ಪ್ರತಿ ಸಲ ರಾಜ್ಯಕ್ಕೆ ಬರುವಾಗ ಸುಳ್ಳಿನ ಮೂಟೆಯನ್ನೇ ಹೊತ್ತು ತರುತ್ತಿರುವ ಮೋದಿ: ದಿನೇಶ್ ಗುಂಡೂರಾವ್ ಕಿಡಿ

''ಚುನಾವಣಾ ಸಮಯದಲ್ಲಿ ಕರೆಯದೇ ಬರುವ ಅತಿಥಿ...''

Update: 2023-03-12 10:03 GMT

ಬೆಂಗಳೂರು: ವಿವಿಧ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ನೆರವೇರಿಸಲು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ''ಇಂದು ಮಂಡ್ಯಕ್ಕೆ ಆಗಮಿಸುತ್ತಿರುವ ಮೋದಿಯವರಿಗೆ ಕೆಲವು ಪ್ರಶ್ನೆಗಳು. ಮೋದಿಯವರೇ, ನಿಮಗೆ ಚುನಾವಣಾ ಸಮಯದಲ್ಲಿ ಮಾತ್ರ ಕರ್ನಾಟಕ ನೆನಪಾಗುವುದ್ಯಾಕೆ?  ಬರ ಬಂದಾಗ,ಪ್ರವಾಹ ಬಂದಾಗ ನಿಮಗೆ ಕರ್ನಾಟಕ ನೆನಪಾಗುವುದಿಲ್ಲ. ಆದರೆ ಚುನಾವಣಾ ಸಮಯದಲ್ಲಿ ನೀವು ಕರೆಯದೇ ಬರುವ ಅತಿಥಿ. ನೀವು ಈಗ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಪದೇ ಪದೇ ಬರುತ್ತೀರಿ?'' ಎಂದು ಕಿಡಿಕಾರಿದ್ದಾರೆ. 

''ಮೋದಿಯವರೇ, ಚುನಾವಣಾ ಸಮಯದಲ್ಲಿ ಕರ್ನಾಟಕಕ್ಕೆ ಬರಲು ನಿಮಗೆ ನೂರು ನೆಪಗಳು ಸಿಗುತ್ತವೆ‌. ಆದರೆ ರಾಜ್ಯ ಸಂಕಷ್ಟದಲ್ಲಿರುವಾಗ ನೀವು ಇದ್ದಕ್ಕಿದ್ದಂತೆ ಎಸ್ಕೇಪ್ ಆರ್ಟಿಸ್ಟ್ ಆಗಿಬಿಡ್ತೀರಾ. ಲಾಭ ಇಲ್ಲದೆ ನೀವು ಕರ್ನಾಟಕದತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ. ನೀವೊಂದು ರೀತಿ 'ಶಾಲೆಗೆ ಚಕ್ಕರ್, ಊಟಕ್ಕೆ ಹಾಜರ್' ಎಂಬ ಗಿರಾಕಿಯಂತಲ್ಲವೆ.?'' ಎಂದು ವ್ಯಂಗ್ಯವಾಡಿದ್ದಾರೆ. 

''ಮೋದಿಯವರೇ, ನೀವು ಪ್ರತಿ ಸಲ ಸುಳ್ಳಿನ ಮೂಟೆಯನ್ನೇ ಹೊತ್ತು ತರುತ್ತೀರಿ.ಯಥಾಪ್ರಕಾರ ಆ ಸುಳ್ಳಿನ ಕ್ಯಾಸೆಟ್ ಹಾಕಿ ಜನರನ್ನು‌ ಮೂರ್ಖರನ್ನಾಗಿ ಮಾಡುತ್ತೀರಿ.ನೀವು ಬಿಡುವಿದ್ದಾಗ ನಿಮ್ಮ ಭಾಷಣ ನೀವೇ ಕೇಳಿ,ಆಗ ನಿಮ್ಮ ಮೇಲೆ ನಿಮಗೆ ಜಿಗುಪ್ಸೆ ಬಂದು ಆತ್ಮಹತ್ಯಾ ಭಾವ ಕಾಡುವುದು ಸತ್ಯ‌. ಹೀಗಿರುವಾಗ ಎಷ್ಟು ದಿನ ಜನ ನಿಮ್ಮ ಸುಳ್ಳಿನ ಭಾಷಣ ಕೇಳಬೇಕು.?'' ಎಂದು ಪ್ರಶ್ನೆ ಮಾಡಿದ್ದಾರೆ. 

''ಮೋದಿಯವರೇ,2018ರಲ್ಲಿ ನೀವು ರಾಜ್ಯಕ್ಕೆ ಬಂದಾಗ,ಅಂದಿನ ನಮ್ಮ ಸರ್ಕಾರವನ್ನು 10% ಪರ್ಸೆಂಟ್ ಸರ್ಕಾರ ಎಂದು ಸ್ಪಿಟ್ ಆ್ಯಂಡ್ ರನ್ ಮಾಡಿದ್ರೀ. ಈಗ ನಿಮ್ಮ‌ ಬೊಮ್ಮಾಯಿ ಸರ್ಕಾರದ ಮೇಲೆ 40% ಪರ್ಸೆಂಟ್ ಸರ್ಕಾರ ಎಂಬ ಆರೋಪವಿದೆ. ಆ ಆರೋಪಕ್ಕೆ ಸಾಕ್ಷಿಯೂ ಇದೆ. ಬೊಮ್ಮಾಯಿ ಸರ್ಕಾರದ 40% ಪರ್ಸೆಂಟ್ ಕಮೀಷನ್ ಬಗ್ಗೆ ನೀವು ಬಾಯಿ ಬಿಡುವುದಿಲ್ಲ ಯಾಕೆ.?'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿರೂಪಾಕ್ಷಪ್ಪ ಮೇಲೆ ED ತನಿಖೆ ಯಾಕಿಲ್ಲ‌?: ಮೋದಿಯವರೇ,ಮನೀಷ್ ಸಿಸೋಡಿಯಾ ಮನೆಯಲ್ಲಿ 10 ಸಾವಿರ ನಗದು ಸಿಕ್ಕ ಕಾರಣಕ್ಕೆ ED ತನಿಖೆ ಮಾಡಿಸಿ ಅರೆಸ್ಟ್ ಮಾಡಿಸುತ್ತೀರಿ.ನಿಮ್ಮದೇ ಪಕ್ಷದ ಭ್ರಷ್ಟ ಶಾಸಕ ಮಾಡಾಳು ವಿರೂಪಾಕ್ಷಪ್ಪ‌ ಮನೆಯಲ್ಲಿ KSDlನಲ್ಲಿ ಅಕ್ರಮದ 6.2 ಕೋಟಿ ನಗದು ಸಿಕ್ಕಿದೆ. ಜೊತೆಗೆ ಲೋಕಾಯುಕ್ತ ದಾಳಿಯೂ ಆಗಿದೆ.ಇಷ್ಟಾದರೂ ಮಾಡಾಳು ವಿರೂಪಾಕ್ಷಪ್ಪ ಮೇಲೆ ED ತನಿಖೆ ಯಾಕಿಲ್ಲ‌? ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. 

''ಮೋದಿಯವರೇ, ಬಾಯಿ ಬಿಟ್ಟರೆ ನನ್ನ ಆಡಳಿತದಲ್ಲಿ ಭಾರತ ವಿಶ್ವಗುರು ಆಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತೀರಿ. ಆದರೆ ಹಸಿವಿನ ಸೂಚ್ಯಂಕದಲ್ಲಿ ಭಾರತ, ಬಾಂಗ್ಲಾಕ್ಕಿಂತ ಕಡೆಯಾಗಿದೆ. ಬಡತನ ವ್ಯಾಪಕವಾಗಿದೆ.‌ 2014 ರಲ್ಲಿ ಭಾರತದ ಸಾಲ 63,583 ಲಕ್ಷ ಕೋಟಿ ಇತ್ತು. ಈಗ ಆ ಸಾಲ 1,40 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಬಗ್ಗೆಯಾದರೂ ಬಾಯಿ ಬಿಡುವಿರಾ?''

''ಮೋದಿಯವರೇ, ಬೇರೆ ಪಕ್ಷದ ಕಳಂಕಿತರು ನಿಮ್ಮ‌ ಪಕ್ಷಕ್ಕೆ ಬಂದ ತಕ್ಷಣವೇ ಶುದ್ದಹಸ್ತರಾಗಿಬಿಡುತ್ತಾರೆ. ಕಳಂಕಿತರು ನಿಮ್ಮ ಪಕ್ಷಕ್ಕೆ ಸೇರಿದ ತಕ್ಷಣ ಅವರ ಮೇಲೆ‌ ನಡೆಯುತ್ತಿದ್ದ IT, ED ಮತ್ತು CBI ತನಿಖೆಗಳು‌ ದಿಢೀರ್ ಸ್ಥಗಿತಗೊಳ್ಳುತ್ತವೆ. ಬೇರೆ ಪಕ್ಷದ ಕಳಂಕಿತರು ನಿಮ್ಮ ಪಕ್ಷಕ್ಕೆ ಸೇರಿದ ತಕ್ಷಣ ಶುದ್ಧಹಸ್ತರಾಗುವ ಸೋಜಿಗದ ಬಗ್ಗೆ ದಯವಿಟ್ಟು ಮಾತಾಡುವಿರಾ.?''

''ಮೋದಿಯವರೇ, ನಿಮ್ಮ ಓಡಾಟ-ಒಡನಾಟ ಅದಾನಿ ಜೊತೆಯಲ್ಲೆ. ಸಂಗ್ಯಾ-ಬಾಳ್ಯಾರಂತೆ ನೀವಿಬ್ಬರು. ಈ ಮಧ್ಯೆ ಅದಾನಿ ಆಸ್ತಿ‌ ಸಾವಿರಾರು ಪಟ್ಟು ಏರಿಕೆಯಾಗಿದೆ. ಅದಾನಿ ದಿಢೀರ್ ಶ್ರೀಮಂತರಾಗಲು ನಿಮ್ಮ ಕೊಡುಗೆಯೇನು ಎಂದು ಜನರಿಗೆ ತಿಳಿಯಬೇಕಲ್ಲವೇ.? ಮಂಡ್ಯದ ನೆಲದಲ್ಲಿ ನಿಂತು ನಿಮ್ಮ‌ ಮತ್ತು ಅದಾನಿ‌ ನಡುವಿನ ಸಂಬಂಧದ ಬಗ್ಗೆ ಮಾತಾಡುವ ಧೈರ್ಯ ಮಾಡುವಿರಾ?''

''ಮೋದಿಯವರೇ, ಅಚ್ಛೆದಿನದ ಕನಸು ಬಿತ್ತಿ ನೀವು ಅಧಿಕಾರದ ಗದ್ದುಗೆ ಏರಿದ್ದೀರಿ. ಕಳೆದ 9 ವರ್ಷದಲ್ಲಿ ಜನರಿಗೆ ಯಾವ ಅಚ್ಛೆದಿನ್ ಸಿಕ್ಕಿದೆ ಹೇಳಿ.? 400 ಇದ್ದ ಸಿಲಿಂಡರ್ ಬೆಲೆ ಈಗ 1200. 70 ರೂಪಾಯಿ ಇದ್ದ ಪೆಟ್ರೋಲ್ ಈಗ 103. ಅಡುಗೆ ಎಣ್ಣೆಯ ಬೆಲೆ 80 ರಿಂದ 180. ರಸಗೊಬ್ಬರದ ಬೆಲೆ 450 ರಿಂದ 1400. ಇದ್ಯಾವ ಸೀಮೆಯ ಅಚ್ಛೆದಿನ್ ಮೋದಿಯವರೆ.?''

''ಮೋದಿಯವರೇ, ಬಿಲ್ಡಪ್‌, ಶೋ ಮ್ಯಾನ್‌ಶಿಪ್ ಒಂದು ರೀತಿ ಬಲೂನ್ ಇದ್ದಂತೆ.ಅದು ಯಾವಾಗ ಬೇಕಾದರೂ ಒಡೆದು ಹೋಗಬಹುದು. ಇಮೇಜ್ ಬಿಲ್ಡ್ ಮಾಡುವ ಶೋಕಿ ಬಿಡಿ.ನಿಮ್ಮ ಬಿಲ್ಡಪ್‌ಗೋಸ್ಕರ ಕಳೆದ 9 ವರ್ಷಗಳಲ್ಲಿ ದೇಶದ ಜನರ ಹಿತಾಸಕ್ತಿಯೇ ಬಲಿಯಾಗಿದೆ.ಇನ್ನಾದರೂ ದೇಶದ ಜನರಿಗೆ ಒಳ್ಳೆಯದು ಮಾಡಿ. ದೇಶದ ಜನರೆಂದರೆ ಅಂಬಾನಿ-ಅದಾನಿಯಲ್ಲ ಎಂದು ನೆನಪಿಟ್ಟುಕೊಳ್ಳಿ'' ಎಂದು  ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಮಾಡಿದ್ದಾರೆ. 

Similar News