆಯನ್ನು ರದ್ದುಪಡಿಸಲು ಕೋರಿ ರುಪ್ಸ ಕರ್ನಾಟಕ ಸಂಘಟನೆಯು ಹೈಕೋರ್ಟಿನ ಮೆಟ್ಟಿಲೇರಿತ್ತು. ಇಂದು  ಹೈಕೋರ್ಟ್ ನ್ಯಾಯಮೂರ್ತಿಗಳಾದ ಮಾನ್ಯ ಶ್ರೀ ಪ್ರದೀಪ್ ಸಿಂಗ್ ಹೇರೂರ್ ರವರು ಪರೀಕ್ಷೆಯ ಕುರಿತ ಸರ್ಕಾರದ  ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ರುಪ್ಸ ಕರ್ನಾಟಕ ಇದರ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ. 

Similar News