×
Ad

ಮಂಡ್ಯ ಇಸ್ ಇಂಡಿಯಾ, ಜಿಲ್ಲೆಯನ್ನು ದೇಶದಲ್ಲಿಯೇ ನಂಬರ್ 1 ಮಾಡಲು ಸರ್ಕಾರ ಬದ್ಧ ಎಂದ ಸಿಎಂ ಬೊಮ್ಮಾಯಿ

Update: 2023-03-12 15:54 IST

ಮಂಡ್ಯ, ಮಾರ್ಚ್ 12:  ಮಂಡ್ಯ ಜಿಲ್ಲೆಯನ್ನು ದೇಶದಲ್ಲಿಯೇ ನಂಬರ್ ಒನ್ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರು- ಮೈಸೂರು ಎಕ್ಸ್‍ಪ್ರೆಸ್‍ವೇ, 8479 ಕೋಟಿ ರೂ.ವೆಚ್ಚದ 118 ಕಿಮೀ.ಉದ್ದ ಮೈಸೂರು-ಬೆಂಗಳೂರು ದಶಪಥ ರಸ್ತೆ  ಲೋಕಾರ್ಪಣೆ  ಹಾಗೂ  4128 ಕೋಟಿ ರೂ.ವೆಚ್ಚದ ಮೈಸೂರು - ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಯ 4 ಪ್ಯಾಕೇಜ್  ಹಾಗೂ ಷಟ್ಪಥ ಬೆಂಗಳೂರು- ಮೈಸೂರು ವಿಭಾಗ ರಾಷ್ಟ್ರೀಯ ಹೆದ್ದಾರಿ 275 ರ 2 ಪ್ಯಾಕೇಜ್ ಗಳ  ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಭಾಗವಹಿಸಿ ಮಾತನಾಡಿದರು.

ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. 100 ಕೋಟಿಗೂ ಹೆಚ್ಚು ಅನುದಾನ ನೀಡಿ, ಮುಚ್ಚಿಹೋಗಿದ್ದ ಮಂಡ್ಯದ ಸಕ್ಕರೆ ಕಾರ್ಖಾನೆ ಪುನರಾರಂಭಿಸಿದ್ದು ನಮ್ಮ ಸರ್ಕಾರ. ಈ ವರ್ಷ ಎಥನಾಲ್ ಘಟಕವನ್ನು ಮೈಶುಗರ್ ಕಾರ್ಖಾನೆಯಲ್ಲಿ  ಪ್ರಾರಂಭಿಸಲಾಗುವುದು ಎಂಸು ಭರವಸೆ ನೀಡಿದರು.

''ಮಂಡ್ಯ  ಇಸ್ ಇಂಡಿಯಾ '' :

ವಿ.ಸಿ ನಾಲೆ, ಪೂರಿಗಾಲಿ ಏತ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ  ಒತ್ತು ನೀಡಿದೆ.  ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ 152 ಕಿ.ಮೀ. ರಸ್ತೆಯನ್ನು ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಮಂಡ್ಯದಲ್ಲಿ  ಕಿಸಾನ್ ಸಮ್ಮಾನ್ ಯೋಜನೆಯಡಿ 2, 70, 522 ರೈತರಿಗೆ ಅನುಕೂಲವಾಗಿದೆ.  35 ಸಾವಿರ ಮಕ್ಕಳಿಗೆ ರೈತ ವಿದ್ಯಾ ನಿಧಿ, 4.92 ಲಕ್ಷ ಆಯುಷ್ಮಾನ್ ಕಾರ್ಡುಗಳನ್ನು ವಿತರಿಸಿಸಲಾಗಿದೆ. ಮಂಡ್ಯ  ಇಸ್ ಇಂಡಿಯಾ ಎಂಬ ಕಲ್ಪನೆಯ ಆಧಾರದ ಮೇಲೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮೂವತ್ತು ವರ್ಷಗಳ ಮಂಡ್ಯದ ವ್ಯವಸ್ಥೆ ಬದಲಾಗುತ್ತದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳೂ ವ್ಯಕ್ತಪಡಿಸಿದರು.  

53 ಲಕ್ಷ ರೈತರಿಗೆ 20,000 ಕೋಟಿ ಕಿಸಾನ್ ಸಮ್ಮಾನ್ ಯೋಜನೆ :

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ರೈತರಿಗೆ 20,000 ಕೋಟಿ ರೂ. ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಜನರಿಗೆ ಮಂಜೂರಾಗಿದೆ. 1.25 ಕೋಟಿ ಆಯುಷ್ಮಾನ್ ಕಾರ್ಡ್ ಜನರಿಗೆ ವಿತರಿಸಲಾಗಿದೆ.ರಾಜ್ಯದಲ್ಲಿ 64 ಸಾವಿರ ಕೋಟಿ ರೂ. ವೆಚ್ಚದಲ್ಲಿ 6000 ಕಿ.ಮಿ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಜನಕಲ್ಯಾಣ, ರಾಜ್ಯ ಕಲ್ಯಾಣ, ರಾಷ್ಟ್ರಕಲ್ಯಾಣಗಳನ್ನು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸಾಕಾರಗೊಳಿಸಲಾಗುತ್ತಿದೆ ಎಂದರು.

''ಎಕ್ಸ್ ಪ್ರೆಸ್ವೇ- ಅಭಿವೃದ್ಧಿ ವೇಗದ ಪ್ರತಿಬಿಂಬ''

ಭಾರತದ ಮಿತ್ರದೇಶಗಳು ಪ್ರಧಾನಿ ಮೋದಿಯವರನ್ನು ವಿಶ್ವನಾಯಕರೆಂದು ಒಪ್ಪಿಕೊಂಡಿದ್ದಾರೆ. ಜಿ20ಯ ಅಧ್ಯಕ್ಷತೆ ಭಾರತಕ್ಕೆ ಬಂದಿರುವುದಕ್ಕೆ ಪ್ರಧಾನಿ ಮೋದಿಯವರ ನಾಯಕತ್ವೇ ಕಾರಣ. ಬೆಂಗಳೂರು ಮೈಸೂರು ವಾಹನ ಪ್ರಧಾನಿ ಮೋದಿಯವರ ಅವಧಿಯಲ್ಲಿಯೇ ದಟ್ಟಣೆ ನಿವಾರಿಸುವ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ವೇ ರಸ್ತೆ ನಿರ್ಮಾಣದ ಯೋಜನೆಗೆ ಚಾಲನೆ, ಡಿಪಿಆರ್ ಅನುಮೋದನೆ, 4000 ಕೋಟಿ ರೂ. ಹೆಚ್ಚುವರಿ ಅನುದಾನ  ಮಂಜೂರು ಮಾಡಿ,ಅಡಿಗಲ್ಲು ಹಾಕಿ, ಭೂ ಸ್ವಾಧೀನ ಪ್ರಕ್ರಿಯೆ, ಯೋಜನೆಯ ಸಂಪೂರ್ಣ ಅನುಷ್ಠಾನಗೊಳಿಸಿ, ಲೋಕಾರ್ಪಣೆ ಮಾಡಿರುವುದು, ಪ್ರಧಾನಿ ಮೋದಿಯವರ ಕಾರ್ಯದಕ್ಷತೆ ಹಾಗೂ ಅಭಿವೃದ್ಧಿಯ ವೇಗವನ್ನು ಬಿಂಬಿಸುತ್ತದೆ. ಡಬಲ್ ಇಂಜಿನ್ ಸರ್ಕಾರದಿಂದ ಈ ಯೋಜನೆಯು ಸಾಕಾರಗೊಳಿಸಲಾಗಿದೆ ಎಂದರು.

ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್  ಮೊದಲಾದ ಗಣ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

Similar News