ಬಿಜೆಪಿ ಜಾತಿವಾದಿ ಪಕ್ಷವಲ್ಲ: ಮಾಜಿ ಸಚಿವ ಈಶ್ವರಪ್ಪ

Update: 2023-03-10 17:12 GMT

ಮಡಿಕೇರಿ ಮಾ.10 : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಇಂದು ಕೊಡಗು ಜಿಲ್ಲೆಯನ್ನು ಪ್ರವೇಶಿಸಿತು. ನಂತರ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಭಾರತೀಯ ಜನತಾ ಪಾರ್ಟಿ (BJP) ಜಾತಿವಾದಿ ಪಕ್ಷವಲ್ಲ ರಾಷ್ಟ್ರವಾದಿ ಪಕ್ಷ, ಬಿಜೆಪಿಗೆ ಕೋಮುವಾದಿ ಪಟ್ಟ ಕಟ್ಟಿದವರೇ ಜಾತಿವಾದಿಗಳು ಎಂದು ಗುಡುಗಿದರು.

ಸಿದ್ದರಾಮಯ್ಯ ಅವರು ಕುರುಬರೆಲ್ಲ ನನ್ನ ಹಿಂದೆ ಬನ್ನಿ ಎಂದರೆ, ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ ಎಂದು ಕರೆ ನೀಡುತ್ತಿದ್ದಾರೆ. ಇದರಲ್ಲೇ ಅರ್ಥವಾಗುತ್ತದೆ ಜಾತಿಯ ವಾದಿಗಳು ಯಾರೆಂದು. ಸಿದ್ದರಾಮಯ್ಯ ಅವರಿಗೆ ಕುರುಬರು, ದಲಿತರು, ಇತರ ಜನಾಂಗಗಳ ಬೆಂಬಲ ಇಲ್ಲ ಎನ್ನುವುದು ಖಾತ್ರಿಯಾಗಿ ಅಲ್ಪಸಂಖ್ಯಾತರು ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ದೇಶವನ್ನು ಭಯೋತ್ಪಾದಕ ಮುಕ್ತ ಮಾಡಬೇಕೆಂದು ಸಂಕಲ್ಪ ತೊಟ್ಟಿದೆ, ಆದರೆ ಕಾಂಗ್ರೆಸ್ಸಿಗರು ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಬಂದಾಗ ರಾಷ್ಟ್ರೀಯವಾದಿ ಕೊಡಗಿನ ಜನ ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಮೊಟ್ಟೆ ಎಸೆದರು. ಮತ್ತೆ ಬರುತ್ತೇನೆ ಎಂದು ತೊಡೆ ತಟ್ಟಿದ ಸಿದ್ದರಾಮಯ್ಯ ಮರಳಿ ಯಾಕೆ ಬರಲಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಬಲವಂತದ ಮತಾಂತರದ ವಿರುದ್ಧದ ಕಾಯ್ದೆಯನ್ನು ಸಿದ್ದರಾಮಯ್ಯ ಅವರಂತಹ ನೂರು ಜನ ಬಂದರೂ ತೆಗೆದು ಹಾಕಲು ಸಾಧ್ಯವಿಲ್ಲ ಎಂದರು.

ಬಿಜೆಪಿಯಲ್ಲಿ ಅಭ್ಯರ್ಥಿ ಯಾರೇ ಆಗಿರಲಿ ಇಡೀ ವಿಶ್ವವೇ ಮೆಚ್ಚಿದ ನಾಯಕ ಪ್ರಧಾನಿ ನರೇಂದ್ರಮೋದಿ ಹಾಗೂ ತಾವರೆ ಗುರುತು ಮಾತ್ರ ನಮ್ಮ ಕಣ್ಣ ಮುಂದೆ ಬರಬೇಕು ಎಂದು ಈಶ್ವರಪ್ಪ ಹೇಳಿದರು.

ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ 120 ದೇಶಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿದ ಖ್ಯಾತಿ ಭಾರತದ್ದು, ವಿಶ್ವದಲ್ಲಿಯೇ ಈಗ ಭಾರತವನ್ನು ಅಗ್ರಗಣ್ಯ ದೇಶವನ್ನಾಗಿ ಗುರುತಿಸಲ್ಪಡುತ್ತಿರುವುದಕ್ಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವವೇ ಕಾರಣವೆಂದು ಹೇಳಿದರು.

ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಯುತ್ತಿದೆ, ಕಳೆದ 9 ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ ಆರೋಪಗಳು ಬಂದಿಲ್ಲ. ಈ ದೇಶಕ್ಕೆ ಬೇಕಾಗಿರುವುದು ಉತ್ತಮ ಆಡಳಿತ, ಅದನ್ನು ಮೋದಿ ಅವರ ನಾಯಕತ್ವದ ಸರ್ಕಾರ ನೀಡಿದೆ. ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಮೈಸೂರು- ಕುಶಾಲನಗರಕ್ಕೆ ಚತುಷ್ಟಥ ರಸ್ತೆಯಾಗಲಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ನೀವು ನೀಡಿದ ಯಾವ ಭರವಸೆ ಈಡೇರಿಸಿದ್ದೀರಿ ಹೇಳಿ ಎಂದು ಪ್ರಶ್ನಿಸಿದ ಸದಾನಂದಗೌಡ, ಸಾಧನೆಗಳ ಆಧಾರದಲ್ಲಿ ಈ ಬಾರಿಯ ಚುನಾವಣೆಯನ್ನು ಬಿಜೆಪಿ ಸಮರ್ಥವಾಗಿ ಎದುರಿಸಲಿದೆ ಎಂದರು. 

ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಅತ್ಯಧಿಕ ಅನುದಾನ ಬಂದಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಕೊಂಡಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕೊಡಗು ಉಸ್ತುವಾರಿ ಪ್ರತಾಪ್ ಸಿಂಹ ನಾಯಕ್, ಎಂ.ಎಲ್.ಸಿ. ಸುಜಾಕುಶಾಲಪ್ಪ, ಪ್ರಮುಖರಾದ ರವಿಕುಶಾಲಪ್ಪ, ರೀನಾ ಪ್ರಕಾಶ್, ನೆಲ್ಲೀರ ಚಲನ್, ಸಿ.ಕೆ.ಬೋಪಣ್ಣ, ಕಿಲನ್ ಗಣಪತಿ, ಬಿ.ಎನ್.ಪ್ರಕಾಶ್, ರಾಜೇಂದ್ರ, ಮನುಮುತ್ತಪ್ಪ,  ಸುನೀಲ್ ಸುಬ್ರಹ್ಮಣಿ, ತಿಮ್ಮಪ್ಪ ಶೆಟ್ಟಿ, ಬಿ.ಬಿ.ಭಾರತೀಶ್, ತಳೂರು ಕಿಶೋರ್ ಕುಮಾರ್, ಸತೀಶ್, ದತ್ತಾತ್ರಿ, ಕಿಶೋರ್, ಮಾದಪ್ಪ, ಅರುಣ್ ಕುಮಾರ್, ವಾಟೇರಿರ ಬೋಪಣ್ಣ, ಪ್ರಸನ್ನ ಸೇರಿದಂತೆ ಅಧಿಕ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.   

Similar News