×
Ad

ರೌಡಿ ಶೀಟರ್‌ ಫೈಟರ್‌ ರವಿಗೆ ಕೈಮುಗಿದ ಮೋದಿ ಫೋಟೊ ವೈರಲ್: ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್

Update: 2023-03-12 21:01 IST

ಮಂಡ್ಯ: ಫೈಟರ್‌ ರವಿ ಎಂಬ ರೌಡಿ ಶೀಟರ್‌ ನ ಎದುರು ಪ್ರಧಾನಿ ನರೇಂದ್ರ ಮೋದಿ ಅವರು ಕೈಮುಗಿದು ನಿಂತಿರುವ ಚಿತ್ರಕ್ಕೆ ಕರ್ನಾಟಕ ಕಾಂಗ್ರೆಸ್‌ ಆಕ್ಷೇಪ ಎತ್ತಿದೆ. 

ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌, ರೌಡಿ ಶೀಟರ್‌ ಎದುರು ಪ್ರಧಾನಿ ಕೈಮುಗಿದು ನಿಂತಿರುವುದು ಪ್ರಧಾನಿ ಹುದ್ದೆಗೆ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

“ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು.” ಎಂದು ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿದೆ. 

ಪ್ರಧಾನಿ ಕಾರ್ಯಕ್ರಮಕ್ಕೆ ಫೈಟರ್‌ ರವಿ ಸ್ವಾಗತ ಕೋರುವ ಬಗ್ಗೆ ಪತ್ರಿಕಾ ಜಾಹಿರಾತು ನೀಡಿರುವ ಬಗ್ಗೆಯೂ ಕಾಂಗ್ರೆಸ್‌ ಟೀಕಿಸಿದೆ. ಪತ್ರಿಕಾ ಜಾಹಿರಾತನ್ನು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಮೋದಿಯವರೆಂದರೆ ಕಳ್ಳರಿಗೆ, ಸುಳ್ಳರಿಗೆ, ವಂಚಕರಿಗೆ, ಭ್ರಷ್ಟರಿಗೆ, ರೌಡಿಗಳಿಗೆ ಭಲೇ ಅಚ್ಚುಮೆಚ್ಚು! #BJPRowdyMorcha ವತಿಯಿಂದ ಮೋದಿಗೆ ಭಾರಿ ಸ್ವಾಗತವಿದೆ! ನರೇಂದ್ರ ಮೋದಿ ಅವರೇ, ಬಿಜೆಪಿ  ಪಕ್ಷದ ರೌಡಿ ಮೋರ್ಚಾ ಯಾವಾಗ ಉದ್ಘಾಟಿಸುವಿರಿ? ಯಾವಾಗ ಮಚ್ಚು, ಲಾಂಗುಗಳನ್ನು ಪಕ್ಷದ ಚಿಹ್ನೆಯಾಗಿ ಪಡೆಯುವಿರಿ?” ಎಂದು ಪ್ರಶ್ನಿಸಿದೆ.

Similar News