ರಸ್ತೆ ಹಾಕ್ಸಿದ್ ದುಡ್ ನಮ್ದು …: ಸಂಸದ ಪ್ರತಾಪ್ ಸಿಂಹಗೆ ನಟ ಪ್ರಕಾಶ್ ರಾಜ್ ತಿರುಗೇಟು

Update: 2023-03-11 13:38 GMT

ಬೆಂಗಳೂರು: ನಾಳೆ (ರವಿವಾರ)  ಉದ್ಘಾಟನೆಯಾಗಲಿರುವ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಫೋಟೊಗಳನ್ನು ಟ್ವಟರ್ ನಲ್ಲಿ ಹಂಚಿಕೊಂಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ''ಇದನ್ನು ಶೇರ್ ಮಾಡಿ'' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ನಟ ಪ್ರಕಾಶ್ ರಾಜ್ ''ರಸ್ತೆ ಹಾಕ್ಸಿದ್ ದುಡ್ ನಮ್ದು …'' ಎಂದು ಹೇಳುವ ಮೂಲಕ ಸಂಸದರ ಕಾಲೆಳೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ''ನೆನಪಿರಲಿ ಪ್ರಜೆಗಳೇ…. ರಸ್ತೆ ಹಾಕ್ಸಿದ್ ದುಡ್ ನಮ್ದು … ನಾಳೆ ಅದ್ರಲ್ಲಿ ಓಡಾಡೋಕೆ TOLL ಕಟ್ಟೋದು ನಾವೆ .. ಇದನ್ನೂ Share ಮಾಡಿ. ಆತ್ಮೀಯ ನಾಗರಿಕರೇ. ಮರೆಯಬೇಡಿ .. ರಸ್ತೆಗಾಗಿ ಖರ್ಚು ಮಾಡಿದ ಹಣ ನಮ್ಮದು ..ಮತ್ತು ನಮ್ಮಿಂದ ಟೋಲ್ ಕೂಡ ಸಹ ಸಂಗ್ರಹಿಸಲಾಗುತ್ತದೆ ...ಇದನ್ನೂ ಹಂಚಿಕೊಳ್ಳಿ ..'' ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ. 

ಪ್ರಧಾನಿ ಮೋದಿ ಅವರು ನಾಳೆ ಮಂಡ್ಯದ ಗೆಜ್ಜಲಗೆರೆಯಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದು, ಅದೇ ದಿನ ಬೃಹತ್ ರೋಡ್‌ಶೋ ನಡೆಸಲಿದ್ದಾರೆ. ಇನ್ನು ಹೈವೇ ನಿರ್ಮಾಣದ ಕ್ರೆಡಿಟ್ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

''ಮೈಸೂರು-ಬೆಂಗಳೂರು ಹೈವೇ ನಿರ್ಮಾಣ ಕಾಂಗ್ರೆಸ್ ಕೊಡುಗೆ'' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದರೆ, ''ಮೈಸೂರು-ಬೆಂಗಳೂರು ಹೈವೇ ಕಾಮಗಾರಿ ಸಂಪೂರ್ಣ ಯಶಸ್ಸು ಪ್ರಧಾನಿ ಮೋದಿಗೆ ಸಲ್ಲಬೇಕು. ಮೋದಿಯನ್ನು ಪ್ರಧಾನಿ ಮಾಡಲು ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಮೈಸೂರು ಬೆಂಗಳೂರು ಹೈವೇ ವಿಚಾರವಾಗಿ ಮಾಜಿ ಸಚಿವ ಮಹದೇವಪ್ಪ ಅವರ ಜೊತೆ ನಾನು ಚರ್ಚಿಸಲು ಸಿದ್ಧ'' ಎಂದು ಮಹದೇವಪ್ಪ ಅವರಿಗೆ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. 

Similar News