×
Ad

ನಿರ್ಮಲಾ ಯಲಿಗಾರ್ ಅಮಾನತ್ತು ಸಮರ್ಥಿಸಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ

Update: 2023-03-12 17:32 IST

ಬೆಂಗಳೂರು, ಮಾ. 12: ‘ಕಸಾಪ ಎಂದೂ ಸಾವು ಬಾರದ ಚಿರಂಜೀವಿ ಸಂಸ್ಥೆ. ಇಂತಹ ಸಂಸ್ಥೆಯ ವಿರುದ್ಧ ನಿರ್ಮಲಾ ಯಲಿಗಾರ್ ತಮ್ಮ ಸಿಬ್ಬಂದಿಗಳ ಜೊತೆಗೆ ಮೌನ ಆಚರಣೆ ಮಾಡುವ ಮೂಲಕ ಸಮಸ್ತ ಕನ್ನಡಿಗರು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಕಸಾಪಕ್ಕೆ ಅವಮಾನ ಮಾಡಿದವರ ವಿರುದ್ಧ ಮೌನ ವಹಿಸುವ ಪ್ರಮೇಯವೇ ಇಲ್ಲ’ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಕಸಾಪ ಭಿನ್ನಾಭಿಪ್ರಾಯಗಳನ್ನು ಸದಾ ಗೌರವಿಸುತ್ತಲೇ ಬಂದಿದೆ. ಸಲಹೆ-ಸೂಚನೆ ನೀಡಲು ಇಲ್ಲಿ ಸ್ವಾಗತವಿದೆ. ಆದರೆ, ಪ್ರತಿಭಟನೆಯ ರೀತಿ ಸಮರ್ಪಕವಾಗಿರಬೇಕು. ಇದರಲ್ಲಿ ಯಾವುದೇ ವೈಯಕ್ತಿಕ  ಹಿತಾಸಕ್ತಿ ಇಲ್ಲ’ ಎಂದು ನಿರ್ಮಲಾ ಅಮಾನತ್ತು ಕ್ರಮವನ್ನು ಸಮರ್ಥಿಸಿದರು.

‘ಭಾಷೆ, ನಾಡು-ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿ ರಕ್ಷಣೆಯ ಜವಾಬ್ದಾರಿ ಹೊಂದಿದ ಕನ್ನಡಿಗರ ಸ್ವಾಭಿಮಾನದ ಪರಿಷತ್ತಿಗೆ ಅವಮಾನ ಮಾಡಿದವ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಯಾವುದೇ ವೈಯಕ್ತಿಕ ಅಥವಾ ಇನ್ನಾವುದೋ ಕಾರಣಕ್ಕೆ ಅಲ್ಲ. ಪ್ರಪಂಚದಲ್ಲಿ ಯಾವ ಗಿಡಕ್ಕೆ ಹಣ್ಣು ಬಿಡುವುದೋ ಅದಕ್ಕೆ ಕಲ್ಲು ಹೊಡೆಯುವವರೇ ಜಾಸ್ತಿ ಎಂದು ಹೇಳಿದರು.

‘ಸತ್ಯ ಸಂಗತಿಗಳನ್ನು ಮರೆಮಾಚಿ ಅನಾವಶ್ಯಕ ಪ್ರಚಾರ-ಅನುಕಂಪದ ಗೀಳನ್ನು ಮುಂದಿಟ್ಟುಕೊಳ್ಳುವವರ ವಿರುದ್ಧ ಸುಮ್ಮನೆ ಕುಳಿತರೆ ಇದು ಕನ್ನಡಕ್ಕೆ ಮಾಡುವ ಅನ್ಯಾಯವಾದಂತೆ. ಸತ್ಯಾಂಶ ಮರೆಮಾಚುವ, ಸುಳ್ಳುಗಳನ್ನೇ ಸತ್ಯವೆಂದು ಸಾಧಿಸುವ ಪ್ರವೃತ್ತಿ ಇಲ್ಲಿ ಕಂಡು ಬರುತ್ತಿದ್ದು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಬದ್ದವಾಗಿರುವ ಕಸಾಪ ಬೆದರಿಕೆಗಳಿಗೆ ಜಗ್ಗುವುದಿಲ್ಲ’ ಎಂದು ಅವರು ವಿವರಣೆ ನೀಡಿದರು.

Similar News