ತೆಂಗಿನ ಸೀಮೆಯಲ್ಲಿ ಈ ಬಾರಿ ನಾಗೇಶ್ ಗೆಲುವು ಸುಲಭವಿಲ್ಲ?

ತಿಪಟೂರು ವಿಧಾನಸಭಾ ಕ್ಷೇತ್ರ

Update: 2023-03-11 04:20 GMT

ಯಾರಿಗೂ ಸತತ ಗೆಲುವಿನ ರುಚಿ ತೋರಿಸದ ಕ್ಷೇತ್ರದಲ್ಲಿ ಏನಾದೀತು ಈ ಬಾರಿ? ಮಂತ್ರಿಯಾದ ನಾಗೇಶ್‌ಗೆ ಕಂಟಕವಾಗಲಿವೆಯೇ ಪಠ್ಯಪುಸ್ತಕ, ಹಿಜಾಬ್ ವಿವಾದ? ಲಿಂಗಾಯತ ಮತಗಳನ್ನೇ ನೆಚ್ಚಿರುವ ಬಿಜೆಪಿಯೆದುರು ಕಾಂಗ್ರೆಸ್ ರಣತಂತ್ರವೇನು? ಜೆಡಿಎಸ್ ಕೂಡ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ತಿಪಟೂರಿನಲ್ಲಿ ಹೇಗಿರಲಿದೆ ಕದನ ಕಣ?

ತಿಪಟೂರು ಎಂದರೆ ತೆಂಗಿನ ಸೀಮೆ. ಭದ್ರ ನೆಲೆ ಎಂಬ ಭಾವನೆಯನ್ನು ಯಾವ ಪಕ್ಷದ ಪಾಲಿಗೂ ಕೊಡದ ಕ್ಷೇತ್ರ ತಿಪಟೂರು. ಇದ್ದುದರಲ್ಲಿಯೆ ಹೆಚ್ಚು ಬಾರಿ ಗೆದ್ದ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆಯಾದರೂ, ಮತದಾರರು ಬೇರೆ ಬೇರೆ ಪಕ್ಷಗಳಿಗೆ ಅವಕಾಶ ಕೊಡುತ್ತಲೇ ಬಂದಿದ್ದಾರೆ. ಹಾಲಿ ಶಾಸಕರಾಗಿದ್ದವರು ಮರು ಆಯ್ಕೆಯಾದ ಉದಾಹರಣೆಯೇ ಇಲ್ಲ. ಒಬ್ಬರೇ ಎರಡು ಬಾರಿ ಶಾಸಕರಾಗಿದ್ದು ಇದೆಯಾದರೂ ಮೂರನೇ ಬಾರಿ ಇದೇ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದು ಈವರೆಗೆ ಇಲ್ಲ.

ಪ್ರಸಕ್ತ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಎರಡು ಬಾರಿ ಶಾಸಕರಾಗಿರುವ ಬಿ.ಸಿ.ನಾಗೇಶ್, ಬಿಜೆಪಿಯಿಂದ ಮತ್ತೆ ಅದೃಷ್ಟಪರೀಕ್ಷೆಗೆ ಇಳಿಯುತ್ತಿದ್ದಾರೆ. ಅಂದಹಾಗೆ ಬ್ರಾಹ್ಮಣ ಸಮುದಾಯದ ಬಿ.ಸಿ. ನಾಗೇಶ್ ಈ ಕ್ಷೇತ್ರದಲ್ಲಿ ನೆಚ್ಚಿರುವುದು ಲಿಂಗಾಯತ ಬಲವನ್ನೇ. ಮಹಿಳಾ ಮತದಾರರೇ ಹೆಚ್ಚಿರುವುದು ಮತ್ತೊಂದು ವಿಶೇಷ.

ಕಾಂಗ್ರೆಸ್, ಜೆಡಿಎಸ್ ಪೈಪೋಟಿ

ಮೇಲ್ನೋಟಕ್ಕೆ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಪೈಪೋಟಿ ಎನ್ನಿಸಿದರೂ, ಜೆಡಿಎಸ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ಯತ್ನದಲ್ಲಿರುವುದರಿಂದ ಅಖಾಡ ಕುತೂಹಲ ಕೆರಳಿಸುತ್ತಿರುವುದು ಸುಳ್ಳಲ್ಲ.

ಕಾಂಗ್ರೆಸ್‌ನಿಂದ ಈ ಬಾರಿ ಮಾಜಿ ಶಾಸಕ ಕೆ.ಷಡಕ್ಷರಿ ಅವರಲ್ಲದೆ ಇನ್ನೂ ಕೆಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕೆ. ಷಡಕ್ಷರಿ ಲಿಂಗಾಯತ ಸಮುದಾಯದವರಾಗಿದ್ದರೂ, ಕಳೆದ ಬಾರಿ ಇವರ ವಿರುದ್ಧ ನಾಗೇಶ್ ಗೆಲುವಿನ ಅಂತರ ಹೆಚ್ಚಿತ್ತು ಎಂಬುದು ನಿಜ. ಆದರೆ ಈ ಬಾರಿ ಅವರು ತನ್ನ ಕೊನೆಯ ಚುನಾವಣೆ ಎಂಬ ಅಸ್ತ್ರ ಪ್ರಯೋಗಿಸುತ್ತಿರುವುದು ಫಲ ಕೊಟ್ಟರೂ ಕೊಡಬಹುದು ಎನ್ನಲಾಗುತ್ತಿದೆ. ಇನ್ನು ಟೂಡಾ ಶಶಿಧರ್ ಕೂಡ ಟಿಕೆಟ್ ಆಕಾಂಕ್ಷಿಯೆನ್ನಲಾಗುತ್ತಿದ್ದು, ಕ್ಷೇತ್ರದಲ್ಲಿ ಚಟುವಟಿಕೆಯಿಂದಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ ಪಕ್ಷದ ನಿರ್ಧಾರವೇನು ಎನ್ನಲಾಗದು. ಕಳೆದ ಬಾರಿಯೂ ಮಾಜಿ ಶಾಸಕ ಷಡಕ್ಷರಿಗೆ ಟಿಕೆಟ್ ಕೊಡದೆ ಹೊರಗಿನವರೊಬ್ಬರಿಗೆ ಟಿಕೆಟ್ ಘೋಷಿಸಿತ್ತು. ಕಡೆಗೆ ಸ್ಥಳೀಯರ ಒತ್ತಾಯಕ್ಕೆ ಮಣಿದು ನಿರ್ಧಾರ ಬದಲಿಸಿ, ಷಡಕ್ಷರಿಯವರನ್ನೇ ಕಣಕ್ಕಿಳಿಸಿತ್ತು. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸೊನ್ನೆ ಎಂದು ಕಳೆದ ವರ್ಷ ಡಿ.ಕೆ. ಶಿವಕುಮಾರ್ ಬಹಿರಂಗವಾಗಿಯೇ ಷಡಕ್ಷರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೂ ಸುದ್ದಿಯಾಗಿತ್ತು.

ಇನ್ನು ಜೆಡಿಎಸ್ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಜಿಲ್ಲೆಯ ೧೦ ವಿಧಾನಸಭಾ ಕ್ಷೇತ್ರಗಳ ಪೈಕಿ ೮ಕ್ಕೆ ಈಗಾಗಲೇ ಟಿಕೆಟ್ ಘೋಷಿಸಿರುವ ಜೆಡಿಎಸ್, ಶಿರಾ ಹಾಗೂ ತಿಪಟೂರು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿ ಯಾರೆಂಬುದರ ಗುಟ್ಟು ಬಿಟ್ಟುಕೊಟ್ಟಿಲ್ಲ. ತಿಪಟೂರಿನಲ್ಲಿ ಕಣಕ್ಕಿಳಿಯಲು ಕೆ.ಟಿ. ಶಾಂತಕುಮಾರ್ ಉತ್ಸಾಹ ತೋರಿಸುತ್ತಿದ್ದಾರಾದರೂ, ಪಕ್ಷದ ನಿರ್ಧಾರವೇನೆಂಬುದು ಗೊತ್ತಿಲ್ಲ.

ಕಳೆದ ಮೂರು ಚುನಾವಣೆಗಳನ್ನು ನೋಡಿಕೊಂಡರೆ ಪೈಪೋಟಿ ಬಿ.ಸಿ. ನಾಗೇಶ್ ಮತ್ತು ಷಡಕ್ಷರಿಯ ಮಧ್ಯೆಯೇ ಇದ್ದುದನ್ನು ಗಮನಿಸಬಹುದು.

ನಾಗೇಶ್ ಎದುರಿನ ಸವಾಲುಗಳು

ಶಿಕ್ಷಣ ಸಚಿವರಾಗಿರುವ ನಾಗೇಶ್ ಸುತ್ತ ಹಲವು ವಿವಾದಗಳು ಸುತ್ತಿಕೊಂಡಿವೆ. ಶಿಕ್ಷಣ ಸಚಿವರಾಗಿ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾದ ನಾಗೇಶ್, ಅದಕ್ಕಾಗಿ ರಚಿಸಿದ ಪಠ್ಯಪುಸ್ತಕ ರಚನಾ ಸಮಿತಿ ಅಧ್ವಾನವನ್ನೇ ಸೃಷ್ಟಿಸಿತು. ಅದನ್ನು ಇವರು ಸಮರ್ಥಿಸಿಕೊಂಡು ಓಡಾಡಿದ್ದೂ ಆಯಿತು. ಆರೆಸ್ಸೆಸ್ ವಿಚಾರಧಾರೆಯ ಪಾಠಗಳನ್ನು ತುರುಕಿ, ಅತೀ ಹೆಚ್ಚು ಬ್ರಾಹ್ಮಣರ ಪಠ್ಯಗಳನ್ನು ಸೇರಿಸಿ, ಶೂದ್ರರ, ದಲಿತರ, ಅಲ್ಪಸಂಖ್ಯಾತರ ಪಠ್ಯ ಕೈಬಿಡಲಾಯಿತು. ಮಹಿಳೆಯರನ್ನು ಕೀಳಾಗಿ ಕಾಣುವ, ಬ್ರಾಹ್ಮಣರನ್ನು ಹೊಗಳುವ ಪಠ್ಯಗಳನ್ನು ತುರುಕಲಾಯಿತು. ಬುದ್ಧ, ಬಸವಣ್ಣ, ನಾರಾಯಣ ಗುರು, ಪೆರಿಯಾರ್, ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್‌ರ ಪಠ್ಯ ಕೈಬಿಟ್ಟಿದ್ದು ವಿವಾದಕ್ಕೆಡೆ ಮಾಡಿಕೊಟ್ಟಿತು. ಕಡೆಗೆ ಸಮಿತಿಯನ್ನು ಹಿಂಪಡೆದರಾದರೂ, ಹಿಂಬಾಗಿಲಿಂದ ಎಲ್ಲವನ್ನೂ ಸಮ್ಮತಿಸಲಾಗಿತ್ತು. ಅಷ್ಟಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ಉದ್ದೇಶವಂತೂ ಸಂಘಪರಿವಾರದ ವಿಚಾರವನ್ನು ಶಾಲೆಯೊಳಗೆ ತರುವುದು ಎಂಬುದು ಸ್ಪಷ್ಟವಾಗಿತ್ತು.

ಹಿಜಾಬ್ ವಿಷಯದಲ್ಲಿಯೂ, ಹಿಜಾಬ್ ಧರಿಸಿ ಬಂದರೆ ಶಾಲೆಯೊಳಕ್ಕೆ ಪ್ರವೇಶವಿಲ್ಲ ಎಂದು ಆದೇಶಿಸಿ, ಕಡೆಗೆ ದೊಡ್ಡ ವಿವಾದವೇ ಸೃಷ್ಟಿಯಾಗುವುದಕ್ಕೆ ಕಾರಣರಾದರು. ಆದರೆ ಅದೇ ಶಾಲೆಯೊಳಗೆ ಭಗವದ್ಗೀತೆ ಬೋಧನೆ ತರುವುದಕ್ಕೆ ಅವರು ತೀವ್ರ ಉತ್ಸಾಹ ತೋರಿಸಿದರು.

ಇವೆಲ್ಲ ವಿವಾದಗಳ ನಡುವೆಯೂ, ಜನರ ಕೈಗೆ ಸಿಗುವ ಶಾಸಕ ಎಂಬ ಮೆಚ್ಚುಗೆಯೂ ಅವರ ಬಗ್ಗೆ ಕ್ಷೇತ್ರದಲ್ಲಿ ಇದೆ. ಲಿಂಗಾಯತ ಸಮುದಾಯದವರು ಮಾತ್ರವಲ್ಲದೆ, ಇತರ ಸಣ್ಣಪುಟ್ಟ ಸಮುದಾಯಗಳ ಜನರೂ ಅವರನ್ನು ಬೆಂಬಲಿಸುವುದಕ್ಕೆ ಅವರ ಸರಳತೆ ಕಾರಣ ಎನ್ನಲಾಗುತ್ತದೆ.

ಆದರೆ ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸರಕಾರ ಬಂದಿಲ್ಲವೆಂಬ ಅಸಮಾಧಾನವೂ ಕ್ಷೇತ್ರದಲ್ಲಿ ಇದೆ.

ಒಟ್ಟಾರೆ ತಿಪಟೂರಿನಲ್ಲಿ ಈ ಹಿಂದಿನಂತೆಯೇ ಹಾಲಿ ಶಾಸಕರನ್ನು ಸೋಲಿಸುವ ಪರಿಪಾಠ ಈ ಬಾರಿಯೂ ಮುಂದುವರಿಯಲಿದೆಯೇ ಕಾದುನೋಡಬೇಕು. ನಾಗೇಶ್ ಬಲಕ್ಕೆ ಎಂದಿನಂತೆಯೇ ಎಲ್ಲ ಸಮುದಾಯಗಳು ನಿಲ್ಲುತ್ತವೆಯೇ, ಕಾಂಗ್ರೆಸ್ ಮತ್ತು ಬಿಜೆಪಿ ರಣತಂತ್ರಗಳು ಯಾವ ಲೆಕ್ಕದಲ್ಲಿ ಮತ ಸೆಳೆಯಲಿವೆ ಎಂಬುದರ ಮೇಲೆ ಉಳಿದೆಲ್ಲವೂ ನಿರ್ಧಾರವಾಗಲಿದೆ.

Full View