SDPI ಕಚೇರಿಗಳ ಮೇಲೆ ದಾಳಿ ಪ್ರಕರಣ: ಕೇಂದ್ರ ಸರಕಾರಕ್ಕೆ ಹೈಕೋರ್ಟ್‍ನಿಂದ ನೋಟಿಸ್ ಜಾರಿ

Update: 2023-03-11 16:39 GMT

ಬೆಂಗಳೂರು, ಮಾ.11: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ(ಎಸ್‍ಡಿಪಿಐ)ಸೇರಿದ ಕಚೇರಿಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಸರಕಾರವನ್ನು ಪಕ್ಷಕಾರರನ್ನಾಗಿಸಲು ಅರ್ಜಿದಾರರಿಗೆ ಸೂಚಿಸಿರುವ ಹೈಕೋರ್ಟ್ ನ್ಯಾಯಪೀಠವು ಭಾರತ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ. 

ಕಚೇರಿಗಳ ಸ್ವತ್ತುಗಳಿಗೆ ಹಾಕಲಾಗಿರುವ ಮೊಹರು(ಸೀಲ್) ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಎಸ್‍ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅರ್ಜಿ ವಿಚಾರಣೆ ಮಾ.17ಕ್ಕೆ ಮುಂದೂಡಿಕೆ ಮಾಡಿದೆ. 

ಅಧಿಕಾರಿಗಳು ಸೀಲ್ ಹಾಕಿರುವ ಕಚೇರಿಗಳು ಬಾಡಿಗೆ ಸ್ಥಳಗಳಾಗಿದ್ದು, ದುರುದ್ದೇಶದಿಂದ ಅವುಗಳನ್ನು ಜಪ್ತಿ ಮಾಡಲಾಗಿದೆ. ಮಂಗಳೂರಿನ ಬೀಗರೆಯಲ್ಲಿರುವ ಎಸ್‍ಡಿಪಿಐ ಮಾಹಿತಿ ಮತ್ತು ಸೇವಾ ಕೇಂದ್ರ, ಬಂಟ್ವಾಳ, ಅದ್ದೂರ್, ಕುದ್ರೋಳಿ, ಪಾವೂರು, ಸುರತ್ಕಲ್‍ನ ಚೊಕ್ಕಬೆಟ್ಟು, ಫರಂಗಿಪೇಟೆ, ಕಾಟಿಪಳ್ಳ, ಬಂಟ್ವಾಳದ ಮಂಚಿ, ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಕಚೇರಿ, ತಾಳಪಾಡಿಯ ಕೆ.ಸಿ. ರಸ್ತೆ, ಮಂಗಳೂರಿನ ಉಲ್ಲಾಳದಲ್ಲಿನ ಕಚೇರಿಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಅವುಗಳಿಗೆ ಸೀಲ್ ಹಾಕಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆ-1951ರ ಅಡಿ ನೋಂದಾಯಿತ ರಾಜಕೀಯ ಪಕ್ಷ ವಾಗಿರುವ ಎಸ್‍ಡಿಪಿಐ, ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಕೆಲ ವಿಭಜನಕಾರಿ ಶಕ್ತಿಗಳ ಕೆಂಗಣ್ಣಿಗೆ ಪಕ್ಷ ಗುರಿಯಾಗಿದ್ದು, ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಸರಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಜತೆ ಎಸ್‍ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ. ಪಿಎಫ್‍ಐ ಮತ್ತದರ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಗೃಹ ಸಚಿವಾಲಯ ಎಸ್‍ಡಿಪಿಐ ಹೆಸರು ಸೇರಿಸಿಲ್ಲ. ಹೀಗಿದ್ದರೂ, ಪ್ರತಿವಾದಿಗಳು ಪಕ್ಷಕ್ಕೆ ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Similar News