ಸಂಸದೆ ಸುಮಲತಾ ಬಿಜೆಪಿ ಬೆಂಬಲಿಸುವ ತೀರ್ಮಾನ ಮಂಡ್ಯ ಜಿಲ್ಲೆಯ ಜನತೆಗೆ ಬಗೆದ ದ್ರೋಹ: ಸಿಪಿಐ(ಎಂ)

Update: 2023-03-10 15:26 GMT

ಮಂಡ್ಯ, ಮಾ.10: ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲಿಸಲು ತೀರ್ಮಾನಿಸಿರುವುದು ಮಂಡ್ಯ ಜಿಲ್ಲೆಯ ಜನತೆಗೆ ಬಗೆದ ದ್ರೋಹವಾಗಿದೆ. ಇದನ್ನು ಜಿಲ್ಲೆಯ ಜನತೆ ಕ್ಷಮಿಸುವುದಿಲ್ಲ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಹೇಳಿದ್ದಾರೆ.

ಲಾಭಕ್ಕಾಗಿ ಕೋಮುವಾದಿಯಾದ ಸುಮಲತಾ ಅವರ ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)  ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ಸುಮಲತಾ ಅವರ ಅವಕಾಶವಾದಿ, ಸ್ವಾರ್ಥಪರ ತೀರ್ಮಾನವನ್ನು ಜಿಲ್ಲೆಯ ಜನತೆ ಬೆಂಬಲಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಸುಮಲತಾ ಅವರು ಪಕ್ಷೇತರ ಎಂಬ ಹೆಸರಿನ ನಾಟಕ ಮಾಡಿ ಜಿಲ್ಲೆಯ ಜನರ, ಪ್ರಗತಿಪರರ, ಪ್ರಗತಿಪರ ಸಂಘಟನೆಗಳ ಹಾಗೂ ಬದುಕಿನುದ್ದಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳ ಮತ ಪಡೆದು ಈಗ ಅಧಿಕಾರ ಮತ್ತು ಅಂತಸ್ತಿಗಾಗಿ ಬಿಜೆಪಿ ಎಂಬ ಒಂದು ಫ್ಯಾಸಿಸ್ಟ್ ಪಕ್ಷವನ್ನು ಬೆಂಬಲಿಸುವುದು ಅವರನ್ನು ನಂಬಿ ಬೆಂಬಲಿಸಿದ ಎಲ್ಲರ ಬೆನ್ನಿಗೂ ಚೂರಿ ಹಾಕುವ ಕೆಲಸವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಅಂಬರೀಶ್ ಅವರು ಎಲ್ಲ ಜಾತಿ ಧರ್ಮಗಳನ್ನು ಮೀರಿದ ಜಾತ್ಯತೀತ ಕಲಾವಿದರಾಗಿದ್ದರು ಮತ್ತು ಅವರು ಬಿಜೆಪಿಯ ಆಮಿಷಗಳಿಗೆ ಎಂದೂ ಬಲಿಯಾಗಿರಲಿಲ್ಲ ಎಂಬುದು ಅಂಬರೀಶ್ ಅವರ ಹೆಸರಿನಲ್ಲಿ ಮತಯಾಚಿಸಿದ ಸುಮಲತಾ ಅವರಿಗೆ ನೆನಪಾಗಲಿಲ್ಲವೆ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಒಂದು ಅನಾಗರಿಕ, ಮಹಿಳಾ ವಿರೋಧಿ, ಮನುವಾದಿ ರಾಜಕೀಯ ಪಕ್ಷ. ಜಿಲ್ಲೆಯ ಜನರಿಗೆ ಬದುಕು ಕಲ್ಪಿಸಿದ ಟಿಪ್ಪು ಅವರಿಗೆ ಪ್ರತಿಕ್ಷಣವೂ ಅವಮಾನ ಮಾಡುತ್ತಾ ಜಿಲ್ಲೆಯ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರು ಎಂದು ಬಿಂಬಿಸಿ ಅವಮಾನ ಮಾಡುತ್ತಿರುವ ಪಕ್ಷ. ಇಂತಹ ಪಕ್ಷಕ್ಕೆ ಕೇವಲ ಅಧಿಕಾರ ಮತ್ತು ಅಂತಸ್ತಿನ ಕಾರಣಕ್ಕೆ ಬೆಂಬಲಿಸುತ್ತಿರುವ ನಿಮ್ಮ ವಿವೇಚನೆಗೆ ಗೆದ್ದಲು ಹಿಡಿದಿದೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಅಂಬರೀಶ್ ಅವರ ಜಾತ್ಯತೀತ ನಂಬಿಕೆಗೆ ದ್ರೋಹ ಬಗೆಯುತ್ತಿರುವ ನಿಮ್ಮನ್ನು ಅಂಬರೀಶ್ ಅವರ ಅಭಿಮಾನಿಗಳು, ಮಂಡ್ಯ ಜಿಲ್ಲೆಯ ದುಡಿಯುವ ಮಣ್ಣಿನ ಮಕ್ಕಳು ಎಂದೂ ಕ್ಷಮಿಸುವುದಿಲ್ಲ. ನೀವು ಈಗ ತಿಂದಿರುವ ಕೇಸರಿ ಉಪ್ಪಿಗೆ ಸಾಕಷ್ಟು ನೀರು ಕುಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Similar News