ಕಿರಾಣಿ ಅಂಗಡಿಗಳು ನೀಡುವ ಸೇವೆ ಮಾಲ್‍ಗಳು ನೀಡುವುದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Update: 2023-03-10 14:20 GMT

ಹಾವೇರಿ, ಮಾ.10: ಕಿರಾಣಿ ಅಂಗಡಿ ನೀಡುವ ಸೇವೆಯನ್ನು ಮಾಲ್‍ಗಳು ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲೆಯ ಶಿಗ್ಗಾಂವದಲ್ಲಿ ಕಿರಾಣಿ ವ್ಯಾಪಾರಸ್ಥರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಲ್‍ಗಳು ಶಾಪಿಂಗ್ ಕಾಂಪ್ಲೆಕ್ಸ್ ಗಳು ಬಂದಿವೆ. ಸ್ವಲ್ಪ ದಿನ ವ್ಯಾಪಾರ ಚೆನ್ನಾಗಿ ಆದರೂ ಸ್ವಲ್ಪ ದಿನಗಳಲ್ಲಿ ಕಡಿಮೆಯಾಗುತ್ತದೆ ಏನೇ ಬಂದರೂ ಕಿರಾಣಿ ಅಂಗಡಿ ವ್ಯಾಪಾರ ಕಡಿಮೆಯಾಗುವುದಿಲ್ಲ ಎಂದರು.

ಶಿಗ್ಗಾಂವ ಸುತ್ತಮುತ್ತಲ ಪ್ರದೇಶಗಳಲ್ಲಿ ಕಿರಾಣಿ ಅಂಗಡಿಗಳು ಸೇವೆ ಮಾಡಿಕೊಂಡು ಬಂದಿವೆ. ಹಳ್ಳಿಯ ಜನ ಮಾರುಕಟ್ಟೆಗೆ ಬಂದಾಗ ಅವರಲ್ಲಿ ಇಂತಹ ಕಡೆ ತೂಕ, ಗುಣಮಟ್ಟ ಸರಿ ಇರುತ್ತದೆ ಎಂದು ವಿಶ್ವಾಸ ಗಳಿಸಿಕೊಂಡಿದ್ದೀರಿ. ಬಹಳಷ್ಟು ಅಂಗಡಿಗಳಿಗೆ ಖಾಯಂ ಗಿರಾಕಿಗಳಿದ್ದಾರೆ. ಇದಲ್ಲದೇ ಹಳ್ಳಿ ಜನ ಕುಳಿತು ಮಾತನಾಡುವ ಕೇಂದ್ರ ಸ್ಥಳವೂ ಹೌದು ಎಂದ ಅವರು, ಕೆಲವೊಮ್ಮೆ ಕಿರಾಣಿ ಅಂಗಡಿಗಳಲ್ಲಿ ರಾಜಕೀಯವೂ ಹುಟ್ಟುತ್ತದೆ ಎಂದು ಮುಖ್ಯಮಂತ್ರಿ ನಗೆ ಚಟಾಕಿ ಹಾರಿಸಿದರು.

Similar News