ರಾಜ್ಯ ಕಂಡ ಪ್ರಬುದ್ಧ ರಾಜಕಾರಣಿ ಧ್ರುವನಾರಾಯಣ್ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ: ಸಿದ್ದರಾಮಯ್ಯ
ದಾವಣಗೆರೆ : ನಗರದ ಬಾಪೂಜಿ ಅತಿಥಿ ಗೃಹದ ಅವರಣದಲ್ಲಿ ಶನಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಅಕಾಲಿಕ ನಿಧನ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಆರ್ ಧ್ರುವನಾರಾಯಣ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನಚರಣೆ ಆಚರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ , ಕೆಪಿಸಿಸಿ ಕಾರ್ಯಾಧ್ಯಕ್ಷ ನಾರಾಯಣ್ ಅವರಿಗೆ 61 ವರ್ಷ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಇದು ಊಹಿಸಲು ಸಾಧ್ಯವಿಲ್ಲದಾಗಿದೆ. ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಬದ್ಧತೆಯಿಂದ ಪಾದರಸದಂತೆ ಕೆಲಸ ಮಾಡುತ್ತಿದ್ದ ಅವರು ನಮ್ಮನ್ನು ಆಗಲಿರುವುದು ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಶಾಸಕರಾಗಿ, ಸಂಸದರಾಗಿ ಉತ್ತಮ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಕೆಲವೇ ಪ್ರಮುಖ ಲೋಕಸಭಾ ಸದಸ್ಯರಲ್ಲಿ ಇವರು ಒಬ್ಬರಾಗಿದ್ದಾರು. ಪಕ್ಷದ ಬಲವರ್ಧನೆಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೂ ಧಣಿವಿಲ್ಲದೆ ದುಡಿಯುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಅವರು ರಾಜ್ಯದಲ್ಲಿಡೆ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದರು. ಚುನಾವಣೆ ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಹ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ಕಂಡ ಪ್ರಭುದ್ದ ರಾಜಕಾರಣಿ ಅವರ ಅಗಲಿಕೆ ಪಕ್ಷಕ್ಕೆ ಅಷ್ಟೇ ಅಲ್ಲ ಸಮಾಜಕ್ಕೆ ಸಹ ನಷ್ಟ. ಅವರ ಅತ್ಮಕ್ಕೆಚಿರಶಾಂತಿ ಸಿಗಲಿ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಾಯಣ್ ಅಕಾಲಿಕ ನಿಧನ ಪಕ್ಷಕ್ಕೆ ದೊಡ್ಡ ಆಘಾತ ತಂದಿದೆ. ಎಂಎಲ್‍ಎಯಾಗಿ ಎಂಪಿಯಾಗಿ ಸಾಕಷ್ಟು ಕೆಲಸ ಮಾಡಿರುವ ಅವರು ಇಂದು ನಮ್ಮೊಂದಿಗೆ ಇಲ್ಲದಿರುವುದು ಬಹಳ ದುಃಖ ತಂದಿದೆ.ಎಲ್ಲಾ ಸಮಾಜದ ಪ್ರೀತಿ ವಿಶ್ವಾಸ ಗಳಿಸಿದ್ದರು. ನಾವು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಜೊತೆಯಲ್ಲಿದ್ದೇವೆ. ಅಪ್ತ ಸ್ನೇಹಿತ ಹಾಗೂ ಪಕ್ಷದ ದೊಡ್ಡ ಶಕ್ತಿಯೇ ಆಗಿದ್ದ ಧ್ರುವನಾರಾಯಣ ಅಗಲಿಕೆ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಹಾಗೂ ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲೆಂದು ಈ ಮೂಲಕ ಕೋರುತ್ತೇನೆ ಎಂದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಶಾಸಕ ಶಾಂತನಗೌಡ, ಜಿಲ್ಲಾಧ್ಯಕ್ಷ ಮಂಜಪ್ಪ, ಡಿ.ಬಸವರಾಜ್, ಗಡಿಗುಡಾಳಮಂಜುನಾಥ, ದಿನೇಶ್ ಕೆ ಶೆಟ್ಟಿ, ಆಯೂಬ್ ಪೈಲ್ವಾನ್, ಚಮನಸಾಬ್, ಮುದೇಗೌಡ್ರು ಗೀರೀಶ್, ಎಸ್.ಮಲ್ಲಿಕಾರ್ಜುನ್, ಬಸವಂತಪ್ಪ ಸೇರಿದಂತೆ ಹಲವರು ಇದ್ದರು.