×
Ad

ದೇಶ ಉಳಿಸಲು ಮಹಿಳೆಯರು ಪ್ರಧಾನಿ ಮೋದಿ ಬೆಂಬಲಿಸಬೇಕು: MLC ಭಾರತಿ ಶೆಟ್ಟಿ

Update: 2023-03-11 19:09 IST

ಕಡೂರು, ಮಾ.11: ಅನೇಕ ದೇಶಗಳು ಇಂದು ದಿವಾಳಿಯಾಗಿದ್ದು, ಭಾರತ ಆರ್ಥಿಕವಾಗಿ ಸದೃಢವಾಗಿ ನಿಂತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಬಿಜೆಪಿ ಕಡೂರು ಮಂಡಲ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೊರೋನ ನಂತರದಲ್ಲಿ ಅನೇಕ ರಾಷ್ಟ್ರಗಳು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿವೆ. ಆದರೆ ಭಾರತದಲ್ಲಿ ಜನ ಸಾಮಾನ್ಯನ ಬದುಕುವ ರೀತಿಯಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಇದಕ್ಕೆ ಮೋದಿ ಆಡಳಿತವೇ ಕಾರಣ. ಕಾಂಗ್ರೆಸ್ ಪಕ್ಷ ಇದ್ದಿದ್ದರೆ ದೇಶ ದಿವಾಳಿಯಾಗುತ್ತಿತ್ತು ಎಂಬುದನ್ನು ಮಹಿಳೆಯರು ತಿಳಿದುಕೊಳ್ಳಬೇಕು. ದೇಶದ ಮಹಿಳೆ ಜಾಗೃತಳಾಗಿದ್ದು, ದೇಶದ ಭೂಮಿ,ಜಲ,ನೆಲ,ಸಂಪತ್ತು ಉಳಿಸುವ ನಿಟ್ಟಿನಲ್ಲಿ ಮೋದಿ ಅವರನ್ನು ಮಹಿಳೆಯರು ಬೆಂಬಲಿಸಬೇಕಾಗಿದೆ ಎಂದರು.

ಪ್ರಪಂಚದ 25 ರಾಷ್ಟ್ರಗಳ ಸಾಲಿನಲ್ಲಿ ಭಾರತ ಇದೀಗ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ರಾಷ್ಟ್ರದಲ್ಲಿ ಮಹಿಳಾ ಸಂಘಗಳನ್ನು ಗುರುತಿಸಿದ್ದು ನಮ್ಮ ಹೆಮ್ಮೆಯ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು. 2014ರಿಂದ ರಾಜ್ಯದಲ್ಲಿ 6,750 ಕಿಮೀ ರಸ್ತೆ ನಿರ್ಮಾಣವಾಗಿದ್ದು, ಬಿಜೆಪಿ ಆಡಳಿತದಲ್ಲಿ 13.500 ಕಿ.ಮೀ ರಸ್ತೆ ದೇಶಾದ್ಯಂತ ನಿರ್ಮಣವಾಗಿದೆ. ಅದೇ ರೀತಿ ರೈಲ್ವೆ ಇಲಾಖೆಯಲ್ಲಿ ಶೇ.100 ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಿದೆ. ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇದನ್ನು ಮಾಡಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯ ಇತ್ತಾ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಾರಕ್ಕಾಗಿ ಇಬ್ಬರ ಸಹಿ ಇರುವ ಒಂದು ಚೆಕ್ ಹಿಡಿದುಕೊಂಡು ಓಡಾಡುತ್ತಿರುವುದು ವಿಪರ್ಯಾಸ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದ ಅವರು, ನಾಡಿನ ಪ್ರತಿಯೊಬ್ಬ ಮಹಿಳೆಯು ಮೋದಿ ಅವರ ಯೋಜನೆಗಳನ್ನು ತಿಳಿದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಜಾತಿಗಳನ್ನು ಎತ್ತಿಕಟ್ಟಲಾಗುತ್ತಿತ್ತು. ಅವರ ಯೋಜನೆಗಳು ಜಾತಿಗಳಿಗೆ ಸೀಮೀತವಾಗಿದ್ದವು. ಕಾಂಗ್ರೆಸ್ ಸುಳ್ಳಿನ ಕಾರ್ಡ್ ಬಿಡುಗಡೆ ಮಾಡಿದೆ. ರಾಜ್ಯದ ಜನತೆ 'ರಾತ್ರಿಕಂಡ ಬಾವಿಗೆ ಹಗಲು ಬೀಳಲ್ಲ, ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಇವರ ಸುಳ್ಳಿನ ಕಾರ್ಡ್ ಏಕೆ ಬಿಡುಗಡೆಯಾಗಿಲ್ಲ?, ಕಾಂಗ್ರೆಸ್ ಅನ್ಯಾಯದ ತಕ್ಕಡಿಯನ್ನು ಕೈಯಲ್ಲಿ ಇಟ್ಟುಕೊಂಡು ಆಡಳಿತ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಬೆಳ್ಳಿಪ್ರಕಾಶ್, ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ, ಶಿವಮೊಗ್ಗದ ಸುವರ್ಣಾ ಶಂಕರ್ ಮಾತನಾಡಿದರು. ಮುಖಂಡರಾದ ಶಿಲ್ಪಾ ಸುವರ್ಣ, ಸುನೀತಾಜಗದೀಶ್, ಕವಿತಾಲಿಂಗರಾಜು,ರೇಷ್ಮಾಮಧು,ಸವಿತಾರಮೇಶ್,ದೇವಾನಂದ್, ದೇವರಾಜಶೆಟ್ಟಿ, ರವೀಂದ್ರಬೆಳವಾಡಿ ಹಾಗೂ ಜಿಲ್ಲೆಯ ಎಲ್ಲಾ ಮಂಡಲ ಅಧ್ಯಕ್ಷರು ಭಾಗವಹಿಸಿದ್ದರು.

Similar News