ಮೋದಿ ಸರ್ಕಾರ ಟೋಲ್ ಮೂಲಕ 25 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ: ಸುರ್ಜೆವಾಲಾ ಆರೋಪ

Update: 2023-03-11 17:37 GMT

ಬೆಂಗಳೂರು, ಮಾ. 11: ‘ಭ್ರಷ್ಟ ಬಿಜೆಪಿ ಸರಕಾರ ಮುಂಬರುವ ಚುನಾವಣೆಯಲ್ಲಿ ಅವನತಿಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಪೂರ್ಣಗೊಂಡಿರುವ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಯ ಮೂಲಕ ಸಾರ್ವಜನಿಕರ ರಕ್ಷಣೆಯನ್ನು ಪಣಕ್ಕಿಟ್ಟು ಜನರ ಜೀವದ ಜೊತೆ ಚೆಲ್ಲಾಟವಾಗುತ್ತಿದೆ’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ''ಮೋದಿ ಸರ್ಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಮೂಲಕ 25 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ'' ಎಂದು ಆರೋಪಿಸಿದ್ದಾರೆ.  

‘ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಿ ಅಪೂರ್ಣಗೊಂಡಿರುವ ಹೆದ್ದಾರಿ ಉದ್ಘಾಟನೆ ಮಾಡಲಾಗುತ್ತಿದೆ. ಮಾತ್ರವಲ್ಲ ಟೋಲ್ ಹೆಸರಲ್ಲಿ ಕನ್ನಡಿಗರಿಂದ ಹಣ ಸಂಗ್ರಹಿಸಲು ಮುಂದಾಗಿದೆ. ಅಲ್ಲದೆ, ಉದ್ದೇಶಿತ ರಸ್ತೆ ಅವೈಜ್ಞಾನಿಕ ವಿನ್ಯಾಸ, ಮಳೆ ನೀರು ಸುಗಮವಾಗಿ ಹರಿದು ಹೋಗಲು ಅವಕಾಶ ಕಲ್ಪಿಸಿಲ್ಲ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸಿಲ್ಲ. ರೈತರು ತಮ್ಮ ಊರಿನಿಂದ ಪಟ್ಟಣಕ್ಕೆ ಹೋಗಲು ಸಂಪರ್ಕ ರಸ್ತೆ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ದೂರಿದ್ದಾರೆ. 

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 21 ಕಿ.ಮೀ (118 ಕಿ.ಮೀ ಪೈಕಿ)ಉದ್ದದಷ್ಟು ರಸ್ತೆ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿದೆ. ಅಪೂರ್ಣಗೊಂಡಿರುವ ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಗಿಮಿಕ್ ಅಲ್ಲವೇ?, ಬೆಂಗಳೂರು-ಮೈಸೂರು ಹೆದ್ದಾರಿ ಬಹುತೇಕ ಅಪೂರ್ಣಗೊಂಡಿದ್ದು, ಅಂಡರ್ ಪಾಸ್, ಪಾದಚಾರಿ ಮಾರ್ಗ ಸಹಿತ ಈ ರಸ್ತೆಯ ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇಂತಹ ಹೆದ್ದಾರಿ ತರಾತುರಿಯಲ್ಲಿ ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವುದೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.

118ಕಿ.ಮೀ ಉದ್ದದ ಹೆದ್ದಾರಿಯ ಎರಡೂ ಭಾಗಗಳಲ್ಲಿ ಸರ್ವೀಸ್ ರಸ್ತೆ ಅಪೂರ್ಣಗೊಂಡ ಪರಿಣಾಮ ಈ ಹೆದ್ದಾರಿಯ ಭಾಗದ ರೈತರಿಗೆ, ನಿವಾಸಿಗಳಿಗೆ ತೊಂದರೆಯಾಗಿದ್ದು, ಜನಜೀವನಕ್ಕೆ ತೊಡಕಾಗಿದೆ. ಈ  ಹೆದ್ದಾರಿ ಇಂಡಿಯನ್ ರೋಡ್ ಕಾಂಗ್ರೆಸ್ ಗುಣಮಟ್ಟದಲ್ಲಿ ನಿರ್ಮಾಣ ಮಾಡಿಲ್ಲ. ಹಲವೆಡೆಗಳಲ್ಲಿ ಈ ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಅಲ್ಲದೆ ಕಳಪೆ ಸಾಮಾಗ್ರಿ ಬಳಸಿದ್ದು, ಒಟ್ಟಾರೆ ರಸ್ತೆಯ ನಿರ್ಮಾಣ ಯೋಜನೆ ಕಳಪೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

2022ರ ಅಕ್ಟೋಬರ್‍ನಿಂದ ಇಲ್ಲಿಯ ವರೆಗೆ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 122 ಜನರಿಗೆ ಗಂಭೀರ ಗಾಯಗಳಾಗಿವೆ. ಆದರೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಚಾರಿ ಸಮೀಕ್ಷೆ ಪ್ರಕಾರ 2018ರಲ್ಲಿ ಈ ರಸ್ತೆಯಲ್ಲಿ 53 ಸಾವಿರ ಪ್ಯಾಸೆಂಜರ್ ಕಾರ್ ಯುನಿಟ್‍ನಷ್ಟಿದ್ದು ಇದು 2023ಕ್ಕೆ 90 ಸಾವಿರ ತಲುಪುವ ನಿರೀಕ್ಷೆ ಇದೆ. ಇದರ ಜತೆಗೆ ವಾಣಿಜ್ಯ ಉದ್ದೇಶಿತ ವಾಹನಗಳು ಸೇರ್ಪಡೆಯಾಗಲಿವೆ. ಹೆಚ್ಚಿನ ಮೊತ್ತದ ಟೋಲ್ ನಿಗದಿಪಡಿಸಿದ್ದು ಇದು ಜನಸಾಮ್ಯಾನರಿಗೆ ಹೊರೆಯಾಗಲಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಮೋದಿ ಸರಕಾರ ಟೋಲ್ ಸಂಗ್ರಹಿಸುವ ಮೂಲಕವೇ 15 ಸಾವಿರ ಕೋಟಿ ಲಾಭ ಮಾಡಲು ಮುಂದಾಗಿರುವುದೇಕೆ? ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೆಚ್ಚ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 6,420 ಕೋಟಿ ರೂ.ಗಳಷ್ಟಿತ್ತು. ಬಿಜೆಪಿ ಅವಧಿಯಲ್ಲಿ ಇದು 10ಸಾವಿರ ಕೋಟಿ ರೂ.ಗೆ ಹೆಚ್ಚಾಗಿದೆ. ಹೆದ್ದಾರಿಯ ನಿರ್ಮಾಣದ ವೆಚ್ಚ ದುಪ್ಪಟ್ಟಾಗಲು ಕಾರಣವೇನು ಎಂದು ಮೋದಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

Similar News