ಚುನಾವಣೆ ಬಂದಾಗ 'ಪಂಚರತ್ನ' ಎಂದು ಓಡುವ ಪಕ್ಷ ನಮ್ಮದಲ್ಲ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Update: 2023-03-11 11:39 GMT

ಶಿವಮೊಗ್ಗ, ಮಾ.11:ಮಳೆ ಬರುವ ಮೊದಲು ಮೋಡ ಕಾಣುವಂತೆ ಕಾಂಗ್ರೆಸ್‌ಗೆ ಸೋಲಿನ ಭಯದ ಮುನ್ಸೂಚನೆ ಸಿಕ್ಕಿದೆ. ಅದಕ್ಕಾಗಿಯೇ ಇವಿಯಂ ಸರಿಯಿಲ್ಲ ಎಂದು ಹೊಸರಾಗ ಶುರುಮಾಡಿದ್ದಾರೆ ಎಂದು ರಾಷ್ಟ್ರೀಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ಯುವ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ಗೆ ಸೋಲುವ ಮುನ್ಸೂಚನೆ ಸಿಕ್ಕಿದೆ. ಅದಕ್ಕಾಗಿಯೇ ಇವಿಯಂ ಸರಿಯಿಲ್ಲ ಎಂದು ಹೊಸ ರಾಗ ಶುರುಮಾಡಿದ್ದಾರೆ. ಸೋಲು ಬರುವುದು ಇವಿಯಂನಿಂದಲ್ಲ, ಮತದಾರರ ನಿರ್ಧಾರದಿಂದ ಎಂಬುದನ್ನು ಕಾಂಗ್ರೆಸ್ಸಿನವರು ತಿಳಿಯಬೇಕು ಎಂದರು.

ಚುನಾವಣೆ ಹತ್ತಿರ ಬಂದಾಗ ಪಂಚರತ್ನ ಎಂದು ಓಡುವ ಪಾರ್ಟಿ ಬಿಜೆಪಿ ಅಲ್ಲ. ಬೇರೆ ಪಕ್ಷಗಳು ಚುನಾವಣೆಗೆ 2 ತಿಂಗಳು ಇರುವಾಗ ಸುಣ್ಣ ಬಣ್ಣ ಹೊಡೆದು ಒಟ್ಟಾಗುತ್ತವೆ. ಆದರೆ ಬಿಜೆಪಿ ಚುನಾವಣೆ ಇರಲಿ ಬಿಡಲಿ ಜನರ ಮಧ್ಯೆ ಹೋಗಿ ಜನಪರ ಕೆಲಸವನ್ನು ಮಾಡುತ್ತಾ ಇರುತ್ತದೆ ಎಂದರು.

ರಾಜ್ಯದಲ್ಲಿ 130ಕ್ಕೂ ಅಧಿಕ ಸ್ಥಾನ ಪಡೆಯುವುದರ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದ ಅವರು,ಪಂಚವರ್ಷಗಳಿಂದಲೂ ಸಾಮಾಜಿಕ, ಅಭಿವೃದ್ಧಿ ಮಾಡುವ ಪಕ್ಷ ಬಿಜೆಪಿ ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಎಲ್ಲಾ ಮೋರ್ಚಾಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಮಾಡಿ ಡಬಲ್ ಇಂಜಿನ್ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸಬೇಕು. ನಮ್ಮ ಕರ್ತವ್ಯ ಶುರುವಾಗುವುದು ಇನ್ನು ಮೇಲೆ ಎಂದರು.

ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿ ಯುವಕರನ್ನು ಅವಿದ್ಯಾವಂತರನ್ನಾಗಿಸಿ ಬಡವರನ್ನು ಬಡವರಾಗಿಯೇ ಇರುವಂತೆ ಮಾಡಿದ್ದು ಮತ್ತು ಇಡೀ ದೇಶವನ್ನೇ ಕೊಳ್ಳೆಹೊಡೆದಿದ್ದು, ಕಾಂಗ್ರೆಸ್ ಸಾಧನೆ ಅವರಿಂದ ನಾವು ನೈತಿಕತೆಯ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗಲಿದೆ. ಆರುವ ದೀಪ ಜೋರಾಗಿ ಉರಿಯುತ್ತದೆ ಎಂಬಂತೆ ಕಾಂಗ್ರೆಸ್ಸಿಗರು ರಾಹುಲ್‌ಗಾಂಧಿ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ಧಾರೆ. ಬುಡ ಸಮೇತ ಕಾಂಗ್ರೆಸ್‌ನ್ನು ಕಿತ್ತು ಹಾಕುವ ಕೆಲಸ ಜನ ಮಾಡುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ತ್ರಿಬಲ್ ತಲಾಖ್ ಹೊಡೆದುಹಾಕಿ ಮಹಿಳೆಗೆ ಸಮಾನ ಹಕ್ಕು ನೀಡಿ ಸ್ವಾಭಿಮಾನದ ಬದುಕನ್ನು ಕೊಟ್ಟಿದ್ದು ಮೋದಿ ಸರ್ಕಾರ ಎಂದರು.

ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಕುಮಾರ್ ಮಾತನಾಡಿ, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿ ಮಾಡಿದ ಸರ್ಕಾರ ಬಿಜೆಪಿಯದ್ದು, 70 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೇವಲ 8 ವರ್ಷಗಳಲ್ಲಿ ಆಗಿದೆ. ಯಾರು ಕುಂಕುಮ ಕೇಸರಿ ಕಂಡರೆ ಅಲರ್ಜಿ ಎನ್ನುತ್ತಾರೋ ಹಿಂದೂ ವಿರೋಧಿ ನೀತಿ ಅನುಸರಿಸಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಾರೋ ಅವರನ್ನು ದೂರವಿರಿಸಿ ನವ ಮತದಾರರನ್ನು ಆಕರ್ಷಿಸಿ ರಾಷ್ಟ್ರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದರು.

ಬಿಜೆಪಿ ಯುವಮೋರ್ಚಾದ ವತಿಯಿಂದ ಬಡ ಮಹಿಳೆಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ, ಶಾಸಕ ಕೆ.ಬಿ.ಅಶೋಕ್‌ನಾಯ್ಕ್, ಡಿ.ಎಸ್.ಅರುಣ್, ಆಯನೂರು ಮಂಜುನಾಥ್, ಸಂಸದ ಬಿ.ವೈ.ರಾಘವೇಂದ್ರ, ಸಿದ್ಧರಾಮಣ್ಣ, ಜ್ಯೋತಿಪ್ರಕಾಶ್, ಡಾ.ಧನಂಜಯ ಸರ್ಜಿ, ಮೇಯರ್ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕೆ.ಈ.ಕಾಂತೇಶ್, ಲಲಿತಾಗೌಡ, ಸಾಯಿವರಪ್ರಸಾದ್, ಅನೂಪ್‌ಕುಮಾರ್, ನವೀನ್ ಕುಮಾರ್, ದರ್ಶನ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Similar News